ಭಾನುವಾರ, ಮೇ 16, 2021
28 °C

`ವಿದ್ಯುತ್ ಆಘಾತ'ಕ್ಕೆ ನಲುಗಿದ ಮಿಸಬಾ ನಗರ!

ಪ್ರಜಾವಾಣಿ ವಾರ್ತೆ/ನಾಗರಾಜ ಚಿನಗುಂಡಿ Updated:

ಅಕ್ಷರ ಗಾತ್ರ : | |

ಗುಲ್ಬರ್ಗ:  ನಗರ ಹೊರವಲಯದ ಮಿಸಬಾ ನಗರದಲ್ಲಿ ಅಡ್ಡಲಾಗಿ 11 ಕೆ.ವಿ. ಹೈಟೆನ್ಷನ್ ವಿದ್ಯುತ್ ತಂತಿ ಹಾಯ್ದು ಹೋಗಿದ್ದು, ವಿದ್ಯುತ್ ಕಂಬಗಳ ಹತ್ತಿರ ಮನೆ ಕಟ್ಟಿಕೊಂಡವರ ನೆಮ್ಮದಿ ಕೆಡಿಸಿದೆ.ಬಡವರು, ಕೆಳ ಮಧ್ಯಮ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿರುವ ಈ ಪ್ರದೇಶದಲ್ಲಿ ಮನೆ ಮೇಲ್ಛಾವಣಿಗೆ ತುಂಬಾ ಹತ್ತಿರದಲ್ಲೆ ವಿದ್ಯುತ್ ತಂತಿಗಳಿರುವುದು ಕಂಡುಬರುತ್ತದೆ. ಸಾಮಾನ್ಯವಾಗಿ ರಸ್ತೆಗಳ ಮಗ್ಗುಲಲ್ಲಿ ಸಾಲುಸಾಲಾಗಿ ವಿದ್ಯುತ್ ಕಂಬಗಳಿರುತ್ತವೆ. ಆದರೆ, ಮಿಸಬಾನಗರದ ಒಂದು ಮನೆ ಮೂಲೆಯಿಂದ ಇನ್ನೊಂದು ಮನೆಯ ಮೂಲೆಗೆ ಅಡ್ಡಲಾಗಿ ವಿದ್ಯುತ್ ಕಂಬ ಹಾಕಲಾಗಿದೆ. ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸಾಮಾನ್ಯ ವಿದ್ಯುತ್ ಕಂಬಗಳು ಸರಿಯಾಗಿವೆ. ಗುಲ್ಬರ್ಗ ಗ್ರಾಮೀಣ ಭಾಗಕ್ಕೆ ವಿದ್ಯುತ್ ಪೂರೈಸಲು ಅವಳವಡಿಸಿದ 11 ಕೆ.ವಿ. ತಂತಿಗಳು ಮಾತ್ರ ಅಪಾಯಕಾರಿಯಾಗಿ ಮಾರ್ಪಟ್ಟಿವೆ. ಮಳೆಗಾಲದಲ್ಲಿ ಅಕ್ಷರಶಃ ಮನೆ ಮಂದಿಯೆಲ್ಲ ಆತಂಕದಿಂದಲೇ ದಿನ ಕಳೆಯುವ ಪರಿಸ್ಥಿತಿ ಇದೆ.ನಡೆಯದ ಕಾಮಗಾರಿ: ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಲು 2011ರಲ್ಲೆ ಸರ್ಕಾರ ಮಂಜೂರಿ ನೀಡಿದೆ. ಸ್ಥಳಾಂತರಿಸಿದ ವಿದ್ಯುತ್ ಕಂಬಗಳನ್ನು ಹೀರಾಪುರದಲ್ಲಿ ಹಾಕಲು ಅಲ್ಲಿನ ಜನರು ವಿರೋಧ ವ್ಯಕ್ತಪಡಿಸಿದರು. ರಸ್ತೆಗಳ ಅಂಚಿನಲ್ಲೂ ವಿದ್ಯುತ್ ಕಂಬ ಅಳವಡಿಸಲು ಅವಕಾಶ ನೀಡಲಿಲ್ಲ. ಹೀಗಾಗಿ ಮಿಸಬಾ ನಗರ ನಿವಾಸಿಗಳ ಸಮಸ್ಯೆ ಪರಿಹಾರ ಕಾಣಲಿಲ್ಲ. ಪರ್ಯಾಯ ಯೋಜನೆಯನ್ನು ರೂಪಿಸಿ ಇದೀಗ ಎಲ್ ಆ್ಯಂಟಿ ಟಿ ಕಂಪೆನಿಗೆ ಈ ಕಾಮಗಾರಿಯನ್ನು ಜೆಸ್ಕಾಂ ವಹಿಸಿದೆ. ಕಾಮಗಾರಿ ತುಂಬಾ ಮಂದಗತಿಯಲ್ಲಿ ನಡೆಯುತ್ತಿದೆ ಎಂದು ಜನರು ಆರೋಪಿಸುತ್ತಿದ್ದಾರೆ.`ಅಪಾಯಕಾರಿ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ನಿರಂತರ ಮನವಿ ಸಲ್ಲಿಸುತ್ತಿದ್ದೇವೆ. ಕಾಮಗಾರಿಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಿರುವ ಜೆಸ್ಕಾಂ ಜನರು ಅಹವಾಲು ಕಿವಿಗೆ ಹಾಕಿಕೊಳ್ಳುತ್ತಿಲ್ಲ.ಇದಕ್ಕೆ ಯಾರು ಹೊಣೆಗಾರರು ಎಂಬುದು ತಿಳಿಯುತ್ತಿಲ್ಲ. ವಿದ್ಯುತ್ ಕಂಬ ಅಳವಡಿಸುವ ಕೆಲಸ ನಿರಂತರ ನಡೆಯುತ್ತಿಲ್ಲ' ಎಂದು ಮಿಸಬಾನಗರ ನಿವಾಸಿ ರಫಿಕ್‌ವುಲ್ಲಾ ಅಹ್ಮದ್ ಆರೋಪಿಸಿದರು.`ವಿದ್ಯುತ್ ತಂತಿ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಪಾಲಿಕೆ ಸದಸ್ಯ ಹಾಗೂ ಅಧಿಕಾರಿಗಳಿಗೆ ಕೇಳಿಕೊಂಡಿದ್ದೇವು. ಕೆಲಸ ಮಾಡಿಸಿಕೊಡುತ್ತೇವೆ ಎಂದು ಹೇಳಿ ಹೋಗಿದ್ದಾರೆ.ಆದರೆ ವಿದ್ಯುತ್ ಕಂಬಗಳನ್ನು ಮಾತ್ರ ಸ್ಥಳಾಂತರಿಸಿಲ್ಲ' ಎನ್ನುತ್ತಾರೆ   ಶಕೀಲ್ ಪಟೇಲ್.

