ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

7

ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

Published:
Updated:

ಬೆಂಗಳೂರು: ಕಾನೂನು ವಿದ್ಯಾರ್ಥಿನಿಯೊಬ್ಬರ ಮೇಲೆ ಏಳೆಂಟು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಗರದ ಜ್ಞಾನಭಾರತಿ ಆವರಣದಲ್ಲಿ ಶನಿವಾರ ರಾತ್ರಿ ನಡೆದಿದೆ.ಈ ಸಂಬಂಧ ನೇಪಾಳ ಮೂಲದ ಯುವತಿ ದೂರು ನೀಡಿದ್ದಾರೆ. 21 ವರ್ಷದ ಆಕೆ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ ದ್ವಿತೀಯ ವರ್ಷದಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದು, ಜ್ಞಾನಭಾರತಿ ಆವರಣದಲ್ಲಿರುವ ಹಾಸ್ಟೆಲ್‌ನಲ್ಲಿ ವಾಸವಾಗಿದ್ದಾರೆ.`ಶನಿವಾರ ರಾತ್ರಿ ತನ್ನ ಸ್ನೇಹಿತ ಚೇತನ್ (ಹೆಸರು ಬದಲಾಯಿಸಲಾಗಿದೆ) ಜತೆ ಜ್ಞಾನಭಾರತಿ ಆವರಣದಲ್ಲಿ ಮಾತನಾಡುತ್ತಿದ್ದಾಗ, ಏಳೆಂಟು ಮಂದಿ ಅಪರಿಚಿತರು ನಮ್ಮನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದರು. ಚೇತನ್‌ಗೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ, ಆತನಿಂದ ಹಣ, ಐಪ್ಯಾಡ್ ಕಿತ್ತುಕೊಂಡು ನನ್ನನ್ನು ಕರೆದೊಯ್ದರು~ ಎಂದು ಯುವತಿ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಗಾಯಗೊಂಡ ಚೇತನ್, ಆವರಣದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಘಟನೆ ಬಗ್ಗೆ ತಿಳಿಸಿದ್ದಾರೆ. ವಿಷಯ ತಿಳಿದ ಪೊಲೀಸರು ಯುವತಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಮಧ್ಯರಾತ್ರಿ 12.30ಕ್ಕೆ ಆ ಯುವತಿ ಚೇತನ್‌ಗೆ ಕರೆ ಮಾಡಿ `ಆರೋಪಿಗಳು ಸುಮಾರು ಎರಡು ಕಿಲೋಮೀಟರ್ ದೂರದವರೆಗೆ ನನ್ನನ್ನು ಎಳೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದರು. ನಂತರ ನನ್ನನ್ನು ಹಾಸ್ಟೆಲ್ ಬಳಿ ಬಿಟ್ಟು ಪರಾರಿಯಾದರು~ ಎಂದು ಹೇಳಿದಳು.

 ಘಟನೆ ಸಂಬಂಧ ಅತ್ಯಾಚಾರ ಪ್ರಕರಣ ದಾಖಲಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.`ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ. ಭಾನುವಾರ ಬೆಳಿಗ್ಗೆ ಯುವತಿಯನ್ನು ವಾಣಿ ವಿಲಾಸ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ. ಆಕೆ ಗೊಂದಲದ ಹೇಳಿಕೆಗಳನ್ನು ನೀಡುತ್ತಿದ್ದು, ವೈದ್ಯರ ವರದಿ ಬಂದ ನಂತರವಷ್ಟೇ ಪ್ರಕರಣದ ಸತ್ಯಾಸತ್ಯತೆ ತಿಳಿಯಲಿದೆ~ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್. ಸಿದ್ದರಾಮಪ್ಪ `ಪ್ರಜಾವಾಣಿ~ಗೆ ತಿಳಿಸಿದರು.   ಚೇತನ್ ನಗರದ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ದುಷ್ಕರ್ಮಿಗಳು ನಡೆಸಿದ ಹಲ್ಲೆಯಿಂದ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.ಅಸುರಕ್ಷಿತ ಜ್ಞಾನಭಾರತಿ ಆವರಣ

