ಗುರುವಾರ , ಏಪ್ರಿಲ್ 15, 2021
20 °C

ವಿದ್ಯುತ್ ಕಂಪೆನಿ: 4 ವರ್ಷಗಳಲ್ಲಿ 12,000 ಕೋಟಿ ನಷ್ಟ

ಪ್ರಜಾವಾಣಿ ವಾರ್ತೆ/ಎ.ಎಂ.ಸುರೇಶ Updated:

ಅಕ್ಷರ ಗಾತ್ರ : | |

ಖರೀದಿ ಖರ್ಚಿಗಿಂತ ಹಾನಿಯೇ ಹೆಚ್ಚು!

ಬೆಂಗಳೂರು: ವಿದ್ಯುತ್ ಪ್ರಸರಣ ಮತ್ತು ವಿತರಣೆಯಲ್ಲಿ ಆಗುತ್ತಿರುವ ಹಾನಿಯಿಂದ ಕಳೆದ ನಾಲ್ಕೂವರೆ ವರ್ಷಗಳಲ್ಲಿ ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳಿಗೆ ರೂ12 ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ.ವಿದ್ಯುತ್ ಕೊರತೆ ನೀಗಿಸುವ ಉದ್ದೇಶದಿಂದ ವಿದ್ಯುತ್ ಖರೀದಿಗಾಗಿಯೇ ನಾಲ್ಕೂವರೆ ವರ್ಷಗಳಲ್ಲಿ ರೂ10 ಸಾವಿರ ಕೋಟಿಗೂ ಅಧಿಕ ಹಣ ವೆಚ್ಚವಾಗಿದೆ. ನಷ್ಟದ ಪ್ರಮಾಣ ಖರೀದಿ ವೆಚ್ಚವನ್ನೂ ಮೀರಿಸಿರುವುದು ವಿದ್ಯುತ್ ಸರಬರಾಜು ವಲಯದಲ್ಲಿ ಆತಂಕ ಮೂಡಿಸಿದೆ.2008-09ನೇ ಸಾಲಿನಿಂದ ಇಲ್ಲಿಯವರೆಗೆ ಒಟ್ಟು 35,958.64 ದಶಲಕ್ಷ ಯೂನಿಟ್ ವಿದ್ಯುತ್ ನಷ್ಟವಾಗಿದೆ. ಇದರಿಂದ ಐದೂ ಕಂಪೆನಿಗಳಿಗೆ ರೂ12,444 ಕೋಟಿ ನಷ್ಟವಾಗಿದೆ. ಸದ್ಯ ರಾಜ್ಯದಲ್ಲಿನ ಒಟ್ಟಾರೆ ಪ್ರಸರಣ ಮತ್ತು ವಿತರಣಾ ನಷ್ಟದ ಪ್ರಮಾಣ ಶೇ 21.59ರಷ್ಟಿದೆ ಎಂದು ಇಂಧನ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.ಪ್ರಸರಣ ಮತ್ತು ವಿತರಣಾ ನಷ್ಟವನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಹಲವು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಿಲ್ಲ. ಮಂಗಳೂರು, ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಗಳ ವ್ಯಾಪ್ತಿಯಲ್ಲಿ ನಷ್ಟದ ಪ್ರಮಾಣ ತುಸು ಕಡಿಮೆ ಇದೆ. ಆದರೆ ಉಳಿದ ಕಂಪೆನಿಗಳ ವ್ಯಾಪ್ತಿಯಲ್ಲಿ ನಷ್ಟದ ಪ್ರಮಾಣ ಹೆಚ್ಚು. ಹೀಗಾಗಿ ಆರ್ಥಿಕ ನಷ್ಟ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಲುಕ್ಸಾನು ತಪ್ಪಿಸುವ ನಿಟ್ಟಿನಲ್ಲಿ ಅಗತ್ಯವಿರುವ ಕಡೆ ವಿದ್ಯುತ್ ಉಪ ಕೇಂದ್ರಗಳು ಹಾಗೂ ಹೊಸ ಪ್ರಸರಣ ಮಾರ್ಗಗಳ ನಿರ್ಮಾಣ, ಹಾಲಿ ಇರುವ ವಿದ್ಯುತ್ ಉಪ ಕೇಂದ್ರಗಳ ಸಾಮರ್ಥ್ಯ ಹೆಚ್ಚಿಸುವುದು, ಸ್ಮಾರ್ಟ್ ಮೀಟರ್‌ಗಳ ಅಳವಡಿಕೆ, ಶೇ 100ರಷ್ಟು ಮೀಟರ್ ಅಳವಡಿಕೆ ಮತ್ತು ಬಿಲ್ಲಿಂಗ್, ಕೆಟ್ಟು ಹೋದ ಮೀಟರ್‌ಗಳ ಬದಲಾವಣೆ, ಜಾಗೃತದಳ/ ಮೀಟರ್ ಪರೀಕ್ಷಾ ವಿಭಾಗಗಳ ಚಟುವಟಿಕೆ ಚುರುಕುಗೊಳಿಸಲಾಗಿದೆ.ಹೆಚ್ಚುವರಿ ಪರಿವರ್ತಕಗಳನ್ನು ಒದಗಿಸಿ ಎಚ್.ಟಿ (ಹೈಟೆನ್ಷನ್) ಮಾರ್ಗಗಳನ್ನು ಹೆಚ್ಚಿಸುವುದು, ವಿತರಣಾ ಪರಿವರ್ತಕಗಳಿಗೆ ಮೀಟರ್ ಅಳವಡಿಕೆ, ಅಧಿಕ ಒತ್ತಡವಿರುವ 11 ಕೆ.ವಿ. ಫೀಡರ್‌ಗಳ ವಿಭಜನೆ, ಉದ್ದದ ಎಲ್.ಟಿ (ಲೋಟೆನ್ಷನ್) ಮಾರ್ಗಗಳನ್ನು ಮೊಟಕುಗೊಳಿಸಲು ಹೆಚ್ಚುವರಿ ವಿದ್ಯುತ್ ಜಾಲ ಒದಗಿಸುವುದು ಸೇರಿದಂತೆ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ನಷ್ಟಕ್ಕೆ ಕಾರಣ: ಸದ್ಯ 11 ಕೆ.ವಿ ಲೈನ್‌ಗಳನ್ನು ವಿದ್ಯುತ್ ಪರಿವರ್ತಕದವರೆಗೆ ಮಾತ್ರ ಬಳಕೆ ಮಾಡಲಾಗುತ್ತಿದೆ. ಪರಿವರ್ತಕದಿಂದ ಗ್ರಾಹಕರ ಪಂಪ್‌ಸೆಟ್ ಅಥವಾ ಮನೆ ತುಂಬ ದೂರವಿರುತ್ತದೆ. ಇದರಿಂದಾಗಿ ಗುಣಮಟ್ಟದ ವಿದ್ಯುತ್ ಪೂರೈಕೆಯಾಗುವುದಿಲ್ಲ. ಅಲ್ಲದೆ ನಷ್ಟ ಜಾಸ್ತಿ ಇರುತ್ತದೆ. ಇದನ್ನು ತಪ್ಪಿಸಬೇಕಾದರೆ ಗ್ರಾಹಕರ ಸಂಪರ್ಕದ ಹತ್ತಿರದವರೆಗೂ 11 ಕೆ.ವಿ ಲೈನ್‌ಗಳನ್ನು ಅಳವಡಿಸಬೇಕು ಎಂಬುದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ಅಭಿಪ್ರಾಯ.ಹೈವೊಲ್ಟೇಜ್ ಡಿಸ್ಟ್ರಿಬ್ಯೂಷನ್ ಸಿಸ್ಟಂ (ಎಚ್‌ವಿಡಿಸ್) ಜಾರಿಗೆ ತರುವುದರಿಂದ ಗ್ರಾಹಕರಿಗೆ ಒಳಿತಾಗುತ್ತದೆ. ಅಲ್ಲದೆ ಎಚ್.ಟಿ ಲೈನ್ ಅಳವಡಿಸಿದಾಗ ವಿದ್ಯುತ್ ಕಳ್ಳತನ ಮಾಡಲು ಆಗುವುದಿಲ್ಲ. ಜೀವಕ್ಕೆ ಎರವಾಗುವುದರಿಂದ ವಾಮಮಾರ್ಗದ ಮೂಲಕ ವಿದ್ಯುತ್ ಕಳ್ಳತನ ಮಾಡಲು ಹಿಂಜರಿಯುತ್ತಾರೆ ಎಂದರು.ಆಂಧ್ರಪ್ರದೇಶದಲ್ಲಿ ಈ ಪದ್ಧತಿಯನ್ನು ಅಳವಡಿಸಲಾಗಿದೆ. ಇದು ಪರಿಣಾಮಕಾರಿ. ತಲಾ ಒಂದೊಂದು ವಿಭಾಗದಲ್ಲಾದರೂ ಇದನ್ನು ಅಳವಡಿಸುವಂತೆ ಕಂಪೆನಿಗಳಿಗೆ ಸೂಚನೆ ನೀಡಲಾಗಿದೆ. ವೊಲ್ಟೇಜ್ ಜಾಸ್ತಿ ಇದ್ದಷ್ಟೂ ನಷ್ಟದ ಪ್ರಮಾಣ ಕಡಿಮೆಯಾಗುತ್ತದೆ ಎಂದು ಅವರು ತಿಳಿಸಿದರು.ಪ್ರಸರಣ ಮತ್ತು ವಿತರಣಾ ನಷ್ಟವನ್ನು ಪೂರ್ಣ ಪ್ರಮಾಣದಲ್ಲಿ ತಪ್ಪಿಸಲು ಸಾಧ್ಯವಿಲ್ಲ. ಆದರೆ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದರೆ ಆರ್ಥಿಕ ನಷ್ಟದ ಪ್ರಮಾಣವನ್ನು ಶೇ 50 ರಷ್ಟು ಇಳಿಸಬಹುದಾಗಿತ್ತು ಎಂದರು.

ರಾಜ್ಯದಲ್ಲಿ ಸದ್ಯ 2,31,037 ಸರ್ಕಿಟ್ ಕಿ.ಮೀ ಎಚ್.ಟಿ ಹಾಗೂ 4,77,958 ಸರ್ಕಿಟ್ ಕಿ.ಮೀ.ಎಲ್.ಟಿ ಮಾರ್ಗವಿದೆ. ಎಲ್.ಟಿಯಲ್ಲಿ ನಷ್ಟದ ಪ್ರಮಾಣ ಜಾಸ್ತಿ ಇರುವುದರಿಂದ ಎಲ್.ಟಿ ಮಾರ್ಗಗಳನ್ನು ಎಚ್.ಟಿ.ಗೆ ಪರಿವರ್ತನೆ ಮಾಡಿ ಎಂದು ಆಯೋಗವು ಕಂಪೆನಿಗಳಿಗೆ ನಿರ್ದೇಶನ ನೀಡಿದೆ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.