ಬುಧವಾರ, ಮೇ 12, 2021
17 °C

ವಿದ್ಯುತ್ ಕೊರತೆ ಆಗದು: ಶೋಭಾ ವಿಶ್ವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಜ್ಯದಲ್ಲಿ ಸದ್ಯ ವಿದ್ಯುತ್ ಕೊರತೆ ಉಂಟಾಗುವುದಿಲ್ಲ~ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.ಗುರುವಾರ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) ಕಚೇರಿಯಲ್ಲಿ ದಿನದ 24 ಗಂಟೆ ಸಹಾಯವಾಣಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.`ಸಾಮಾನ್ಯವಾಗಿ ಪ್ರತಿ ವರ್ಷ ಏ. 20 ರವರೆಗೆ ವಿದ್ಯುತ್ ಬೇಡಿಕೆ ಹೆಚ್ಚಾಗಿರುತ್ತಿತ್ತು. ಆದರೆ, ಈ ಬಾರಿ ಏ. 10ರ ಹೊತ್ತಿಗೆ ಬೇಡಿಕೆ ಇಳಿಮುಖವಾಗಿದೆ. ಹೀಗಾಗಿ ಈ ಬಾರಿ ಯಾವುದೇ ವಿದ್ಯುತ್ ಸಮಸ್ಯೆಯಾಗುವುದಿಲ್ಲ. ನಮ್ಮಲ್ಲಿರುವ ವಿದ್ಯುತ್ ಸಾಕಾಗಲಿದೆ~ ಎಂದರು.`ಬಳ್ಳಾರಿಯ 2 ನೇ ಘಟಕವು 15 ದಿನದೊಳಗೆ ಆರಂಭವಾಗುವ ಸಾಧ್ಯತೆ ಇದೆ~ ಎಂದು ಹೇಳಿದ ಅವರು `ಛತ್ತೀಸ್‌ಗಡ ರಾಜ್ಯದಿಂದ ಕಲ್ಲಿದ್ದಲು ಪಡೆಯಲು ಮಾತುಕತೆ ನಡೆಯುತ್ತಿದೆ~ ಎಂದರು.ಸಹಾಯವಾಣಿ: ರಾಜ್ಯದ ಬರಗಾಲದ ಹಿನ್ನೆಲೆಯಲ್ಲಿ ವಿದ್ಯುತ್, ಕುಡಿಯುವ ನೀರಿನ ಸಮಸ್ಯೆ, ಪಂಪ್‌ಸೆಟ್ ಕೆಟ್ಟು ಹೋಗುವುದು ಕುರಿತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ದಿನದ 24 ಗಂಟೆಗಳ ಸಹಾಯವಾಣಿಗೆ ಚಾಲನೆ ನೀಡಿದರು.`ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಕುರಿತು ಸಾರ್ವಜನಿಕರ ದೂರುಗಳು ಬಂದಾಗ ತಕ್ಷಣ ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ತಕ್ಷಣ ಪ್ರತಿಕ್ರಿಯಿಸಬೇಕು ಎಂದು ಸೂಚನೆ ನೀಡಿದರು.`ಬೆಂಗಳೂರಿನಲ್ಲಿ 25 ಲೈನ್‌ಗಳು, ಬಾಗೇಪಲ್ಲಿಯಲ್ಲಿ 25 ಲೈನ್‌ಗಳು ಸದ್ಯಕ್ಕೆ ಕಾರ್ಯನಿರ್ವಹಿಸಲಿವೆ. ಅಗತ್ಯ ಬಿದ್ದರೆ ಮತ್ತಷ್ಟು ಲೈನ್‌ಗಳನ್ನು ಆರಂಭಿಸಲಾಗುವುದು. ಈ ಲೈನ್‌ಗಳು ಮೂರು ತಿಂಗಳು ಕಾಲ ಕಾರ್ಯ ನಿರ್ವಹಿಸಲಿವೆ. ಆನಂತರ ಇಲಾಖೆಗೆ ಸಂಬಂಧಿಸಿದ ಲೈನುಗಳು ಮಾತ್ರ ಕೆಲಸ ಮಾಡಲಿವೆ~ ಎಂದರು.`ಗ್ರಾಹಕರು 18004252627 ಕ್ಕೆ ಉಚಿತವಾಗಿ ಕರೆ ಮಾಡಬಹುದು. ಜೊತೆಗೆ 080-22873333 ಗೆ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು~ ಎಂದು ಹೇಳಿದರು.ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಣಿವಣ್ಣನ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.