ನಗರದ ಜ್ಞಾನಭಾರತಿ ಆವರಣ ಅಸುರಕ್ಷಿತ ವಲಯ ಎಂಬುದು ಶನಿವಾರ ರಾತ್ರಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಿಂದ ಮತ್ತೊಮ್ಮೆ ಸಾಬೀತಾಗಿದೆ. ಜ್ಞಾನಭಾರತಿ ಆವರಣದಲ್ಲಿ ಅತ್ಯಾಚಾರ ಸೇರಿದಂತೆ ಸರಗಳವು, ಹಲ್ಲೆ, ದರೋಡೆ, ಕೊಲೆ ಪ್ರಕರಣಗಳು ನಡೆಯುತ್ತಲೇ ಇವೆ. ಕಳೆದ ಸೆಪ್ಟೆಂಬರ್ 26ರಂದು ಜ್ಞಾನಭಾರತಿ ಆವರಣದಲ್ಲಿ ದುಷ್ಕರ್ಮಿಗಳು ದಂಪತಿಯನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ದರೋಡೆ ನಡೆಸಿದ್ದ ಘಟನೆ ನಡೆದಿತ್ತು. ಇದಕ್ಕೂ ಹಿಂದೆ ಅನೇಕ ದರೋಡೆಗಳು ಇಲ್ಲಿ ನಡೆದಿವೆ.ಟ್ಯಾಕ್ಸಿ ಚಾಲಕರ ಗುಂಪೊಂದು ಕಟ್ಟಡ ಕಾರ್ಮಿಕ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಘಟನೆ 2005ರ ಎಪ್ರಿಲ್‌ನಲ್ಲಿ ನಡೆದಿತ್ತು. 2003ರ ಜನವರಿಯಲ್ಲಿ ಅಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುವ ಮುನ್ನಾ ದಿನ ಜ್ಞಾನಭಾರತಿ ಆವರಣದಲ್ಲಿ ಸುಟ್ಟ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿ ಭಾರಿ ಸಂಚಲನ ಉಂಟಾಗಿತ್ತು.ಜ್ಞಾನಭಾರತಿ ಆವರಣದ ಒಂದು ಸಾವಿರ ಎಕರೆಗೂ ಹೆಚ್ಚು ಜಾಗದಲ್ಲಿ ಮರ ಗಿಡಗಳು ಬೆಳೆದಿದ್ದು, ಅಡಗಿಕೊಂಡು ದುಷ್ಕೃತ್ಯಗಳನ್ನು ಎಸಗಲು ದುಷ್ಕರ್ಮಿಗಳಿಗೆ ಇದು ಸಹಕಾರಿಯಾಗಿದೆ. ಜ್ಞಾನಭಾರತಿ ಆವರಣಕ್ಕೆ ಸುತ್ತಲೂ ಸಮರ್ಪಕವಾಗಿ ಕಾಂಪೌಂಡ್ ಅಥವಾ ಮುಳ್ಳುತಂತಿಯ ಬೇಲಿ ಇಲ್ಲದೇ ಇರುವುದು ದುಷ್ಕರ್ಮಿಗಳು ಯಾವುದೇ ಅಡೆತಡೆಯಿಲ್ಲದೇ ಇಲ್ಲಿ ದುಷ್ಕೃತ್ಯಗಳನ್ನು ಎಸಗಿ ಪರಾರಿಯಾಗಲು ಅನುಕೂಲವಾಗಿದೆ.ಜ್ಞಾನಭಾರತಿ ಆವರಣಕ್ಕೆ ಹಲವು ಕಡೆಗಳಲ್ಲಿ ಪ್ರವೇಶ ದ್ವಾರಗಳಿದ್ದು, ಬೆಳಿಗ್ಗೆ 5.30ರಿಂದ ರಾತ್ರಿ 9 ಗಂಟೆಯವರೆಗೆ ಮಾತ್ರ ಈ ಪ್ರವೇಶ ದ್ವಾರಗಳನ್ನು ತೆಗೆಯುವಂತೆ ನಿಯಮ ರೂಪಿಸಲಾಗಿದೆ. ಆದರೆ, ಇದರಿಂದಲೂ ಯಾವುದೇ ಪ್ರಯೋಜನವಾಗುತ್ತಿಲ್ಲ.ಜ್ಞಾನಭಾರತಿ ಪೊಲೀಸ್ ಠಾಣೆಯ ವ್ಯಾಪ್ತಿ ಹೆಚ್ಚಾಗಿದ್ದು, ಇದರಿಂದ ಪೊಲೀಸರು ಸಮರ್ಪಕವಾಗಿ ಕೆಲಸ ಮಾಡಲಾಗುತ್ತಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಅನ್ನಪೂರ್ಣೇಶ್ವರಿನಗರದಲ್ಲಿ ಹೊಸದಾಗಿ ಒಂದು ಪೊಲೀಸ್ ಠಾಣೆಯನ್ನು ನಿರ್ಮಿಸುವಂತೆ ಗೃಹ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಭಾಗಕ್ಕೆ ಮತ್ತೊಂದು ಪೊಲೀಸ್ ಠಾಣೆ ಬಂದರೆ ಕೃತ್ಯಗಳನ್ನು ತಡೆಯಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೇರಣೆಯಿಂದ ನಡೆಯುವ ಕೃತ್ಯ

