ವಿದ್ಯಾರ್ಥಿ ಬಸ್ ಪಾಸ್ ದರ ಕಡಿಮೆಗೆ ಆಗ್ರಹ

ಸೋಮವಾರ, ಮೇ 27, 2019
24 °C

ವಿದ್ಯಾರ್ಥಿ ಬಸ್ ಪಾಸ್ ದರ ಕಡಿಮೆಗೆ ಆಗ್ರಹ

Published:
Updated:

ಬೆಂಗಳೂರು: ವಿದ್ಯಾರ್ಥಿಗಳ ಬಸ್ ಪಾಸ್ ದರ ಕಡಿಮೆ ಮಾಡಬೇಕೆಂದು ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಆನಂದರಾವ್ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.`ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಬೇಕಾದ ಸರ್ಕಾರ, ತದ್ವಿರುದ್ಧವಾಗಿ ವರ್ತಿಸುತ್ತಿದೆ. ಐಷಾರಾಮಿ ಬಸ್‌ಗಳನ್ನು ರಸ್ತೆಗೆ ತರಲು ವಿನಾ ಕಾರಣ ದುಂದು ವೆಚ್ಚ ಮಾಡುತ್ತಿದೆ.

ಆ ವೆಚ್ಚವನ್ನು ಸರಿದೂಗಿಸಲು ವಿದ್ಯಾರ್ಥಿಗಳ ಬಸ್‌ಪಾಸ್ ದರದಲ್ಲಿ ಏರಿಕೆ ಮಾಡುತ್ತಿರುವುದು ವಿಪರ್ಯಾಸ. ನಗರ ಮತ್ತು ಗ್ರಾಮಾಂತರ ಪ್ರದೇಶದ ಕೆಲ ವಿದ್ಯಾರ್ಥಿಗಳು ಕಾಲೇಜು ಶುಲ್ಕವನ್ನು ತುಂಬಲು ಪರದಾಡುತ್ತಿದ್ದಾರೆ.ಇಂತಹ ಪರಿಸ್ಥಿತಿಯಲ್ಲಿ ಬಸ್ ಪಾಸ್ ದರ ಏರಿಕೆ ಮಾಡಿರುವುದು ಖಂಡನೀಯ~ ಎಂದು ಸಂಘಟನೆಯ ರಾಜ್ಯ ಘಟಕದ ಕಾರ್ಯದರ್ಶಿ ಕೆ.ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.ನಗರ ಘಟಕದ ಕಾರ್ಯದರ್ಶಿ ಪ್ರೇಮ್ ಮಾತನಾಡಿ, `ರಾಜ್ಯದಲ್ಲಿ ಈ ವರ್ಷ 130ಕ್ಕೂ ಅಧಿಕ ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಆವರಿಸಿದೆ. ಈ ಸಂದರ್ಭದಲ್ಲಿ ಸರ್ಕಾರ ರೈತರ ಸಾಲ ಮನ್ನಾದಂತಹ ವಿಶೇಷ ಯೋಜನೆಯನ್ನು ಜಾರಿ ಮಾಡಿರುವುದು ಸ್ವಾಗತಾರ್ಹ. ಇದರ ಜತೆಗೆ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಬೇಕಿತ್ತು.

 

ವಿದ್ಯಾರ್ಥಿಗಳು ಕಾಲೇಜು ಶಿಕ್ಷಣಕ್ಕಿಂತ ಅಧಿಕ ಮೊತ್ತವನ್ನು ಬಸ್ ಪಾಸ್‌ಗಳಿಗೆ ನೀಡುತ್ತಿದ್ದಾರೆ. ಆದ್ದರಿಂದ ಪಾಸ್ ದರದಲ್ಲಿ ಶೇ 50ರಷ್ಟನ್ನು ಇಳಿಕೆ ಮಾಡಿ ವಿದ್ಯಾರ್ಥಿಗಳಿಗೆ ಸಹಕಾರಿಯಾಗಬೇಕು~ ಎಂದು ಅವರು ಆರೋಪಿಸಿದರು.`ಕಳೆದ ವರ್ಷ ವಾರ್ಷಿಕ 1,590 ರೂಪಾಯಿ ಇದ್ದಂತಹ ವಿದ್ಯಾರ್ಥಿಗಳ ಬಸ್ ಪಾಸ್ ದರದಲ್ಲಿ ಸರ್ಕಾರ 200 ರೂಪಾಯಿ ಕಡಿಮೆಗೊಳಿಸಿತ್ತು. ಈಗ ಪದವಿ ವಿದ್ಯಾರ್ಥಿಗಳಿಗೆ ವಾರ್ಷಿಕ 1370 ರೂಪಾಯಿ, ಪಿಯುಸಿ ವಿದ್ಯಾರ್ಥಿಗಳಿಗೆ 1,170 ರೂಪಾಯಿ, ಡಿಪ್ಲೊಮಾ ಮತ್ತು ಐಟಿಐ ವಿದ್ಯಾರ್ಥಿಗಳಿಗೆ 1,375 ರೂಪಾಯಿ ದರ ನಿಗದಿ ಮಾಡಲಾಗಿದೆ.

 

ಈ ಮೊತ್ತ ಹೆಚ್ಚಾಗಿದ್ದು, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಸಂಸ್ಥೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಬಸ್‌ಪಾಸ್ ದರವನ್ನು ಕಡಿಮೆ ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.`ಗೃಹ ಮತ್ತು ಸಾರಿಗೆ ಸಚಿವ ಆರ್.ಅಶೋಕ ಅವರಿಗೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಶನಿವಾರ ಸಭೆ ನಡೆಸಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದಾರೆ~ ಎಂದು ಸಂಘಟನೆಯ ಸಹ ಕಾರ್ಯದರ್ಶಿ ಪುಷ್ಪಾ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry