ಸೋಮವಾರ, ನವೆಂಬರ್ 18, 2019
23 °C

ವಿದ್ಯುತ್ ಕಡಿತ: ಮೆಟ್ರೊ ಸ್ಥಗಿತ

Published:
Updated:

ಬೆಂಗಳೂರು: ಹೂಡಿಯ 400 ಕೆ.ವಿ. ಹಾಗೂ ಎಚ್‌ಎಎಲ್‌ನ 220 ಕೆ.ವಿ. ಕೇಂದ್ರಗಳಲ್ಲಿ ಕಾಣಿಸಿಕೊಂಡ ವಿದ್ಯುತ್ ವೈಫಲ್ಯದಿಂದಾಗಿ ಶುಕ್ರವಾರ ಸಂಜೆ 4.57ರಿಂದ 5.10ರ ವರೆಗೆ ಮೆಟ್ರೊ ರೈಲು ಸಂಚಾರ ಸ್ಥಗಿತಗೊಂಡಿತು.ಈ ಸಂದರ್ಭದಲ್ಲಿ ನಾಲ್ಕು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಒಂದು ರೈಲು ಎಂ. ಜಿ. ರಸ್ತೆ ನಿಲ್ದಾಣದ ಬಳಿ, ಮತ್ತೊಂದು ಬೈಯಪ್ಪನಹಳ್ಳಿ ನಿಲ್ದಾಣದ ಬಳಿ, ಮತ್ತೆರಡು ರೈಲುಗಳು ಇಂದಿರಾನಗರ ಹಾಗೂ ಹಲಸೂರು ಬಳಿ ನಿಂತವು. 5.10ರ ವೇಳೆಗೆ ಸಂಚಾರ ಸಹಜ ಸ್ಥಿತಿಗೆ ಮರಳಿತು ಎಂದು ಮೆಟ್ರೊ ಪ್ರಕಟಣೆ ತಿಳಿಸಿದೆ.`ಧವನಂ'ಗೆ ನೋಟಿಸ್

ಬೆಂಗಳೂರು:
ಮಡಿವಾಳ ವಾಣಿಜ್ಯ ಸಂಕೀರ್ಣದ ಬಾಕಿ ಉಳಿಸಿಕೊಂಡಿರುವ ಗುತ್ತಿಗೆ ಮೊತ್ತ ರೂ11.68 ಕೋಟಿಯನ್ನು ತಕ್ಷಣ ಪಾವತಿಸಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಂಕೀರ್ಣವನ್ನು ಗುತ್ತಿಗೆ ಪಡೆದಿರುವ ಧವನಂ ಜ್ಯುವೆಲರ್ಸ್‌ ಸಂಸ್ಥೆಗೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ.ಧವನಂ ಜ್ಯುವೆಲರ್ಸ್‌ ಸಂಸ್ಥೆ 2005ರ ಜೂನ್ 21ರಂದು ಬಿಬಿಎಂಪಿ ಜತೆ ಒಪ್ಪಂದ ಮಾಡಿಕೊಂಡು ಮಡಿವಾಳ ವಾಣಿಜ್ಯ ಕಟ್ಟಡವನ್ನು 30 ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿತ್ತು. ಅದಕ್ಕೆ ಸಂಬಂಧಿಸಿದಂತೆ ಎರಡು ಪೂರಕ ಒಪ್ಪಂದಗಳನ್ನೂ ಮಾಡಿಕೊಳ್ಳಲಾಗಿದೆ. ಈ ಒಪ್ಪಂದಗಳ ಪ್ರಕಾರ 2006ರ ನವೆಂಬರ್‌ನಿಂದ 2013ರ ಏಪ್ರಿಲ್ ಅವಧಿಗೆ ಒಟ್ಟು ರೂ 25.08 ಕೋಟಿ ಮೊತ್ತವನ್ನು ಧವನಂ ಸಂಸ್ಥೆ ತುಂಬಬೇಕಿತ್ತು.ಗುತ್ತಿಗೆ ಮೊತ್ತದಲ್ಲಿ ಇದುವರೆಗೆ ರೂ13.91 ಕೋಟಿ ಪಾವತಿ ಮಾಡಲಾಗಿದೆ. ಉಳಿದ ಮೊತ್ತವನ್ನು ಸಂಸ್ಥೆ ಬಾಕಿ ಉಳಿಸಿಕೊಂಡಿದೆ. ಈ ಸಂಬಂಧ ತಿಳಿವಳಿಕೆ ಪತ್ರ ಜಾರಿ ಮಾಡಿದ್ದರೂ ಹಣ ಪಾವತಿಗೆ ಕ್ರಮ ಕೈಗೊಂಡಿಲ್ಲ. ಬ್ಯಾಂಕ್ ಖಾತರಿಯನ್ನೂ ನವೀಕರಣ ಮಾಡಿಲ್ಲ ಎಂದು ನೋಟಿಸ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.ಬಾಕಿ ಮೊತ್ತ ತುಂಬದಿದ್ದರೆ ಕಾನೂನು ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.ಬಾಕಿ ನೀಡಲು ಪತ್ರ

ಬೆಂಗಳೂರು:
ಕಲಾಸಿಪಾಳ್ಯದಲ್ಲಿ ಬಿಬಿಎಂಪಿಯಿಂದ ಗುತ್ತಿಗೆ ಪಡೆಯಲಾಗಿರವ ಹಣ್ಣು ಮತ್ತು ತರಕಾರಿಗಳ ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆ ಕಟ್ಟಡದ ಬಾಕಿ ಗುತ್ತಿಗೆ ಮೊತ್ತ ರೂ 3.60 ಕೋಟಿಯನ್ನು ತಕ್ಷಣ ನೀಡಬೇಕು ಎಂದು ಬಿಬಿಎಂಪಿ ಆಯುಕ್ತ ಸಿದ್ದಯ್ಯ ರಾಜ್ಯ ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

1987ರಿಂದ 2013ರವರೆಗೆ ಪ್ರತಿ ವರ್ಷದ ಪರಿಷ್ಕೃತ ಗುತ್ತಿಗೆ ಮೊತ್ತವನ್ನು ಪಾವತಿಸದೆ ಹಾಗೇ ಉಳಿಸಿಕೊಂಡು ಬರಲಾಗಿದ್ದು, ಆ ಮೊತ್ತ ಇದೀಗ ರೂ 3.60 ಕೋಟಿಗೆ ತಲುಪಿದೆ. ಕೂಡಲೇ ಪಾವತಿ ಮಾಡಿ, ಕಾನೂನು ಕ್ರಮ ತಪ್ಪಿಸಿಕೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

 

ಪ್ರತಿಕ್ರಿಯಿಸಿ (+)