ವಿದ್ಯುತ್‌ಗಾಗಿ ಮಧುರಖಂಡಿ ರೈತರ ಪ್ರತಿಭಟನೆ

7

ವಿದ್ಯುತ್‌ಗಾಗಿ ಮಧುರಖಂಡಿ ರೈತರ ಪ್ರತಿಭಟನೆ

Published:
Updated:

ಜಮಖಂಡಿ: ವಿದ್ಯುತ್ ಪೂರೈಕೆಯಲ್ಲಿ ಹೆಸ್ಕಾಂ ಅಧಿಕಾರಿಗಳು ಗ್ರಾಮ ಗ್ರಾಮಗಳ ನಡುವೆ ಅನುಸರಿಸುತ್ತಿದ್ದ ತಾರತಮ್ಯ ನೀತಿಯನ್ನು ಖಂಡಿಸಿ ತಾಲ್ಲೂಕಿನ ಮಧುರಖಂಡಿ ಗ್ರಾಮದ ರೈತರು ಪ್ರತಿಭಟನೆ ನಡೆಸಿದರು.ಮಧುರಖಂಡಿ ಗ್ರಾಮದ 33 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಎಇಇ ಸಂಜಯ ಆಲಬಾಳ ಹಾಗೂ ಸೆಕ್ಷೆನ್ ಆಫೀಸರ್ ಪ್ರಶಾಂತ ಪತ್ತಾರ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ರೈತರು ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿದರು.ತಾಲ್ಲೂಕಿನ ಹಿಪ್ಪರಗಿ ಗ್ರಾಮಕ್ಕೆ ದಿನದಲ್ಲಿ 9 ಗಂಟೆಗಳ ಕಾಲ ವಿದ್ಯುತ್ ಪೂರೈಸಲಾಗುತ್ತದೆ. ಆದರೆ ಮಧುರಖಂಡಿ ಗ್ರಾಮಕ್ಕೆ ಕೇವಲ 2 ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಾಗುತ್ತದೆ. ಈ ತಾರತಮ್ಯ ನೀತಿ ಏಕೆ? ಎಂದು ರೈತರು ಅಧಿಕಾರಿಗಳನ್ನು ಖಾರವಾಗಿ ಪ್ರಶ್ನಿಸಿದರು.ಗ್ರಾಮದಲ್ಲಿ ಜರುಗುವ ಮಹಾಲಕ್ಷ್ಮಿ ಜಾತ್ರೆ ವೇಳೆಯಲ್ಲಿ ಸಹ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳುತ್ತದೆ. ಹಾಗಾಗಿ ರಾತ್ರಿಯ ಕತ್ತಲೆಯಲ್ಲಿಯೇ ಜಾತ್ರೆ ಆಚರಿಸಲಾಗುತ್ತದೆ. ಕಾರಣ ಜಾತ್ರೆಯ ಸಂದರ್ಭದಲ್ಲಾದರೂ ರಾತ್ರಿ ವೇಳೆಯಲ್ಲಿ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.ದಿನದಲ್ಲಿ 6 ಗಂಟೆಗಳ ಕಾಲ ಪೂರೈಸಬೇಕಾದ ತ್ರಿಪೇಸ್ ವಿದ್ಯುತ್‌ನ್ನು ನಿರಂತರವಾಗಿ ಒಂದೇ ಅವಧಿಯಲ್ಲಿ 6 ಗಂಟೆಗಳ ಕಾಲ ಪೂರೈಸಬೇಕು ಎಂದು ರೈತರು ಒತ್ತಾಯಿಸಿದರು.ರೈತರನ್ನು ಉದ್ದೇಶಿಸಿ ಹೆಸ್ಕಾಂನ ಎಇಇ ಸಂಜಯ ಆಲಬಾಳ ಮಾತನಾಡಿ, ಹೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದೆ ಎಂದರು.ನದಿ ತೀರದ ಗ್ರಾಮಗಳಿಗೆ ದಿನದಲ್ಲಿ 6 ಗಂಟೆ ಹಾಗೂ ಇತರೆ ಗ್ರಾಮಗಳಿಗೆ 8 ಗಂಟೆಗಳ ಕಾಲ ವಿದ್ಯುತ್ ಪೂರೈಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆ ಪೈಕಿ ಇತರೆ ಗ್ರಾಮಗಳಲ್ಲಿ ಎರಡು ಬಾರಿ 2 ಗಂಟೆಗಳ ಕಾಲಾವಧಿಯಂತೆ ಒಟ್ಟು 4 ಗಂಟೆಗಳ ಕಾಲ ತ್ರಿಪೇಸ್ ಹಾಗೂ ಇನ್ನುಳಿದ 4 ಗಂಟೆಗಳ ಕಾಲ ಸಿಂಗಲ್ ಪೇಸ್ ವಿದ್ಯುತ್ ಪೂರೈಸುವುದಾಗಿ ಭರವಸೆ ನೀಡಿದರು.ಭರಮಪ್ಪ ಮೂಲಿಮನಿ, ಲಕ್ಕಪ್ಪ ಖಾಜಾಪುರ, ಗ್ರಾ.ಪಂ.ಅಧ್ಯಕ್ಷ ರಾಮಪ್ಪ ಜೊಂಗನವರ, ಈಶ್ವರ ಖಿಳೇಗಾಂವಿ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. 300ಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಧಿಕಾರಿಗಳು ನೀಡಿದ ಭರವಸೆ ಮೇರೆಗೆ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry