ಭಾನುವಾರ, ಮೇ 22, 2022
28 °C

ವಿದ್ಯುತ್‌ಪೂರೈಕೆ: ದ್ವಂದ್ವ ನೀತಿಯ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಜ್ಯ ಸರ್ಕಾರ ವಿದ್ಯುತ್ ಪೂರೈಕೆಯಲ್ಲಿ ಅಸಮಾನ ನೀತಿಯನ್ನು ಅನುಸರಿಸುತ್ತಿದ್ದು ರಾಜ್ಯದ ಹಳ್ಳಿಗಳಿಗೆ ಸಮರ್ಪಕ ವಿದ್ಯುತ್ ನೀಡದೆ ದ್ವಂದ್ವ ನೀತಿ ಅನುಸರಿಸುತ್ತಿದೆ~ ಎಂದು ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಸರ್ಕಾರ ಬೆಂಗಳೂರು ನಗರಕ್ಕೆ ದಿನದ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ನೀಡುವುದಾಗಿ ಹೇಳುತ್ತಿದೆ. ಹಳ್ಳಿಗಳಿಗೆ 3 ಗಂಟೆಗಳ ವಿದ್ಯುತ್ ನೀಡುತ್ತಿದ್ದು ಇದರಿಂದ ಆಹಾರ ಉತ್ಪಾದನೆಯ ಮೇಲೆ ಪರಿಣಾಮ ಬೀರಲಿದೆ~ ಎಂದು ದೂರಿದರು.ರಾಜ್ಯದಲ್ಲಿ ಸುಮಾರು 10 ಲಕ್ಷ ಪಂಪ್‌ಸೆಟ್‌ಗಳಿವೆ. ರೈತರು ಬೆಳೆಗಳನ್ನು ಬೆಳೆಯಲು ವಿದ್ಯುತ್ ಅವಶ್ಯಕತೆ ಇದೆ. ಕೇವಲ ಮೂರು ಗಂಟೆಗಳ ಕಾಲ ವಿದ್ಯುತ್ ನೀಡಿದರೆ ಬೆಳೆ ಬೆಳೆಯುವುದಾದರೂ ಹೇಗೆ. ಸರ್ಕಾರ ಕೂಡಲೇ ಹಳ್ಳಿಗಳಿಗೆ ನಿರಂತರ ವಿದ್ಯುತ್ ಒದಗಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಆದರೂ ವಿದ್ಯುತ್ ಉತ್ಪಾದನೆ ಕೊರತೆಯಿದೆ ಎಂದು ಸರ್ಕಾರ ಹೇಳುತ್ತಿದೆ. ತೆಲಂಗಾಣ ಚಳವಳಿಯಿಂದ ರಾಜ್ಯಕ್ಕೆ ಕಲ್ಲಿದ್ದಲ್ಲು ಪೂರೈಕೆಯಾಗದ ಕಾರಣ ವಿದ್ಯುತ್ ಕೊರತೆ ಉಂಟಾಗಿದೆ ಎಂದು ಸರ್ಕಾರ ಕಾರಣ ನೀಡುತ್ತಿರುವುದನ್ನು ಖಂಡಿಸಿದರು.ರಾಜ್ಯದಲ್ಲಿ ಶೇ 90 ರಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ಶೇ 9ರಷ್ಟು ಮಾತ್ರ ಬಳಕೆಯಾಗುತ್ತಿದೆ. ವಿದ್ಯುತ್ ಉತ್ಪಾದನೆಯಲ್ಲಿ ದೊಡ್ಡ ದಂದೆ ನಡೆಯುತ್ತಿದೆ. ಶಾಖೋತ್ಪನ್ನ ಕೇಂದ್ರಗಳಿಗೆ ಕಲ್ಲಿದ್ದಲು ಖರೀದಿಯಲ್ಲೂ ಈ ದಂದೆ ನಡೆಯುತ್ತಿದೆ. ಈ ದಂದೆಯನ್ನು ನಿಯಂತ್ರಿಸಲು ಸರ್ಕಾರ ಕೂಡಲೇ ಸಿಬಿಐ ತನಿಖೆ ನಡೆಸಲು ಮುಂದಾಗಬೇಕು, ಅಥವಾ ತನಿಖಾ ಜವಾಬ್ದಾರಿಯನ್ನು ಪ್ರತ್ಯೇಕ ಸಂಸ್ಥೆಗೆ ನೀಡಬೇಕು ಎಂದು ಒತ್ತಾಯಿಸಿದರು.ಸರ್ಕಾರ ಗ್ರಾಮಾಂತರ ಪ್ರದೇಶಗಳಿಗೆ ನಿರಂತರ ವಿದ್ಯುತ್ ನೀಡಲು ಮುಂದಾಗದಿದ್ದಲ್ಲಿ ಇದೇ 19 ರಂದು ನಗರದ ಸಿಟಿ ರೈಲ್ವೆ ನಿಲ್ದಾಣದಿಂದ ವಿಧಾನಸೌಧದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿದ್ದು ಸಾವಿರಾರು ರೈತರು ಭಾಗವಹಿಸಲಿದ್ದಾರೆ. ನಂತರ ಕರ್ನಾಟಕ ವಿದ್ಯುತ್‌ಚ್ಛಕ್ತಿ ಮಂಡಳಿ ಎದುರು ಅನಿರ್ದಿಷ್ಟ ಕಾಲ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.