ವಿದ್ಯುತ್ ಕೊಡಿ, ಕಲ್ಲಿದ್ದಲೂ ಕೊಡಿ

7

ವಿದ್ಯುತ್ ಕೊಡಿ, ಕಲ್ಲಿದ್ದಲೂ ಕೊಡಿ

Published:
Updated:

ಬೆಂಗಳೂರು: ರಾಜ್ಯವು ತೀವ್ರ ವಿದ್ಯುತ್ ಕ್ಷಾಮ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಗ್ರಿಡ್‌ನಿಂದ ಹಂಚಿಕೆಯಾಗದ ಕೋಟಾದಡಿ ಪ್ರತಿದಿನ 500 ಮೆಗಾವಾಟ್ ವಿದ್ಯುತ್ ಪೂರೈಸಲು ಹಾಗೂ ರಾಜ್ಯದ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಗೆ ಹೆಚ್ಚುವರಿಯಾಗಿ ಪ್ರತಿನಿತ್ಯ 10 ಸಾವಿರ ಟನ್ ಕಲ್ಲಿದ್ದಲು ಒದಗಿಸಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಅಭಾವ ಮತ್ತು ಕಲ್ಲಿದ್ದಲು ಕೊರತೆಯಿಂದ ರಾಜ್ಯದ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳ ಮೇಲೆ ಆಗಿರುವ ಪ್ರತಿಕೂಲ ಪರಿಣಾಮ ವಿವರಿಸಿ ಗೌಡರು ಕೇಂದ್ರ ಇಂಧನ ಸಚಿವ ಸುಶೀಲ್‌ಕುಮಾರ್ ಶಿಂಧೆ ಮತ್ತು ಕಲ್ಲಿದ್ದಲು ಸಚಿವ ಶ್ರೀಪ್ರಕಾಶ್ ಜೈಸ್ವಾಲ್ ಅವರಿಗೆ ಬರೆದಿರುವ ಪ್ರತ್ಯೇಕ ಪತ್ರದಲ್ಲಿ ಈ ಮನವಿ ಮಾಡಿದ್ದಾರೆ.ಪ್ರತ್ಯೇಕ ತೆಲಂಗಾಣ ರಾಜ್ಯಕ್ಕೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದ ಕಾರಣ ಆಂಧ್ರಪ್ರದೇಶದ ಸಿಂಗರೇಣಿಯಿಂದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕೆ (ಆರ್‌ಟಿಪಿಎಸ್) ಕಲ್ಲಿದ್ದಲು ಪೂರೈಕೆ ಆಗುತ್ತಿಲ್ಲ. `ವೆಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್~ನಿಂದ ಪೂರೈಕೆಯಾಗುತ್ತಿರುವ ಕಲ್ಲಿದ್ದಲು ಆರ್‌ಟಿಪಿಎಸ್‌ನ 8 ಘಟಕಗಳಿಗೆ ಸಾಕಾಗುತ್ತಿಲ್ಲ. ಈ ಪೈಕಿ 4-5 ಘಟಕಗಳಲ್ಲಿ ಮಾತ್ರ ಪ್ರಸ್ತುತ ವಿದ್ಯುತ್ ಉತ್ಪಾದನೆ ಆಗುತ್ತಿದೆ ಎಂದು ಗೌಡರು ಪತ್ರದಲ್ಲಿ ವಿವರಿಸಿದ್ದಾರೆ.ಆಂಧ್ರಪ್ರದೇಶದ ರಾಮಗುಂಡಂ ಮತ್ತು ಸಿಂಹಾದ್ರಿಯಲ್ಲಿರುವ ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್ ನಿಗಮದ (ಎನ್‌ಟಿಪಿಸಿ) ಘಟಕಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್ ದೊರೆಯುತ್ತಿಲ್ಲ. ಕೂಡುಂಕುಳಂ ಅಣುಸ್ಥಾವರದಿಂದ ಬರಬೇಕಿದ್ದ 220 ಮೆಗಾವಾಟ್ ವಿದ್ಯುತ್ ಕೂಡ ರಾಜ್ಯಕ್ಕೆ ಬಂದಿಲ್ಲ ಎಂದು ಅವರು ತಿಳಿಸಿದ್ದಾರೆ. ವೆಸ್ಟರ್ನ್ ಕೋಲ್‌ಫೀಲ್ಡ್ಸ್ ಲಿಮಿಟೆಡ್ ಮತ್ತು ಮಹಾನದಿ ಕೋಲ್‌ಫೀಲ್ಡ್ಸ್ ಲಿಮಿಟೆಡ್‌ಗಳಿಗೆ ರಾಜ್ಯಕ್ಕೆ 10 ಸಾವಿರ ಟನ್ ಹೆಚ್ಚುವರಿ ಕಲ್ಲಿದ್ದಲು ಪೂರೈಸಲು ನಿರ್ದೇಶನ ನೀಡಬೇಕು. ರಾಜ್ಯ ವಿದ್ಯುತ್ ನಿಗಮ (ಕೆಪಿಸಿಎಲ್) ಸ್ಥಾಪಿಸಲು ಉದ್ದೇಶಿಸಿರುವ ನಾಲ್ಕು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಗೂ ಅಗತ್ಯ ಕಲ್ಲಿದ್ದಲು ಪೂರೈಸಬೇಕು ಎಂದು ಅವರು ಕೋರಿದ್ದಾರೆ.

`ವಿಶೇಷ ಒತ್ತಡ~: `ಕಲ್ಲಿದ್ದಲು ಮತ್ತು ವಿದ್ಯುತ್ ಪೂರೈಕೆ ಸಂಬಂಧ ಕೇಂದ್ರದ ಮೇಲೆ ಒತ್ತಡ ತರಲು ಪ್ರಯತ್ನ ಮಾಡುತ್ತೇವೆ. ಸಚಿವರಾದ ಶಿಂಧೆ ಮತ್ತು ಜೈಸ್ವಾಲ್ ಅವರ ಜೊತೆ ದೂರವಾಣಿ ಮುಖಾಂತರವೂ ಮಾತುಕತೆ ನಡೆಸುತ್ತೇನೆ~ ಎಂದು ಗೌಡರು ಗೃಹ ಕಚೇರಿ `ಕೃಷ್ಣಾ~ದಲ್ಲಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.ರಾಜ್ಯದ ವಿದ್ಯುತ್ ಸಮಸ್ಯೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಹೇಳಿಕೆ ಕುರಿತು ಪ್ರಶ್ನಿಸಿದಾಗ, `ಕೇಂದ್ರ ಸರ್ಕಾರ ರಾಜ್ಯಕ್ಕೆ ಎಷ್ಟು ವಿದ್ಯುತ್ ನೀಡಿದೆ ಎಂಬುದು ಲೋಕಕ್ಕೇ ತಿಳಿದ ವಿಷಯ. ಆದರೆ ಒಕ್ಕೂಟ ವ್ಯವಸ್ಥೆ ಒಪ್ಪಿಕೊಂಡಿರುವ ದೇಶದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಪ್ರೇರಿತವಾಗಿ ರಾಜ್ಯದ ಕುರಿತು ಮಲತಾಯಿ ಧೋರಣೆ ಅನುಸರಿಸಬಾರದು~ ಎಂದು ಹೇಳಿದರು.ಲೋಕಾಯುಕ್ತರ ನೇಮಕ: ರಾಜ್ಯಕ್ಕೆ ನೂತನ ಲೋಕಾಯುಕ್ತರ ನೇಮಕ ಕುರಿತಂತೆ ಸಲಹೆ ಕೋರಿ ವಿಧಾನಮಂಡಲದ ಉಭಯ ಸದನಗಳ ವಿರೋಧ ಪಕ್ಷದ ನಾಯಕರಿಗೆ ಪತ್ರ ಬರೆಯಲಾಗಿದೆ. ಅವರಿಂದ ಉತ್ತರ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಂಪುಟ ವಿಸ್ತರಣೆ ಯಾವಾಗ ಎಂಬ ಪ್ರಶ್ನೆಗೆ, `ಕಾಲ ಕೂಡಿಬಂದಾಗ ಆಗುತ್ತದೆ~ ಎಂದು ಚುಟುಕಾಗಿ ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry