ವಿದ್ಯಾವಂತರಿಂದ ಭ್ರಷ್ಟಾಚಾರ: ಕಳವಳ

7

ವಿದ್ಯಾವಂತರಿಂದ ಭ್ರಷ್ಟಾಚಾರ: ಕಳವಳ

Published:
Updated:

ಬೆಂಗಳೂರು: ಕೋಟ್ಯಂತರ ರೂಪಾಯಿ ಭ್ರಷ್ಟಾಚಾರಕ್ಕೆ ಇಂದು ವಿದ್ಯಾವಂತರೇ ಹೆಚ್ಚು ಕಾರಣವಾಗಿದ್ದಾರೆ ಎಂದು ನ್ಯಾ. ರಾಮಾ ಜೋಯಿಸ್ ಹೇಳಿದರು.

ಇಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ 4ನೇ ದಿನದ ಸಮಾರಂಭದಲ್ಲಿ ಅವರು ಮಾತನಾಡಿದರು.ಪ್ರಜಾಪ್ರಭುತ್ವ ಮಾದರಿಯ ಸರ್ಕಾರ ಬಂದ ಮೇಲೆ ಆಡಳಿತ ಕೆಲವು ದಿನ ಭ್ರಷ್ಟಾಚಾರ ರಹಿತವಾಗಿತ್ತು. ಆದರೆ, ಇತ್ತೀಚೆಗೆ ಕಾಮನ್‌ವೆಲ್ತ್ ಕ್ರೀಡಾಕೂಟ, 2ಜಿ ಸ್ಪೆಕ್ಟ್ರಂ ಮತ್ತಿತರ ಹಗರಣಗಳನ್ನು ಗಮನಿಸಿದರೆ ನೈತಿಕತೆ ಇಷ್ಟೊಂದು ಅಧಃಪತನ ಹೊಂದಲು ಕಾರಣವೇನು ಎಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿದರು.ಇಂದು ಲಕ್ಷಾಂತರ ಕೋಟಿ ರೂಪಾಯಿ ಹಣ ದುರುಪಯೋಗದ ಹಗರಣಗಳು ಕೇಳಿಬರುತ್ತಿವೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಆಡಳಿತಗಾರರು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದರು. ಆದರೆ, ಅಂಥ ಶಿಕ್ಷಣ ಪಡೆದ ವಿದ್ಯಾವಂತರೇ ಇಂಥ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ವಿಷಾದಿಸಿದರು.ಕಳೆದ 60 ವರ್ಷಗಳಿಂದ ಆಡಳಿತ ನಡೆಸಿದವರು ಧರ್ಮವನ್ನು ಹೊಡೆದು ಹಾಕಿ ಹಣಗಳಿಕೆಗೆ ಮುಂದಾದರು. ಇಂದು ಶಿಕ್ಷಣವಿದೆ. ಆದರೆ, ಗುಣ, ಚಾರಿತ್ರ್ಯ ಇಲ್ಲ. ಇಂದಿನ ಶಿಕ್ಷಣದಲ್ಲಿ ನ್ಯಾಯಯುತವಾಗಿ ಬದುಕುವ ನೈತಿಕ ಬೋಧನೆ ಇಲ್ಲ. ಕ್ವಿಟ್ ಇಂಡಿಯಾ ಚಳವಳಿಯಂತೆ ಭ್ರಷ್ಟಾಚಾರ ತೊಲಗಿಸಲು ಚಳವಳಿ ಬೇಕಿದೆ. ಪಡೆದ ವಿದ್ಯೆಯನ್ನು ಸಮಾಜಕ್ಕೆ ಹೇಗೆ ಬಳಕೆ ಮಾಡಬೇಕು ಎಂಬ ಬಗ್ಗೆ ಶಿಕ್ಷಣ ರೂಪಿಸಬೇಕು ಎಂದರು.ಪೊಲೀಸ್ ವ್ಯವಸ್ಥೆಯಿಂದ ಲಂಚಗುಳಿತನ ನಿರ್ಮೂಲನೆ ಅಸಾಧ್ಯ. ಭ್ರಷ್ಟಾಚಾರದಿಂದ ಬದುಕುವುದಿಲ್ಲ ಎಂಬ ಗುಣ ಪ್ರತಿಯೊಬ್ಬರಲ್ಲೂ ಬರಬೇಕು. ಲಂಚದ ವಿರುದ್ಧ ಹೋರಾಟವೊಂದೇ ಪರಿಹಾರ ಎಂದು ಅಭಿಪ್ರಾಯಪಟ್ಟರು.ಹಿರಿಯ ವಿಜ್ಞಾನಿ ಡಾ.ರಾಮಮೂರ್ತಿ ಸಮಾರಂಭ ಉದ್ಘಾಟಿಸಿದರು. ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಅರವಿಂದ ಜತ್ತಿ, ಸಂಸದ ಅನಂತಕುಮಾರ್, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ, ಸಚಿವ ಎಸ್.ಎ. ರವೀಂದ್ರನಾಥ್, ಎಸ್.ಎಸ್. ಪಾಟೀಲ್,  ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry