ವಿದ್ಯಾರ್ಥಿ ನಿಲಯಕ್ಕೆ ರೂ 10 ಲಕ್ಷ ಅರ್ಪಣೆ

ಭಾನುವಾರ, ಮೇ 26, 2019
22 °C

ವಿದ್ಯಾರ್ಥಿ ನಿಲಯಕ್ಕೆ ರೂ 10 ಲಕ್ಷ ಅರ್ಪಣೆ

Published:
Updated:

ಹುಬ್ಬಳ್ಳಿ: ಗುರುಕಾಣಿಕೆಯಾಗಿ ಭಕ್ತರು ನೀಡಿದ ಹಣದಿಂದ ಒಂದಂಶವನ್ನು ನಗರದಲ್ಲಿ ನಿರ್ಮಿಸಲಾಗುವ ಶ್ರೀರಾಮ ವಿದ್ಯಾರ್ಥಿ ನಿಲಯಕ್ಕೆ ಉತ್ತರಾದಿ ಮಠಾಧೀಶರಾದ ಸತ್ಯಾತ್ಮ ತೀರ್ಥ ಶ್ರೀಗಳು ಅರ್ಪಿಸಿದರು.ನಗರದ ಉತ್ತರಾದಿ ಮಠದಲ್ಲಿ 50 ದಿನ ಚಾತುರ್ಮಾಸ ಅನುಷ್ಠಾನ ಮಾಡಿದ ಶ್ರೀಗಳಿಗೆ ಭಾನುವಾರ ರಾತ್ರಿ ನಡೆದ ಸಮಾರಂಭದಲ್ಲಿ ಚಾತುರ್ಮಾಸ ಸಮಿತಿಯ ಪರವಾಗಿ 25 ಲಕ್ಷ ರೂಪಾಯಿ ಗುರುಕಾಣಿಕೆಯಾಗಿ  ಸಮರ್ಪಿಸಲಾಯಿತು. ಇದರಿಂದ ಹತ್ತು ಲಕ್ಷ ರೂಪಾಯಿ ವಿದ್ಯಾರ್ಥಿ ನಿಲಯಕ್ಕೆ ನೀಡುವುದಾಗಿ ಶ್ರೀಗಳು ಘೋಷಿಸಿದರು.ಈ ಸಂದರ್ಭದಲ್ಲಿ ಪ್ರವಚನ ನೀಡಿದ ಶ್ರೀಗಳು, `ಜನರು ಬಹಳಷ್ಟು ಸಮಯ, ಹಣ ಹಾಗೂ ಶಕ್ತಿಯನ್ನು ವ್ಯಯ ಮಾಡಿ ದೇವರ ಸೇವೆ ಅಥವಾ ಸತ್ಕಾರ್ಯವನ್ನು ಮಾಡುತ್ತಾರೆ. ಹೀಗೆ ಮಾಡಿದ ಕೆಲಸವನ್ನು ಕೊನೆಗೆ ಭಗವಂತನಿಗೆ ಸಮರ್ಪಿಸಿದರೆ ಪುಣ್ಯ ಲಭಿಸುತ್ತದೆ. ಅದನ್ನು ಮರೆತರೆ ಎಲ್ಲವೂ ವ್ಯರ್ಥ. ದೇವರಿಗೆ ಸಮರ್ಪಿಸದ ಸತ್ಕಾರ್ಯದ ಪುಣ್ಯ ಸ್ಥಿರವಲ್ಲ~ ಎಂದು ಹೇಳಿದರು.`ಭಗವಂತನದು ವಿಚಿತ್ರ ವ್ಯಾಪಾರ. ಅಂತರ್ಯಾಮಿಯಾಗಿ ತಾನೇ ಎಲ್ಲವನ್ನೂ ಮಾಡಿ, ಮಾಡಿಸಿ ನಮಗೆ ಅದರ ಫಲವನ್ನು ಕೊಡುತ್ತಾನೆ. ಭಗವಂತ ನಮ್ಮಿಂದ ಬಯಸುವುದು ಇಷ್ಟೇ. ಹೀಗಾಗಿ ಯಾವುದೇ ಕಾರ್ಯವನ್ನು ನಾನು ಮಾಡಿದೆ ಎಂಬ ಅಹಂಕಾರವಿರಬಾರದು. ಭಕ್ತಿ-ಶ್ರದ್ದೆಯಿಂದ ಕರ್ಮಗಳನ್ನು ಮಾಡಬೇಕು. ಇದರಿಂದ ನಾವು ಮಾಡುವ ನಿತ್ಯ ಕರ್ಮಗಳಿಗೂ ಒಳ್ಳೆಯ ಫಲ ಲಭಿಸುತ್ತದೆ~ ಎಂದು ಅವರು ಹೇಳಿದರು.`ಹುಬ್ಬಳ್ಳಿಯ ಚಾತುರ್ಮಾಸ್ಯದಲ್ಲಿ ಆಬಾಲವೃದ್ಧರಾದಿಯಾಗಿ ಎಲ್ಲರೂ ಯಾವ ಪ್ರತಿಫಲಾಪೇಕ್ಷೆಯಿಲ್ಲದೆ ಒಂದೇ ಮನಸ್ಸಿನಿಂದ ಭಗವಂತನ ಸೇವೆ ಮಾಡಿದ್ದಾರೆ. ಅನ್ನದಾನದ ಜೊತೆಗೆ ಜ್ಞಾನಯಜ್ಞ, ಶಾಸ್ತ್ರ ಶ್ರವಣ ಮಾಡಿದ್ದಾರೆ.ಇದರಿಂದ ಎಲ್ಲರಿಗೂ ಕಲ್ಯಾಣವಾಗುತ್ತದೆ~ ಎಂದರು.`ಚಾತುರ್ಮಾಸದ ಸಂದರ್ಭದಲ್ಲಿ ಕೇಳಿದ್ದನ್ನು ಮನನ ಮಾಡಿ, ದೃಢಭಕ್ತಿಯಿಂದ ಶ್ರವಣ ಮಾಡಿ ಶುದ್ಧವಾದ ಉತ್ತಮ ಜೀವನ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಯುವಕ-ಯುವತಿಯರು ಆಧ್ಯಾತ್ಮಿಕ, ನೈತಿಕ ನೆಲೆಗಟ್ಟಿನಲ್ಲಿ ಜೀವನವನ್ನು ನಡೆಸುವುದನ್ನು ಕಲಿತುಕೊಳ್ಳಬೇಕು. ಧರ್ಮ ನಿಷ್ಠ ಜೀವನ ನಡೆಸುವುದರಿಂದ ಇದೆಲ್ಲವೂ ಲಭ್ಯವಾಗುತ್ತದೆ~ ಎಂದು ಶ್ರೀಗಳು ನುಡಿದರು.ಚಾತುರ್ಮಾಸ ಸಮಿತಿಯ ಪರವಾಗಿ ಸಂಸದ ಪ್ರಹ್ಲಾದ ಜೋಶಿ, ಡಾ. ಎಂ. ಎಂ. ಜೋಶಿ, ಪಂಡಿತ ಪ್ರದ್ಯುಮ್ನೋಚಾರ್ಯ ಜೋಶಿ ಹಾಗೂ ಪಂಡಿತ ಜಯತೀರ್ಥಾಚಾರ್ಯ ಮಳಗಿ ಮಾತನಾಡಿದರು.ಸೋಮವಾರ ಸಂಜೆ ಧಾರವಾಡದ ನುಗ್ಗೀಕೇರಿ ಹನುಮಂತ ದೇವರ ಗುಡಿಯ ತನಕ ನಡೆದ ಸೀಮೋಲ್ಲಂಘನದ ನಂತರ ಶ್ರೀಗಳು ಕೊಲ್ಲಾಪುರಕ್ಕೆ ಪ್ರಯಾಣ ಬೆಳೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry