ಭಾನುವಾರ, ಏಪ್ರಿಲ್ 18, 2021
26 °C

ವಿದ್ಯುತ್ ಕಡಿತ: ವಿದ್ಯಾರ್ಥಿಗಳ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ಪರಿಕ್ಷಾ ಸಮಯದಲ್ಲಿ ವಿದ್ಯುತ್ ಕಡಿತಗೊಳಿಸುವುದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೆ ತೀವ್ರ ಪರಿಣಾಮ ಬೀಳಲಿದ್ದು, ತಕ್ಷಣ ಬಡಾವಣೆಗೆ ವಿದ್ಯುತ್ ಸರಬರಾಜು ಮಾಡುವಂತೆ ಕರ್ನಾಟಕ ಪ್ರಾಂತ ರೈತ ಸಂಘದ  ತಾಲ್ಲೂಕು ಕಾರ್ಯದರ್ಶಿ ಸಿ.ಆರ್.ನಾಗೇಶ್ ಅವರು ಬೆಸ್ಕಾಂ ಇಲಾಖೆಯನ್ನು ಆಗ್ರಹಿಸಿದರು.ಅವರು ತಿರುಮಲೆ ನರಸಿಂಹ ಬೆಟ್ಟದ ತಪ್ಪಲಿನಲ್ಲಿರುವ ಕೊಳಚೆ ನಿರ್ಮೂಲನಾ ಮಂಡಳಿ ನಿರ್ಮಿತ ಬಡಾವಣೆಯಲ್ಲಿ ವಿದ್ಯುತ್ ಸರಬರಾಜು ಕಡಿತದ ವಿರುದ್ದ ರಾಜ್ಯ ಪ್ರಾಂತ ರೈತ ಸಂಘದ ಸಹಯೋಗದಲ್ಲಿ  ಬಡಾವಣೆಯ ಶಾಲಾಮಕ್ಕಳು ಮಂಗಳವಾರ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.ಕಳೆದ ತಿಂಗಳು ಪ್ರತಿಭಟನೆ ನಡೆಸಿದಾಗ ತಿಂಗಳ ಒಳಗೆ ವಿದ್ಯುತ್ ಸಂಪರ್ಕ ಸರಿಪಡಿಸುವುದಾಗಿ  ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳು ಮತ್ತು ಶಾಸಕ ಎಚ್.ಸಿ.ಬಾಲಕೃಷ್ಣ ಹಾಗೂ ಪುರಸಭೆ ಸದಸ್ಯರಾದ ಟಿ.ಎಸ್.ಗಂಗಯ್ಯ, ಪುರುಷೋತ್ತಮ್ ಭರವಸೆ ನೀಡಿದ್ದರು. ಈಗ ಒಂದು ತಿಂಗಳು ಮುಗಿದಿದೆ. ಆದರೂ ಪದೇ ಪದೇ ವಿದ್ಯುತ್ ಕಡಿತ ಗೊಳಿಸಲಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಕೆಪಿಆರ್‌ಎಸ್ ಘಟಕದ ಅಧ್ಯಕ್ಷ ಕಾಳಿಯಪ್ಪ ಮನವಿ ಮಾಡಿದರು.ಬಡಾವಣೆಯಲ್ಲಿ  125 ಬಡ ಮಕ್ಕಳಿದ್ದಾರೆ. ಅಂಗನವಾಡಿಯಿಂದ ಪದವಿ ತರಗತಿವರೆಗೆ ವಿದ್ಯಾಭ್ಯಾಸ ಮಾಡುವವರಿದ್ದಾರೆ. ಈ ಬಡಾವಣೆಯಿಂದ ವಿವಿಧ ಶಾಲಾ - ಕಾಲೇಜಿಗೆ ಹೋಗಿ ಬರುತ್ತಿದ್ದಾರೆ. ನಮ್ಮ ಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಿ ಆಗಬೇಕು. ಅದಕ್ಕಾಗಿ ನಮ್ಮ ಬಡಾವಣೆಗೆ ವಿದ್ಯುತ್ ಪೂರೈಸಬೇಕೆಂದು ಕೆಪಿಆರ್‌ಎಸ್ ಮಹಿಳಾ ಘಟಕದ ಉಪಾಧ್ಯಕ್ಷೆ ನಾಗರತ್ನ ತಿಳಿಸಿದರು. ಈ ಸಂದರ್ಭದಲ್ಲಿ ರಾಘವ, ಅಶ್ವಿನಿ, ಮಂಜು, ಅನಿತಮ್ಮ, ಗೌರಮ್ಮ, ನಾರಾಯಣಪ್ಪ ಇತರರು ಮಾತನಾಡಿದರು. ಪ್ರತಿಭಟನೆಯಲ್ಲಿ  ವಿವಿಧ ಶಾಲೆಯ ಮಕ್ಕಳು  ಮತ್ತು ಬಡಾವಣೆಯ  ನಿವಾಸಿಗಳು ಭಾಗವಹಿಸಿದ್ದರು.

‘ಪ್ರತಿಭಟನೆಗೆ ಸ್ಪಂದನೆ: ದೊರಕಿದ ವಿದ್ಯುತ್ ಪೂರೈಕೆ’

ಮಾಗಡಿ:  ಬಡಾವಣೆಯಲ್ಲಿ ವಿದ್ಯುತ್ ಸರಬರಾಜಿಗೆ ಆಗ್ರಹಿಸಿ ಮಕ್ಕಳು ಪ್ರತಿಭಟಿಸಿದ್ದನ್ನು ಕೇಳಿದ ಪುರಸಭೆಯ ಸದಸ್ಯ ಟಿ.ಎಸ್.ಗಂಗಯ್ಯ ಅವರು, ಬೆಸ್ಕಾಂ ಮತ್ತು ಪುರಸಭೆಯ ಅಧಿಕಾರಿಗಳೊಂದಿಗೆ ಮಾತನಾಡಿ, ಸಂಜೆಯೊಳಗಾಗಿ ಬಡಾವಣೆಗೆ ವಿದ್ಯುತ್ ಸಂಪರ್ಕ ಕೊಡಿಸಿದರು.ನಂತರ ‘ಪತ್ರಿಕೆ’ಯೊಂದಿಗೆ ಮಾತನಾಡಿದ ಅವರು, ಬಡಾವಣೆಯ ಪಕ್ಕದಲ್ಲಿರುವ ಹೊಲ ಮತ್ತು ತೋಟಗಳ ರೈತರು ವಿದ್ಯುತ್ ಕಡಿತಗೊಳಿಸಲು ಬೆಸ್ಕಾಂನವರಲ್ಲಿ ಕೇಳಿದ್ದರು. ಆದ್ದರಿಂದ ಈ ಬಡಾವಣೆಯಲ್ಲಿ ವಿದ್ಯುತ್ ಕಡಿತ ಗೊಳಿಸಲಾಗಿತ್ತು. ಇನ್ನೊಂದು ತಿಂಗಳ ಒಳಗಾಗಿ ವಿದ್ಯುತ್ ಸಂಪರ್ಕವನ್ನು ಸರಿಪಡಿಸುವುದಾಗಿ ಬೆಸ್ಕಾಂ ಮತ್ತು ಪುರಸಭೆ ಹಾಗೂ ಕೊಳಚೆ ನಿರ್ಮೂಲನಾ  ಮಂಡಳಿಯ ಅಧಿಕಾಗಳು ತಿಳಿಸಿದ್ದಾರೆ ಎಂದು ಪುರಸಭೆಯ ಸದಸ್ಯ ಟಿ.ಎಸ್.ಗಂಗಯ್ಯ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.