ವಿದ್ಯಾರ್ಥಿ, ಯುವತಿ ಸಾವು

7
24 ಗಂಟೆಗಳಲ್ಲಿ ಎರಡು ಅಪಘಾತ

ವಿದ್ಯಾರ್ಥಿ, ಯುವತಿ ಸಾವು

Published:
Updated:

ಬೆಂಗಳೂರು:  ನಗರದ ವಿಲ್ಸನ್ ಗಾರ್ಡನ್ ಮತ್ತು ವೈಟ್‌ಫೀಲ್ಡ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.ಅಶೋಕ ಪಿಲ್ಲರ್ ವೃತ್ತದ ಬಳಿಯ ಮಾಧವ ಉದ್ಯಾನ ರಸ್ತೆಯಲ್ಲಿ ಶನಿವಾರ ಸಂಜೆ ಕ್ಯಾಂಟರ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಫಹದ್ ಉರ್ ರೆಹಮಾನ್ (18) ಎಂಬ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.ಬನಶಂಕರಿ ನಿವಾಸಿಯಾದ ಆತ ಸಾರಕ್ಕಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ಸ್ನೇಹಿತ ಮಹಮ್ಮದ್ ಅಬ್ದುಲ್ ರೆಹಮಾನ್ ಜತೆ ಬೈಕ್‌ನಲ್ಲಿ ಸಿಟಿ ಮಾರುಕಟ್ಟೆಗೆ ಬಂದಿದ್ದ ಫಹದ್, ಮನೆಗೆ ವಾಪಸ್ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಕ್ಯಾಂಟರ್ ಅವರ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಬೈಕ್ ಅಡ್ಡಾದಿಡ್ಡಿ ಚಲಿಸಿ ಅವರಿಬ್ಬರೂ ಕೆಳಗೆ ಬಿದ್ದಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಫಹದ್‌ನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಆತ ಭಾನುವಾರ ನಸುಕಿನಲ್ಲಿ ಮೃತಪಟ್ಟ ಎಂದು ಪೊಲೀಸರು ಹೇಳಿದ್ದಾರೆ.ಬೈಕ್ ಚಾಲನೆ ಮಾಡುತ್ತಿದ್ದ ಮಹಮ್ಮದ್ ಸಹ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕ್ಯಾಂಟರ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಲ್ಸನ್‌ಗಾರ್ಡನ್ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮತ್ತೊಂದು ಪ್ರಕರಣ: ವೈಟ್‌ಫೀಲ್ಡ್ ಮುಖ್ಯರಸ್ತೆ ಓ ಫಾರಂ ಜಂಕ್ಷನ್‌ನಲ್ಲಿ ಭಾನುವಾರ ಬೆಳಿಗ್ಗೆ ಕ್ಯಾಂಟರ್ ಡಿಕ್ಕಿ ಹೊಡೆದು ಪೂರ್ಣಿಮಾ (19) ಎಂಬುವರು ಸಾವನ್ನಪ್ಪಿದ್ದಾರೆ.ತಮಿಳುನಾಡು ಮೂಲದ ಅವರು ನಗರದ ನಾಗನಾಥಪುರದಲ್ಲಿರುವ ಅಜ್ಜ ವೆಂಕಟೇಶನ್ ಅವರ ಮನೆಗೆ ಬಂದಿದ್ದರು. ಕಾಡುಗೋಡಿಯಲ್ಲಿನ ಸಾಯಿ ಬಾಬಾ ಆಶ್ರಮಕ್ಕೆ ಹೋಗಿದ್ದ ವೆಂಕಟೇಶನ್ ಮತ್ತು ಪೂರ್ಣಿಮಾ, ಬೈಕ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.ಕ್ಯಾಂಟರ್ ಅವರ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಅವರಿಬ್ಬರೂ ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಪೂರ್ಣಿಮಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.ಬೈಕ್ ಚಾಲನೆ ಮಾಡುತ್ತಿದ್ದ ವೆಂಕಟೇಶನ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವೈಟ್‌ಫೀಲ್ಡ್ ಸಂಚಾರ ಠಾಣೆ ಪೊಲೀಸರು ಕ್ಯಾಂಟರ್ ಚಾಲಕನನ್ನು ಬಂಧಿಸಿ, ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry