ಶನಿವಾರ, ಏಪ್ರಿಲ್ 17, 2021
22 °C

ವಿದ್ಯಾರ್ಥಿ ಬಸ್ ಪಾಸ್ ದರ ತತ್ ಕ್ಷಣದಿಂದ ಇಳಿಕೆ, ಪುಷ್ಪಕ್ ಸಂಚಾರಕ್ಕೂ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು (ಪಿಟಿಐ): ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳ ಬಸ್ ಪಾಸ್ ದರವನ್ನು ಶನಿವಾರ 100ರಿಂದ 220 ರೂಪಾಯಿಗಳಷ್ಟು ಇಳಿಸಿದೆ. ಜೊತೆಗೆ ಪುಷ್ಪಕ್ ಬಸ್ಸುಗಳಲ್ಲಿ ಸಂಚರಿಸುವ ಅವಕಾಶವನ್ನೂ ವಿದ್ಯಾರ್ಥಿಗಳಿಗೆ ಕಲ್ಪಿಸಿದೆ. 14.65 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲಿರುವ ರಾಜ್ಯ ಸರ್ಕಾರದ ಈ ಕ್ರಮ ತತ್ ಕ್ಷಣದಿಂದಲೇ ಜಾರಿಗೆ ಬರಲಿದೆ.ಬರ ಮತ್ತು ಪ್ರವಾಹ ಪರಿಸ್ಥಿತಿ ಹಾಗೂ ಅಗತ್ಯ ವಸ್ತುಗಳ ತೀವ್ರ ಬೆಲೆ ಏರಿಕೆಯಿಂದ ಆಗುತ್ತಿರುವ ತೊಂದರೆಗಳನ್ನು ಗಮನಿಸಿ ವಿದ್ಯಾರ್ಥಿಗಳ ಬಸ್ ಪಾಸ್ ದರಗಳನ್ನು ಇಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಆರ್. ಅಶೋಕ್ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ಬಸ್ ಪಾಸ್ ದರ ಇಳಿಕೆಯಿಂದ 14.65 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ನಾಲ್ಕು ರಸ್ತೆ ಸಾರಿಗೆ ನಿಗಮಗಳ ಮೇಲೆ 20 ಕೋಟಿ ರೂಪಾಯಿಗಳ ಹೊರೆಯಾಗುತ್ತದೆ ಎಂದು ಅವರು ನುಡಿದರು.ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಬಸ್ ಪಾಸುಗಳ ಹಾಲಿ ದರವು 1,320 ರೂಪಾಯಿಯಾಗಿದ್ದು, ಸರ್ಕಾರದ ಕ್ರಮದಿಂದ 1,100 ರೂಪಾಯಿಗಳಿಗೆ ಇಳಿಯುವುದು. ಸಂಜೆ ಕಾಲೇಜುಗಳ ವಿದ್ಯಾರ್ಥಿಗಳ ಬಸ್ ಪಾಸ್ ದರವು 1,680 ರೂಪಾಯಿಗಳಿಂದ 1,480 ರೂಪಾಯಿಗಳಿಗೆ, ಐಟಿಐ, ಡಿಪ್ಲೊಮಾ, ಬಿಎಡ್ ವಿದ್ಯಾರ್ಥಿಗಳ ಬಸ್ ಪಾಸ್ ದರವು 1,350 ರೂಪಾಯಿಗಳಿಂದ 1150 ರೂಪಾಯಿಗಳಿಗೆ ಇಳಿಯುವುದು ಎಂದು ಅವರು ಹೇಳಿದರು.ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ ವಿತರಿಸಲಾದ ಬಸ್ ಪಾಸ್ ದರವು 125 ರೂಪಾಯಿಗಳಷ್ಟು ಇಳಿಕೆಯಾಗಲಿದ್ದು 525 ರೂಪಾಯಿಗಳಿಂದ 400 ರೂಪಾಯಿಗಳಿಗೆ, ವಿದ್ಯಾರ್ಥಿಗಳ ಬಸ್ ಪಾಸ್ ದರವು 700 ರೂಪಾಯಿಗಳಿಂದ 600 ರೂಪಾಯಿಗಳಿಗೆ ಇಳಿಯುವುದು.ಬೆಂಗಳೂರು ನಗರದಲ್ಲಿ ವಿದ್ಯಾರ್ಥಿಗಳು ಸಾಮಾನ್ಯ ಬಸ್ಸುಗಳ ಜೊತೆಗೆ ಪುಷ್ಪಕ್ ಬಸ್ಸುಗಳಲ್ಲೂ ಸಂಚರಿಸಬಹುದು. ಆದರೆ ಹವಾ ನಿಯಂತ್ರಿತ ಬಸ್ಸುಗಳಲ್ಲಿ ಸಂಚರಿಸುವಂತಿಲ್ಲ ಎಂದು ಅಶೋಕ್ ಹೇಳಿದರು.ವಿದ್ಯಾರ್ಥಿಗಳಿಗೆ ಕಲಿಕಾ ಪರವಾನಗಿ ಸೇರಿದಂತೆ ವಾಹನ ಚಾಲನಾ ಪರವಾನಗಿಗಳನ್ನು ಅವರವರ ಕಾಲೇಜು ಆವರಣಗಳಲ್ಲೇ ವಿತರಿಸಲು ಸರ್ಕಾರವು ನಿರ್ಧರಿಸಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಈ ಉದ್ದೇಶಕ್ಕಾಗಿ ಕಾಲೇಜು ಆವರಣಗಳಲ್ಲೇ ಶಿಬಿರಗಳನ್ನು ನಡೆಸುವರು ಎಂದು ಸಚಿವರು ನುಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.