ಮಂಗಳವಾರ, ಮಾರ್ಚ್ 9, 2021
18 °C
ಅಭಿವೃದ್ಧಿಯಲ್ಲಿ ಕರ್ನಾಟಕವನ್ನು ಐದನೇ ಸ್ಥಾನದ ಒಳಗೆ ತರುವ ಗುರಿ

ವಿದ್ಯುತ್‌, ನೀರಾವರಿಗೆ ಆದ್ಯತೆ: ಸಿ.ಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯುತ್‌, ನೀರಾವರಿಗೆ ಆದ್ಯತೆ: ಸಿ.ಎಂ

ಬೆಂಗಳೂರು: ರಾಜ್ಯ ಸರ್ಕಾರ ಮುಂದಿನ ನಾಲ್ಕು ವರ್ಷ­ಗಳಲ್ಲಿ ವಿದ್ಯುತ್‌ ಉತ್ಪಾದನೆ ಹೆಚ್ಚಳ, ಕುಡಿ­ಯುವ ನೀರು ಪೂರೈಕೆ ಮತ್ತು ನೀರಾವರಿ ಯೋಜನೆ ಪೂರ್ಣಗೊಳಿಸಲು ಆದ್ಯತೆ ನೀಡಲಿದೆ. ಕರ್ನಾಟಕವನ್ನು ಅಭಿವೃದ್ಧಿಯಲ್ಲಿ ಮುಂದಿರುವ ರಾಜ್ಯಗಳ ಪಟ್ಟಿಯಲ್ಲಿ ಐದನೇ ಸ್ಥಾನದೊಳಕ್ಕೆ ತರುವುದೇ ತಮ್ಮ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿರುವ ಪ್ರಯುಕ್ತ ವಾರ್ತಾ ಇಲಾಖೆ ಪ್ರಕಟಿಸಿರುವ ‘ನುಡಿ­ದಂತೆ ನಡೆದಿದ್ದೇವೆ’ ಎಂಬ ಕಿರು ಹೊತ್ತಿಗೆಯನ್ನು ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂ­ಗ­ಣದಲ್ಲಿ ಬಿಡುಗಡೆ ಮಾಡಿದ ಬಳಿಕ ಪತ್ರಿಕಾ­ಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆ ಮತ್ತು ಮುಂದಿನ ಗುರಿ ಕುರಿತು ವಿವರ ನೀಡಿದರು.‘ಒಂದು ವರ್ಷದಲ್ಲಿ ನುಡಿದಂತೆ ನಡೆದಿದ್ದೇವೆ ಎಂಬ ಹೆಮ್ಮೆ ಇದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಎಸ್‌ಡಿಪಿ) ಹೆಚ್ಚಿಸುವುದು ನಮ್ಮ ಸರ್ಕಾರದ ಆದ್ಯತೆ. ಹಸಿವು ಮುಕ್ತ ಮತ್ತು ಗುಡಿಸಲು ಮುಕ್ತ ರಾಜ್ಯ ನಿರ್ಮಾಣದ ಗುರಿ ಸಾಧಿಸಲು ಕೆಲಸ ಮಾಡುತ್ತೇವೆ’ ಎಂದರು.ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಪ್ರತಿ ವರ್ಷ ಮೂರು ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಇದೆ. 2013–14ರಲ್ಲಿ 3.17 ಲಕ್ಷ ಮನೆಗ­ಳನ್ನು ನಿರ್ಮಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷ 3.70 ಲಕ್ಷ ಮನೆಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.ಅನ್ನಭಾಗ್ಯ ಯೋಜನೆಯ ಯಾವುದೇ ಅಡೆ­ತಡೆ­ಗಳಿಲ್ಲದೇ ಯಶಸ್ವಿಯಾಗಿ  ಅನುಷ್ಠಾನ­ವಾಗುತ್ತಿದೆ. 1.02 ಕೋಟಿ ಕುಟುಂಬಗಳು ಯೋಜನೆಯ ಲಾಭ ಪಡೆಯುತ್ತಿವೆ. ಯೋಜನೆ­ಯಿಂದಾಗಿ ಆಹಾರ ಧಾನ್ಯಗಳ ವಿತರಣೆಗೆ ನೀಡು­ತ್ತಿದ್ದ ಸಹಾ­ಯಧನದ ಮೊತ್ತ ರೂ900 ಕೋಟಿಯಿಂದ ರೂ 4,300 ಕೋಟಿಗೆ ಹೆಚ್ಚಳವಾ­ಗಿದೆ. ಮೂರು ಕೋಟಿ ಜನರಿಗೆ ಅನುಕೂಲ ಆಗಿದೆ ಎಂದರು.ಕ್ಷೀರ ಭಾಗ್ಯ ಅಡಿ ಅಂಗನವಾಡಿಗಳ 39 ಲಕ್ಷ ಮಕ್ಕಳು, 1–10ನೇ ತರಗತಿವರೆಗಿನ 65 ಲಕ್ಷ ಮಕ್ಕಳಿಗೆ ಹಾಲು ವಿತರಿಸಲಾಗುತ್ತಿದೆ ಎಂದರು.

ನೀರಾವರಿಗೆ ಕಡಿಮೆ: ನೀರಾವರಿ ಯೋಜನೆಗಳಿಗೆ ಪ್ರತಿವರ್ಷ ರೂ 10,000 ಕೋಟಿ ವೆಚ್ಚ ಮಾಡುವು­ದಾಗಿ ಕಾಂಗ್ರೆಸ್ ಪಕ್ಷ ಭರವಸೆ ನೀಡಿತ್ತು. ಆದರೆ, ಕಳೆದ ವರ್ಷ ಹೆಚ್ಚು ಸಮಯ ದೊರೆಯದ ಕಾರಣದಿಂದ ರೂ 6,730 ಕೋಟಿ ಮಾತ್ರ ವೆಚ್ಚ ಮಾಡಲು ಸಾಧ್ಯವಾಗಿದೆ. ಈ ವರ್ಷ ರೂ 11,000 ಕೋಟಿ ವೆಚ್ಚ ಮಾಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಯೋಜನೆ ಎಂದು ಕೇಂದ್ರ ಸರ್ಕಾರ ಪರಿಗಣಿಸಿದೆ. ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು. ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣ­ಗೊಳಿಸಲು ಪ್ರಯತ್ನಿಸಲಾಗುವುದು ಎಂದರು.ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 251 ಹೂಡಿಕೆ ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ. ಈ ಯೋಜನೆಗಳಿಂದ ರಾಜ್ಯದಲ್ಲಿ ರೂ 42,117 ಕೋಟಿ ಹೂಡಿಕೆಯಾಗಲಿದ್ದು, 1.70 ಲಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.ನಮ್ಮ ಮೆಟ್ರೊ ಎರಡನೇ ಹಂತಕ್ಕೆ ಒಪ್ಪಿಗೆ ಪಡೆದಿರುವುದು ತಮ್ಮ ಸರ್ಕಾರದ ಪ್ರಮುಖ ಸಾಧನೆ. 42 ಕಿ.ಮೀ. ಉದ್ದದ ಮೆಟ್ರೊ ಮೊದಲನೇ ಹಂತದ ಕಾಮಗಾರಿಗಳು 2015ರ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.ತೆರಿಗೆ ಸಂಗ್ರಹದಲ್ಲಿ ಈ ಸರ್ಕಾರ ವಿಫಲವಾಗಿದೆ ಎಂಬ ಪ್ರತಿಪಕ್ಷಗಳ ಆರೋಪದಲ್ಲಿ ಹುರುಳಿಲ್ಲ. 2013–14ರ ಬಜೆಟ್‌ ಗುರಿಗೆ ( ರೂ 62,464 ಕೋಟಿ) ಹೋಲಿಸಿದರೆ ಶೇಕಡ 97ರಷ್ಟು (ರೂ 60,652 ಕೋಟಿ) ಸಾಧನೆಯಾಗಿದೆ. ವಾಹನ ಮಾರಾಟದಲ್ಲಿನ ಇಳಿಕೆ ಮತ್ತು ಸ್ಥಿರಾಸ್ತಿ ನೋಂದಣಿಯಲ್ಲಿನ ಕುಸಿತದಿಂದಾಗಿ ಗುರಿ ತಲುಪಲು ಸಾಧ್ಯವಾಗಿಲ್ಲ. ಆದರೂ, 2012–13ಕ್ಕಿಂತ ಶೇ 13ರಷ್ಟು ಹೆಚ್ಚಿನ ತೆರಿಗೆ ಸಂಗ್ರಹ ಮಾಡಲಾಗಿದೆ ಎಂದು ವಿವರ ಒದಗಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.