ಶುಕ್ರವಾರ, ನವೆಂಬರ್ 22, 2019
19 °C

ವಿದ್ಯುತ್ ಆ್ಯಕ್ಷನ್ ಪ್ರೀತಿ

Published:
Updated:

`ಯಾರೂ ಮಾಡಲಾಗದಂತ ಸಾಹಸ ದೃಶ್ಯಗಳನ್ನು ನಾನು ಮಾಡಿದ್ದೇನೆ'- ಹೀಗಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ ವಿದ್ಯುತ್ ಜಾಮ್ವಾಲ್.`ಕಮಾಂಡೊ' ಚಿತ್ರದಲ್ಲಿ ಮೈನವಿರೇಳಿಸುವಂಥ ಸಾಹಸ ದೃಶ್ಯಗಳಲ್ಲಿ ಪಾಲ್ಗೊಂಡ ಬಗ್ಗೆ ನಟ ವಿದ್ಯುತ್‌ಗೆ ತುಂಬ ಖುಷಿ ಇದೆಯಂತೆ. ಒಂದರ ಹಿಂದೆ ಒಂದರಂತೆ ಎರಡು ಹಿಟ್ ಚಿತ್ರಗಳಲ್ಲಿ ನಟಿಸಿರುವ ವಿದ್ಯುತ್ ಈಗ ಬಾಲಿವುಡ್‌ನಲ್ಲಿ ಹೊಸ ಆ್ಯಕ್ಷನ್ ಹೀರೊ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಪ್ರೇಕ್ಷಕರು ಸಹ ವಿದ್ಯುತ್ ಅವರನ್ನು ಆ್ಯಕ್ಷನ್ ಹೀರೊ ಆಗಿ ಒಪ್ಪಿಕೊಂಡಿದ್ದಾರೆ. ವಿದ್ಯುತ್ ಈ ಹಿಂದೆ ಜಾನ್ ಅಬ್ರಾಹಂ ಅಭಿನಯದ `ಫೋರ್ಸ್' ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.`ಎಲ್ಲ ಬಗೆಯ ಪಾತ್ರಗಳಿಗೂ ಅದರದ್ದೇ ಆದ ಮಹತ್ವವಿರುತ್ತದೆ. ಆದರೆ, ನನಗೆ ಆ್ಯಕ್ಷನ್ ಮೇಲೆ ವಿಪರೀತ ಮೋಹ' ಎಂದು ತಮ್ಮ ಆ್ಯಕ್ಷನ್ ಪ್ರೀತಿಯನ್ನು ತೆರೆದಿಡುತ್ತಾರೆ ವಿದ್ಯುತ್.ಯಾವ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ತಮಗಿಷ್ಟ ಎಂಬುದನ್ನು ವಿದ್ಯುತ್ ದಾಖಲಿಸುವುದು ಹೀಗೆ: `ಸಾಹಸ ಚಿತ್ರಗಳಲ್ಲಿ ನಟಿಸುವಾಗ ಎಂತಹ ಕಠಿಣ ಸವಾಲುಗಳನ್ನು ಎದುರಿಸಲು ಸಿದ್ಧನಿದ್ದೇನೆ. ಸಾಹಸ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳುವ ವೇಳೆ ನಾನು ಯಾವುದೇ ನಿರ್ಬಂಧ ವಿಧಿಸಿಕೊಳ್ಳುವುದಿಲ್ಲ. ಎಷ್ಟೇ ಕಷ್ಟವಾದರೂ ಅದನ್ನು ಮಾಡಿ ಮುಗಿಸುತ್ತೇನೆ'.ಸದ್ಯಕ್ಕೆ ಟಿಗ್ಮಾಂಶು ಧುಲಿಯಾ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ `ಬುಲೆಟ್ ರಾಜಾ' ಚಿತ್ರೀರಣದಲ್ಲಿ ವಿದ್ಯುತ್ ಬ್ಯುಸಿಯಾಗಿದ್ದಾರೆ. `ನನಗೆ ಆ್ಯಕ್ಷನ್, ಕಾಮಿಡಿ, ರೊಮ್ಯಾಂಟಿಕ್, ಥ್ರಿಲ್ಲರ್ ಹೀಗೆ ಎಲ್ಲ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಇಷ್ಟ. ನಾನು ಮೂರು ವರ್ಷದವನಿದ್ದಾಗಿನಿಂದಲೇ ಆ್ಯಕ್ಷನ್ ಬಗ್ಗೆ ಪ್ರೀತಿ ಬೆಳೆಸಿಕೊಂಡೆ. ಅದನ್ನು ಈಗಲೂ ಮುಂದುವರೆಸಿಕೊಂಡು ಹೋಗುವ ಆಸೆ.ಒಂದೇ ಬಗೆಯ ಪಾತ್ರಗಳನ್ನು ನಿರ್ವಹಿಸುತ್ತೇನೆ ಎಂಬ ಬಗ್ಗೆ ಬೇಸರ ನನಗಿಲ್ಲ. ನನ್ನನ್ನು ನಾನು ಆ್ಯಕ್ಷನ್ ಹೀರೊ ಎಂದು ಕರೆದುಕೊಳ್ಳಲು ಇಷ್ಟಪಡುತ್ತೇನೆ' ಎಂದು ಮಾತು ಸೇರಿಸುತ್ತಾರೆ ಅವರು.

 

ಪ್ರತಿಕ್ರಿಯಿಸಿ (+)