`ಸಿನಿಮಾ ಹಾಗೂ ಟಿವಿ ಚಾನೆಲ್‌ಗಳಲ್ಲಿ ಬಿತ್ತರವಾಗುವ ಅತ್ಯಾಚಾರದ ದೃಶ್ಯಗಳಿಂದ ಉಂಟಾಗುವ ಪ್ರೇರಣೆಯಿಂದ ಸಾಮೂಹಿಕ ಅತ್ಯಾಚಾರಗಳು ನಡೆಯುತ್ತವೆ. ಸಾಮೂಹಿಕವಾಗಿ ಅತ್ಯಾಚಾರ ಎಸಗುವುದರಿಂದ ತಪ್ಪನ್ನು ಮತ್ತೊಬ್ಬರ ಮೇಲೆ ಹೊರಿಸಬಹುದು ಎಂಬ ಮನೋಭಾವವೂ ಸಾಮೂಹಿಕ ಅತ್ಯಾಚಾರಗಳಿಗೆ ಕಾರಣ. ಮಹಿಳೆಯರ ಬಗ್ಗೆ ಸಮಾಜದಲ್ಲಿರುವ ಅನಾದರ ಹಾಗೂ ಲಿಂಗ ತಾರತಮ್ಯವೂ ಅತ್ಯಾಚಾರಗಳು ನಡೆಯಲು ಕಾರಣ. ಅತ್ಯಾಚಾರ ಮಾಡಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಉದ್ಧಟತನವೂ ಅತ್ಯಾಚಾರಕ್ಕೆ ಪ್ರೇರಕವಾಗುತ್ತದೆ~

 -ಡಾ.ಅ.ಶ್ರೀಧರ್,  ಮನೋವೈದ್ಯ

ಗಂಭೀರವಾಗಿ ಪರಿಗಣಿಸಬೇಕು

`ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಅತ್ಯಾಚಾರಗಳನ್ನು ತಡೆಯುವ ಹಾಗೂ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವ ಸಂಬಂಧ ನಗರ ಪೊಲೀಸರ ಮೇಲೆ ಒತ್ತಡ ತರಲಾಗುತ್ತಿದೆ. ಅತ್ಯಾಚಾರ ಪ್ರಕರಣಗಳ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಈ ಸಂಬಂಧ ಕಾನೂನು ಅನುಷ್ಠಾನದಲ್ಲಿ ಇರುವ ಲೋಪಗಳನ್ನು ಸರಿಪಡಿಸಬೇಕು. ಬೆಂಗಳೂರು ನಗರದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಹೀಗಾಗಿ ನಗರಕ್ಕೆ ಪ್ರತ್ಯೇಕವಾದ ಮಹಿಳಾ ಸಹಾಯ ಕೇಂದ್ರ ಸ್ಥಾಪನೆಯ ಅಗತ್ಯವಿದೆ~

 -ಮಂಜುಳಾ,  ಅಧ್ಯಕ್ಷರು, ರಾಜ್ಯ ಮಹಿಳಾ ಆಯೋಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry