ಶುಕ್ರವಾರ, ನವೆಂಬರ್ 15, 2019
24 °C
ಧಾರವಾಡ ಜ್ಲ್ಲಿಲ್ಲೆ ಚುನಾವಣಾ ಕಣದ ಸ್ವಾರಸ್ಯ

ವಿದ್ಯಾವಂತ್ರೂ ಅದಾರ‌್ರಿ, ಶಾಲೆಗೆ ಹೋಗದವ್ರೆ ಇದ್ದಾರ‌್ರಿ...

Published:
Updated:

ಹುಬ್ಬಳ್ಳಿ: ರಾಜಕೀಯ ಕ್ಷೇತ್ರವೊಂದನ್ನು ಹೊರತು ಪಡಿಸಿ ಬೇರೆಲ್ಲೆಡೆ ವಿದ್ಯಾರ್ಹತೆ  ಮುಖ್ಯ. `ಇಲ್ಲಿ ಹಣವೊಂದಿದ್ದರೆ ಸಾಕು ವಿದ್ಯಾರ್ಹತೆ ಅಗತ್ಯವಿಲ್ಲ' ಎನ್ನುವ ಮಾತು ಚಾಲ್ತಿಯಲ್ಲಿದೆ. ಹೀಗಾಗಿಯೇ ಇರಬೇಕು ರಾಜಕೀಯ ಕ್ಷೇತ್ರದಲ್ಲಿ ವಿದ್ಯಾವಂತರಿಗಿಂತ ಧನವಂತರೇ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿರುವುದು ಕಂಡುಬರುತ್ತದೆ.ಆದಾಗ್ಯೂ ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಬಹುತೇಕ ವಿದ್ಯಾವಂತರೇ ಕಣದಲ್ಲಿದ್ದಾರೆ. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ವಿದ್ಯಾವಂತರು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸ್ಪರ್ಧಿಸುವ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿದ್ದರೆ  ವೈರುಧ್ಯ ಎನ್ನುವಂತೆ 4ನೇ ತರಗತಿ ಓದಿರುವ ಅಭ್ಯರ್ಥಿಯೂ ಇವರ ನಡುವೆ ಕಣದಲ್ಲಿದ್ದಾರೆ. ಜತೆಗೆ ಕುಂದಗೋಳ ಕ್ಷೇತ್ರದಲ್ಲಿ ಶಾಲೆಗೆ ಹೋಗದ ಅಭ್ಯರ್ಥಿಯೂ ಕಣದಲ್ಲಿ ಧುಮುಕಿದ್ದಾರೆ.ಜಿಲ್ಲೆಯಷ್ಟೇ ಅಲ್ಲ, ರಾಜ್ಯದಲ್ಲಿಯೇ ಗಮನ ಸೆಳೆಯುತ್ತಿರುವ ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ವೈದ್ಯಕೀಯ ಪದವಿ ಪಡೆದವರು, ಕಾನೂನು ಪದವಿ ಪಡೆದವರು, ಸ್ನಾತಕೋತ್ತರ ಪದವೀಧರರು ಸೇರಿದಂತೆ 5-6 ಮಂದಿ ಪದವೀಧರರು ಕಣಕ್ಕಿಳಿದಿದ್ದಾರೆ. ಕಾನೂನು ಪದವೀಧರರೂ ಆಗಿರುವ ಜಗದೀಶ ಶೆಟ್ಟರ್ ಐದನೇ ಬಾರಿ ಕಣಕ್ಕಿಳಿದಿದ್ದರೆ, ರೋಗಿಗಳಿಗೆ ಚಿಕಿತ್ಸೆ ನೀಡುವ ಡಾಕ್ಟರ್ ನಾಲ್ವಾಡರು ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ತಮ್ಮ  ರಾಜಕೀಯ ಸಾಮರ್ಥ್ಯ ಒರೆಗೆ ಹಚ್ಚಿದ್ದಾರೆ.ಇನ್ನು ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಕಾನೂನು ಪದವೀಧರರು, ಇಬ್ಬರು ಎಂಜಿನಿಯರಿಂಗ್ ಪದವೀಧರರು ಕಣದಲ್ಲಿದ್ದಾರೆ. ಹು-ಧಾ ಪೂರ್ವ ಕ್ಷೇತ್ರದಲ್ಲಿ ಬಹುತೇಕ ಅಭ್ಯರ್ಥಿಗಳ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ, ಪಿಯುಸಿ ಇದ್ದು ಇಬ್ಬರು ಪದವೀಧರರು ಕಣದಲ್ಲಿದ್ದಾರೆ.`ಇಲ್ರೀ, ನಾನು ಶಾಲೆಗೆ ಹೋಗಿಲ್ಲ'

ಹುಬ್ಬಳ್ಳಿಯ ಪ್ರಿಯದರ್ಶಿನಿ ಕಾಲೊನಿ ನಿವಾಸಿ, ಜೆಡಿಯು ಪಕ್ಷದಿಂದ ಸೆಂಟ್ರಲ್ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ 33 ವರ್ಷ ವಯಸ್ಸಿನ ರವಿ ಕುಲಾಲ್ ಸ್ವಯಂ ಉದ್ಯೋಗ ಮಾಡಿಕೊಂಡಿದ್ದಾರೆ. ಅವರು  ಓದಿದ್ದು  ನಾಲ್ಕನೇ ತರಗತಿ ಮಾತ್ರ. ಕುಂದಗೋಳ ಕ್ಷೇತ್ರದಲ್ಲಿ  ಪಕ್ಷೇತರರಾಗಿ ಕಣಕ್ಕಿಳಿದಿರುವ ಗಿಲಾನಿ ಎಂ ಗೋಕಾಕ್ (30) (ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿರುವ ಮಾಹಿತಿಯಂತೆ) ವಿದ್ಯಾರ್ಹತೆ ಕಾಲಂ ಖಾಲಿ ಖಾಲಿ.`ಶಾಲೆಗೇ ಹೋಗಿಲ್ಲವೆ ನೀವು? ಈಗ ಚುನಾವಣೆಗೂ ಸ್ಪರ್ಧಿಸಿದ್ದೀರಲ್ಲ? ಒಂದು ವೇಳೆ ಆಯ್ಕೆಯಾದರೆ ನಿಮ್ಮ  ಕ್ಷೇತ್ರಕ್ಕೆ ಏನು ಮಾಡಬೇಕು ಅಂತಿದ್ದೀರಿ ?' ಎಂದು ಪ್ರಶ್ನಿಸಿದರೆ ಉತ್ತರಿಸಲೂ ತಡಬಡಾಯಿಸುತ್ತಾರೆ. `ಇಲ್ರೀ, ನಾನು ಶಾಲೆಗೆ ಹೋಗಿಲ್ಲ' ಎಂದು ಮಾತು ತುಂಡರಿಸುತ್ತಾರೆ.

ಕಣದಲ್ಲಿರುವ ಹಿರಿಯ ಅಭ್ಯರ್ಥಿಗಳುಇನ್ನು ಧಾರವಾಡ ಜಿಲ್ಲೆಯಲ್ಲಿ ಬಹುತೇಕ ಅಭ್ಯರ್ಥಿಗಳಲ್ಲಿ 30 ರಿಂದ 50ರೊಳಗಿನ ವಯೋಮಾನದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೆರಳೆಣಿಕೆಯಷ್ಟು ಅಭ್ಯರ್ಥಿಗಳು ಮಾತ್ರವೇ 60-70 ವರ್ಷ ವಯೋಮಾನದಲ್ಲಿದ್ದಾರೆ.ಧಾರವಾಡ ಜಿಲ್ಲೆಯ ಕಣದಲ್ಲಿರುವ ಅತಿ ಹಿರಿಯ ಅಭ್ಯರ್ಥಿಗಳಲ್ಲಿ  ಪ್ರಮುಖರು ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಮಾಜಿ ಸಚಿವ ಶಿವಾಜಿರಾವ್ ರಾಮಚಂದ್ರರಾವ್ ಮೋರೆ. 72 ವರ್ಷ ವಯಸ್ಸಿನ ಮೋರೆ 1983,1989,2004ರಲ್ಲಿ ಕಣಕ್ಕಿಳಿದು ಆಯ್ಕೆಯಾದರು. ಅಷ್ಟೇ ಅಲ್ಲ ಎಸ್.ಬಂಗಾರಪ್ಪನವರ ಅವಧಿಯಲ್ಲಿ 1992-94ರವರೆಗೆ ಸಹಕಾರ ಸಚಿವರಾಗಿದ್ದರು. 2004ರಲ್ಲಿ ಧರ್ಮಸಿಂಗ್ ಅವಧಿಯಲ್ಲಿ ಪೌರಾಡಳಿತ ಸಚಿವರಾಗಿಯೂ ಕೆಲಸ ಮಾಡಿದ್ದರು.ಈಗ ಮತ್ತೆ ಕಣಕ್ಕಿಳಿದಿದ್ದಾರೆ. ವಿಶೇಷವೆಂದರೆ ಇವರೊಂದಿಗೆ ತೀವ್ರ ಪೈಪೋಟಿ ನೀಡುವ ಅಭ್ಯರ್ಥಿಗಳೆಲ್ಲ ಅವರಿಗಿಂತ ಅನುಭವದಲ್ಲಿ ಮತ್ತು ವಯಸ್ಸಿನಲ್ಲಿ ಕಿರಿಯರು. ಇನ್ನು ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ  ಎಸ್.ಆರ್.ಕಂಪ್ಲಿ ಕಣಕ್ಕಿಳಿದಿದ್ದು ಅವರು ಕೂಡ ಮೋರೆ ಸಮಕಾಲೀನರು.

ಇನ್ನು ಇಬ್ಬರು ಕಿರಿಯ ವಯಸ್ಸಿನ ಅಭ್ಯರ್ಥಿಗಳೂ ಈ ಬಾರಿಯ ಕಣದಲ್ಲಿದ್ದಾರೆ. 27 ವರ್ಷದ ವಿನಯಕುಮಾರ್ ಮ್ಯಾಗೇರಿ ನವಲಗುಂದದಿಂದ ಪಕ್ಷೇತರಾಗಿ ಸ್ಪರ್ಧಿಸಿದ್ದರೆ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ 29 ವರ್ಷ ವಯಸ್ಸಿನ ರಾಜು ಕಾಂಬ್ಳೆ ಕಣಕ್ಕಿಳಿದಿದ್ದಾರೆ.

ಕಣದಲ್ಲಿರುವ ಹೆಚ್ಚಿನ ವಿದ್ಯಾವಂತರು


 • ಡಾ.ಮಹೇಶ ನಾಲ್ವಾಡ -ಎಂಬಿಬಿಎಸ್-ಹು-ಧಾ ಸೆಂಟ್ರಲ್ (ಕಾಂಗ್ರೆಸ್)

 • ಜಗದೀಶ ಶೆಟ್ಟರ್-ಎಲ್‌ಎಲ್‌ಬಿ-ಹು-ಧಾ ಸೆಂಟ್ರಲ್(ಬಿಜೆಪಿ)

 • ಶಂಭುಲಿಂಗಪ್ಪ ಸಿದ್ಧರಾಮ ಶೆಟ್ಟರ್ -ಬಿಇ (ಮೆಕ್ಯಾನಿಕಲ್)-ನವಲಗುಂದ(ಬಿಎಸ್‌ಆರ್ ಕಾಂಗ್ರೆಸ್)

 • ರಾಜಶೇಖರ ಶಿರಿಯಣ್ಣವರ -ಎಂಬಿಬಿಎಸ್-ನವಲಗುಂದ

 • ಚೆನ್ನುಮಲ್ಲಿಗವಾಡ -ಎಂಎ-ಹು-ಧಾ ಪೂರ್ವ (ಆರ್‌ಪಿಐ)

 • ಮನೋಜ ಹಾನಗಲ್ -ಎಂಎ, ಎಲ್‌ಎಲ್‌ಬಿ (ಪಕ್ಷೇತರ)ಹು-ಧಾ ಸೆಂಟ್ರಲ್

 • ಅರವಿಂದ ಬೆಲ್ಲದ -ಬಿಇ-ಹು-ಧಾ ಪಶ್ಚಿಮ (ಬಿಜೆಪಿ)

 • ಗುರುರಾಜ ಹುಣಸಿಮರದ -ಎಲ್‌ಎಲ್‌ಬಿ (ಪಕ್ಷೇತರ)ಹು-ಧಾ ಪಶ್ಚಿಮ

 • ಎಚ್.ಜಿ.ದೇಸಾಯಿ -ಬಿಇ-ಹು-ಧಾ ಪಶ್ಚಿಮ

ಅತಿ ಕಡಿಮೆ ವಿದ್ಯಾರ್ಹತೆ ಹೊಂದಿದವರು


 • ಆರ್‌ಡಿ ರಂಗಸ್ವಾಮಿ-5ನೇ ತರಗತಿ (ಪಕ್ಷೇತರ)ನವಲಗುಂದ 

 • ಜಾಫರ್ ಧಾರವಾಡ-5ನೇ ತರಗತಿ- (ಪಕ್ಷೇತರ)- ಹು-ಧಾ ಸೆಂಟ್ರಲ್

 • ರವಿ ಕುಲಾಲ್ (ಜೆಡಿಯು) 4ನೇ ತರಗತಿ -ಸೆಂಟ್ರಲ್ ಕ್ಷೇತ್ರ

 • ವಿಬಿ ಕಳ್ಳೀಮನಿ (ಬಿಎಸ್‌ಆರ್ ಕಾಂಗ್ರೆಸ್)4ನೇ ತರಗತಿ-ಕುಂದಗೋಳ

 • ಗಿಲಾನಿ ಎಂ ಗೋಕಾಕ್ (ಪಕ್ಷೇತರ)-ಕುಂದಗೋಳ -ಶಾಲೆಗೆ ಹೋಗಿಲ್ಲ.

ಕಣದಲ್ಲಿನ ಅತಿ ಹಿರಿಯರು


 • ಎಸ್.ಆರ್.ಮೋರೆ (72)- ಕಾಂಗ್ರೆಸ್-ಹು-ಧಾರವಾಡ ಪಶ್ಚಿಮ

 • ಎಸ್.ಆರ್.ಕಂಪ್ಲಿ (72)-ಪಕ್ಷೇತರ-ಧಾರವಾಡ ಸೆಂಟ್ರಲ್

 • ಎಚ್.ವಿ.ಡಂಬಳ (69)-ಬಿಎಸ್‌ಆರ್ ಕಾಂಗ್ರೆಸ್-ಹು-ಧಾ ಪಶ್ಚಿಮ

 • ರಾಜಶೇಖರ ಶಿರಿಯಣ್ಣವರ (68) ಕೆಜೆಪಿ-ನವಲಗುಂದ

ಕಣದಲ್ಲಿನ ಕಿರಿಯರು


 • ವಿನಯಕುಮಾರ್ ಮ್ಯಾಗೇರಿ (27)-ಬಿಕಾಂ ಪದವೀಧರ-ನವಲಗುಂದ-ಪಕ್ಷೇತರ

 • ರಾಜು ಕಾಂಬ್ಳೆ (29)ಬಿಎ ಪತ್ರಿಕೋದ್ಯಮ-ಹು-ಧಾ ಪಶ್ಚಿಮ-ಬಿಜೆಡಿ
ಪ್ರತಿಕ್ರಿಯಿಸಿ (+)