ಮಂಗಳವಾರ, ಮೇ 24, 2022
31 °C

ವಿದ್ಯಾರ್ಥಿ ಕೈಯಲ್ಲಿ ಅರಳಿದ ನಾಯಕರು

ನಾಗೇಂದ್ರ ಖಾರ್ವಿ Updated:

ಅಕ್ಷರ ಗಾತ್ರ : | |

ಕಾರವಾರ: ಕಳೆದವಾರ ತಾಲ್ಲೂಕಿನ ಚಿತ್ತಾಕುಲದ ಶಿವಾಜಿ ಪದವಿಪೂರ್ವ ಕಾಲೇಜಿನ ಪ್ರತಿಭೆಗಳ ಅನಾವರಣ ಆಯಿತು. ವಿದ್ಯಾರ್ಥಿಗಳ ಕಲಾ ಪ್ರತಿಭೆಗಳಿಗೆ ಮನಸೋಲದವರೇ ಇರಲಿಲ್ಲ. ಅಷ್ಟೊಂದು ಅದ್ಭುತವಾಗಿದ್ದ ಆ ರಂಗೋಲಿ ನೋಡುಗರನ್ನು ಸೆಳೆದುಕೊಂಡಿತು.ವರ್ಷಂಪ್ರತಿ ಶಿವಾಜಿ ಪ್ರೌಢಶಾಲೆಯಲ್ಲಿ ರಂಗೋಲಿ ಹಾಕುವ ಸ್ಪರ್ಧೆ ನಡೆಯುತ್ತದೆ. ಆದರೆ, ಈ ಬಾರಿ ತುಸು ಹೆಚ್ಚಿನ ಉತ್ಸಾಹದಿಂದಲೇ ಪ್ರಾಚಾರ್ಯ ಪಿ.ಕೆ.ಚಾಪಗಾಂವಕರ್ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾಲೇಜಿನ ಪ್ರತಿಭೆಗಳಿಗೆ ಪ್ರೋತ್ಸಾಹ ಸಿಗಲಿ ಎಂದು ಸ್ಥಳೀಯ ಕಲಾವಿದರಿಗೂ ರಂಗೋಲಿ ಹಾಕಲು ಅವಕಾಶ ನೀಡಿದ್ದರು.ಚಿತ್ರನಟರ, ರಾಜಕೀಯ ನಾಯಕರ, ಸಾಮಾಜಿಕ ಕಾರ್ಯಕರ್ತರ, ಧರ್ಮಗುರುಗಳ, ಪೊಲೀಸ್ ಅಧಿಕಾರಿಗಳ ಭಾವಚಿತ್ರಗಳನ್ನು ನೆಲದಮೇಲೆ ರಂಗೋಲಿಯಲ್ಲಿ ಸೆರೆ ಹಿಡಿಯಲಾಗಿತ್ತು. ಈ ಕಲೆ ಪ್ರೇಕ್ಷಕರು ಅಬ್ಬಾ ಎಂದು ಹುಬ್ಬೇರಿಸುವಂತೆ ಮಾಡಿತು. ಎಲ್ಲರೂ ವಿದ್ಯಾರ್ಥಿಗಳ ಕಲಾ ಪ್ರತಿಭೆಗೆ ಶಹಭಾಸ್‌ಗಿರಿ ನೀಡಿದರು.ಚಿತ್ರನಟ ಅಜೇಯ ದೇವಗನ್, ಹೃತಿಕ್ ರೋಶನ್, ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ರವಿಶಂಕರ ಗುರೂಜಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ನಿವೃತ್ತ ಐಪಿಎಸ್ ಅಧಿಕಾರಿ ಕಿರಣ ಬೇಡಿ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ಯೋಗಗುರು ಬಾಬಾ ರಾಮದೇವ್ ಅವರ ಭಾವಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸಲಾಗಿತ್ತು.ರಂಗೋಲಿಗಳು ಒಂದನ್ನೊಂದು ಮೀರಿಸುವಂತಿದ್ದವು. ರಂಗೋಲಿಗಳಲ್ಲಿ ಕೊಂಕು ಹುಡುಕುವಂತಿರಲಿಲ್ಲ. ಅಷ್ಟು ಅಚ್ಚುಕಟ್ಟಾಗಿ ರಂಗೋಲಿಗಳು ಮೂಡಿಬಂದಿದ್ದವು. ಶಿವಾಜಿ ಕಾಲೇಜಿನ ವಿದ್ಯಾರ್ಥಿಗಳ ಕಲಾಶ್ರೀಮಂತಿಕೆಗೆ ಮರುಳಾಗದವರೇ ಇರಲಿಲ್ಲ.ಸತತ ನಾಲ್ಕೈದು ಗಂಟೆಗಳ ಕಾಲ ಶ್ರಮಪಟ್ಟು ವಿದ್ಯಾರ್ಥಿಗಳು ಈ ರಂಗೋಲಿಗಳನ್ನು ಹಾಕಿದ್ದರು. ತಮ್ಮ ಸಹಪಾಠಿಗಳ ಕಲೆಗಳನ್ನು ನೋಡಿ ಇತರೆ ವಿದ್ಯಾರ್ಥಿಗಳು ಖುಷಿಪಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.