ವಿದ್ಯುತ್ `ಶಾಕ್'ಗೆ ಒಳಗಾದವರು

ಹೈಟೆನ್ಷನ್ ವಿದ್ಯುತ್ ಕಂಬಗಳಿಗೆ ಹೊಂದಿಕೊಂಡಿರುವ ಮನೆಗಳ ಜನರು ಮನೆಯಲ್ಲಿ ಭಯದಿಂದಲೇ ಹೆಜ್ಜೆ ಇಡುವಂತಾಗಿದೆ. ಮನೆ ಮೂಲೆಗಳಲ್ಲಿ ವಿದ್ಯುತ್ ಪ್ರವಹಿಸುತ್ತದೆ. `ಪಾತ್ರೆಗಳನ್ನು ಮುಟ್ಟಿದರೆ ವಿದ್ಯುತ್ ಸ್ಪರ್ಶದ ಅನುಭವವಾಗುತ್ತದೆ. ನಾವೆಲ್ಲ ಬಡವರು, ನಮ್ಮ ಗೋಳನ್ನು ಯಾರಿಗೆ ಹೇಳುವುದು ಎಂದು ಸುಮ್ಮನಿದ್ದೇವೆ' ಎನ್ನುತ್ತಾರೆ ಮಿಸಬಾ ನಗರದ ಮಹಿಳೆಯರು.ವಿದ್ಯುತ್ ತಂತಿ ಕೆಳಗಿರುವ ಮನೆಗಳ ಜನರು ಮನೆ ಮೇಲೆ ಹತ್ತುವುದನ್ನೆ ನಿಲ್ಲಿಸಿದ್ದಾರೆ. ಬಹುತೇಕರು ಮೆಟ್ಟಿಲು ಹಾದಿಯನ್ನು ಬಂದ್ ಮಾಡಿಕೊಂಡಿರುವುದು ಕಾಣುತ್ತದೆ'.ಕಾಲ್ಬೆರಳು ಕಳೆದುಕೊಂಡ ಕಾರ್ಮಿಕ

ಮಿಸಬಾ ನಗರದ ಹುಜುರ್ ಪಟೇಲ್ ಎನ್ನುವವರ ಮನೆಯ ಮೇಲೆ ಕಟ್ಟಡ ಕಾಮಗಾರಿ ಮಾಡುತ್ತಿದ್ದ ಅಂಬಿಕಾನಗರದ ಇಬ್ರಾಹಿಂ ಎನ್ನುವ ಕಾರ್ಮಿಕನಿಗೆ ವಿದ್ಯುತ್ ಸ್ಪರ್ಶವಾಗಿ, ಕಾಲಿನ ಬೆರಳುಗಳನ್ನು ಕತ್ತರಿಸಲಾಗಿದೆ.`ಮನೆಯ ಮೇಲಿಂದ ಏಳು ಅಡಿ ಎತ್ತರದಲ್ಲಿ ವಿದ್ಯುತ್ ತಂತಿ ಹಾಯ್ದಿದೆ. ಕುಳಿತುಕೊಂಡೆ ಕಟ್ಟಡ ಕೆಲಸ ಮಾಡುತ್ತಿದ್ದೆವು. ಮೈ ಮರೆತು ಒಮ್ಮೆ ಎದ್ದು ನಿಂತುಕೊಂಡೆ, ಕರೆಂಟ್ ಶಾಕ್‌ಗೆ ತಲೆ ಕೆಳಗಾಗಿ ಕಾಲುಗಳು ವಿದ್ಯುತ್ ತಂತಿಗೆ ಬಡಿಯಿತು.   ಕಾಲ್ಬೆರಳು ತುಂಡರಿಸಿವೆ' ಎಂದು ಕಹಿ ಅನುಭವವನ್ನು ಇಬ್ರಾಹಿಂ ಹೇಳಿದರು. 

-----

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.