ವಿದ್ಯಾರ್ಥಿ ಸಾವು: ಪೋಷಕರ ಪ್ರತಿಭಟನೆ

ಬುಧವಾರ, ಜೂಲೈ 24, 2019
28 °C

ವಿದ್ಯಾರ್ಥಿ ಸಾವು: ಪೋಷಕರ ಪ್ರತಿಭಟನೆ

Published:
Updated:

ಮೊಳಕಾಲ್ಮುರು: ಇಲ್ಲಿನ ಕೆಇಬಿ ವೃತ್ತದಲ್ಲಿರುವ ಮೆಟ್ರಿಕ್‌ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಗುರುವಾರ ರಾತ್ರಿ ವಿದ್ಯಾರ್ಥಿಯೊಬ್ಬ ಮಲಗಿದ್ದಾಗ ಆಯತಪ್ಪಿ ಮಂಚದ ಮೇಲಿನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.ಮೃತನನ್ನು ಪಟ್ಟಣದ ಆದರ್ಶ ಮಹಾವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿ ಚಿಕ್ಕೋಬನಹಳ್ಳಿ ಗ್ರಾಮದ ವೆಂಕಟೇಶ್ (14) ಎಂದು ಗುರುತಿಸಲಾಗಿದೆ. ಎರಡು ಹಂತಗಳನ್ನು ಹೊಂದಿದ್ದ ಮಂಚದ ಎರಡನೇ ಹಂತದಲ್ಲಿ ಈತ ಮಲಗಿದ್ದು, ಬಿದ್ದಾಗ ತಲೆಗೆ ಬಲವಾದ ಪೆಟ್ಟು ಬಿದ್ದು ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.ಸ್ಥಳಕ್ಕೆ ಡಿವೈಎಸ್‌ಪಿ ಶೇಖರಪ್ಪ, ಸಿಪಿಐ ಜಿ.ಮಂಜುನಾಥ್, ತಹಶೀಲ್ದಾರ್ ಲಕ್ಷ್ಮೀನರಸಿಂಹಯ್ಯ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ವೆಂಕಟೇಶ್, ತಾಲ್ಲೂಕು ಅಧಿಕಾರಿ ನಾಗರಾಜ ನಾಯಕ, ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ನರಸಮ್ಮ ಗೋವಿಂದಪ್ಪ, ಜಿ.ಪಂ. ಸದಸ್ಯೆ ಮಾರಕ್ಕ, ತಾ.ಪಂ. ಸದಸ್ಯ ಅಡವಿ ಮಾರಯ್ಯ, ಬಿಇಒ ಉಮಾದೇವಿ ಭೇಟಿ ನೀಡಿದ್ದರು.ಆರೋಪ: ತಾಲ್ಲೂಕಿನ ವಿದ್ಯಾರ್ಥಿ ನಿಯಲಗಳಲ್ಲಿ ಅದರಲ್ಲೂ ಸಮಾಜ ಕಲ್ಯಾಣ ಇಲಾಖೆ ನಿಲಯಗಳಲ್ಲಿ ಅವ್ಯವಸ್ಥೆ ತಾಂಡವಾಡುತ್ತಿದೆ. ಭದ್ರತೆಗಾಗಿ ಮಂಚಕ್ಕೆ ಸರಿಯಾಗಿ ಪರಿಕರಗಳನ್ನು ಅಳವಡಿಸದೇ ಇರುವುದು ಘಟನೆಗೆ ಕಾರಣವಾಗಿದೆ, ಇದಕ್ಕೆ ಅಧಿಕಾರಿಗಳು ನೇರ ಹೊಣೆಯಾಗಿದ್ದು ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಪಟ್ಟುಹಿಡಿದರು.ಭರವಸೆ: ಘಟನೆ ಬಗ್ಗೆ ಸಮಾಜ ಕಲ್ಯಾಣಾಧಿಕಾರಿ ವೆಂಕಟೇಶ್ ಅವರು ದೂರವಾಣಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಅವರ ಜತೆ ಮಾತುಕತೆ ನಡೆಸಿದರು. ನಂತರ ಸಚಿವರು ಸರ್ಕಾರದಿಂದ ್ಙ 2 ಲಕ್ಷ ಪರಿಹಾರ, ಕುಟುಂಬ ನಿರ್ವಹಣೆಗೆ ಸಾಲ ಅಥವಾ ಜಮೀನು ಸೌಲಭ್ಯ ಕಲ್ಪಿಸುವ ಜತೆಗೆ ಶನಿವಾರ ಉಸ್ತುವಾರಿ ಸಚಿವರು ಕುಟುಂಬಕ್ಕೆ ಸಾಂತ್ವನ ಹೇಳಲು ಬರುತ್ತಾರೆ ಎಂದು ತಿಳಿಸಿದ ನಂತರ ಪರಿಸ್ಥಿತಿ ತಿಳಿಯಾಯಿತು. ಈ ಮಧ್ಯೆ ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಭೇಟಿ ನೀಡಿ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry