ವಿದ್ಯಾರ್ಥಿ ಶವ ಪತ್ತೆ: ಕೊಲೆ ಶಂಕೆ

7

ವಿದ್ಯಾರ್ಥಿ ಶವ ಪತ್ತೆ: ಕೊಲೆ ಶಂಕೆ

Published:
Updated:

ಕನಕಪುರ: ಬೆಂಗಳೂರಿನ ಲೋರಾ ಬ್ಯುಸಿನೆಸ್ ಅಕಾಡೆಮಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಆಂಜನಪ್ಪ (22) ಎಂಬ ತರುಣನ ಶವ ಸೋಮವಾರ ಸಂಜೆ ಮರಳವಾಡಿ ಹೋಬಳಿ ಕಟ್ಟೆಕೆರೆಯಲ್ಲಿ ಪತ್ತೆಯಾಗಿದೆ. ಮೃತ ವಿದ್ಯಾರ್ಥಿ ಎಂಬಿಎ 3ನೇ ವರ್ಷದ ವಿದ್ಯಾರ್ಥಿಯಾಗಿದ್ದು ಬೆಂಗಳೂರಿನ ನಿವಾಸಿ ಎನ್ನಲಾಗಿದೆ.ಬನ್ನೇರುಘಟ್ಟ ಅರಣ್ಯಕ್ಕೆ ಹೊಂದಿಕೊಂಡಂತಿರುವ ಕಟ್ಟೆಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ಎಂದಿನಂತೆ ಗಸ್ತು ನಡೆಸುತ್ತಿದ್ದಾಗ ಕೆರೆಯ ಏರಿಯಲ್ಲಿ ಯುವಕನ ಬಟ್ಟೆ ಮತ್ತು ಇತರೆ ವಸ್ತುಗಳು ಪತ್ತೆಯಾದವು. ಅವರು ಕೂಡಲೇ ವಿಷಯವನ್ನು ಹಾರೋಹಳ್ಳಿ ಪೊಲೀಸರಿಗೆ ಮುಟ್ಟಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಟ್ಟೆ ಸಿಕ್ಕ ಪ್ರದೇಶದ ಸುತ್ತಮುತ್ತ ಪರಿಶೀಲನೆ ನಡೆಸಿದಾಗ ಆಂಜನಪ್ಪನ ಬಟ್ಟೆಯಲ್ಲಿ ಮನೆಯ ವಿಳಾಸ ಕಂಡು ಬಂದಿತು. ಇದರ ಅನುಸಾರ ಬೆಂಗಳೂರಿನಲ್ಲಿನ ಆಂಜನಪ್ಪನವರ ತಂದೆಗೆ ಸುದ್ದಿ ಮುಟ್ಟಿಸಲಾಯಿತು.ಪೋಷಕರು ಮತ್ತು ಪೊಲೀಸರು ಕೆರೆಯ ಸುತ್ತ ಶೋಧ ನಡೆಸುತ್ತಿದ್ದಾಗ ಸೋಮವಾರ ಸಂಜೆ ಕೆರೆಯಲ್ಲಿ ಆಂಜನಪ್ಪನ ಶವ ದೊರೆಯಿತು.

`ಮೃತ ಪೋಷಕರ ಹೇಳಿಕೆಯ ಅನುಸಾರ ಆಂಜನಪ್ಪ ಶನಿವಾರ ಬೆಳಿಗ್ಗೆ ಕಾಲೇಜಿಗೆ ಹೋದವರು ಮರಳಿ ಬಂದಿರಲಿಲ್ಲ. ಪರಿಚಯಸ್ಥರು ಮತ್ತು ಸ್ನೇಹಿತರನ್ನೆಲ್ಲಾ ವಿಚಾರಿಸಿದ್ದರೂ ಪೋಷಕರಿಗೆ ಯಾವುದೇ ಸುಳಿವು ದೊರೆತಿರಲಿಲ್ಲ.  ಸ್ನೇಹಿತರ ಮನೆಗೆ ಹೋಗಿರಬಹುದೆಂದು ಪೋಷಕರು ಸುಮ್ಮನಾಗಿದ್ದರು.ಆದರೆ ಸೋಮವಾರ ಆಂಜನಪ್ಪನವರ ಶವ ಕೆರೆಯಲ್ಲಿ ಕಂಡು ಬಂದಿದೆ. ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ. ಮೃತನ ಮೊಬೈಲ್, ಬ್ಯಾಗ್ ನಾಪತ್ತೆಯಾಗಿವೆ. ಪೋಷಕರು ಇದು ಕೊಲೆ ಎಂಬ ಸಂಶಯ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry