ಬುಧವಾರ, ನವೆಂಬರ್ 13, 2019
23 °C

ವಿದ್ಯುತ್ ತಂತಿ ದುರಸ್ತಿ ವಿಳಂಬ: ಪ್ರತಿಭಟನೆ

Published:
Updated:

ಮದ್ದೂರು: ಪಟ್ಟಣದ ಹೊಳೆಬೀದಿಯಲ್ಲಿ ಭಾರಿ ಗುಡುಗು ಸಹಿತ ಮಳೆಗೆ ವಿದ್ಯುತ್ ತಂತಿಗಳು ಕಡಿದು ಬಿದ್ದು ಎರಡು ದಿನಗಳು ಕಳೆದರೂ ದುರಸ್ತಿಗೆ ಮುಂದಾಗದ ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಸೋಮವಾರ 20ನೇ ವಾರ್ಡ್‌ನ ನಿವಾಸಿಗಳು ಪ್ರತಿಭಟನೆ ನಡೆಸಿದರು.ಸೆಸ್ಕ್ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಮೊಳಗಿಸಿದ ಪ್ರತಿಭಟನಾಕಾರರು, ದೂರಿಗೆ ಸ್ಪಂದಿಸದ ಕಿರಿಯ ಎಂಜನಿಯರ್ ಪ್ರಕಾಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾಳೆಯೊಳಗೆ ವಿದ್ಯುತ್ ತಂತಿಗಳನ್ನು ತೆರವು ಮಾಡಿ ದುರಸ್ತಿಗೆ ಮುಂದಾಗದಿದ್ದರೆ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಪೊರಕೆ ಸೇವೆ ಮಾಡುವುದಾಗಿ ಹಾಜರಿದ್ದ ಮಹಿಳೆಯರು ಎಚ್ಚರಿಕೆ ನೀಡಿದರು.20ನೇ ವಾರ್ಡ್‌ನ ಪುರಸಭಾ ಸದಸ್ಯೆ ಲತಾ ಬಸವರಾಜು ಮಾತನಾಡಿ, ಇಲ್ಲಿನ ನಿವಾಸಿಗಳು ಪ್ರತಿನಿತ್ಯ ಪ್ರಾಣ ಭಯದಲ್ಲಿ ತಂತಿಯನ್ನು ದಾಟಿ ಸಂಚರಿಸಬೇಕಾದ ಪರಿಸ್ಥಿತಿ ಒದಗಿದೆ. ಈಗಾಗಲೇ ಹಲವು ಮಂದಿ ತಂತಿಗೆ ಸಿಲುಕಿ ಬಿದ್ದು ಗಾಯಗೊಂಡಿದ್ದಾರೆ. ಇದಲ್ಲದೇ ಮನೆಗಳ ಮೇಲೂ ವಿದ್ಯುತ್ ತಂತಿಗಳು ಕಡಿದು ಬಿದ್ದಿವೆ. ಅಕಸ್ಮಾತ್ ವಿದ್ಯುತ್ ಸಂಪರ್ಕಗೊಂಡರೆ ಭಾರಿ ಅನಾಹುತ ಸಂಭವಿಸುವುದು ನಿಶ್ಚಿತ. ಈ ಕೂಡಲೇ ಸೆಸ್ಕ್ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಮುಖಂಡರಾದ ಹಫೀಜ್ ಉಲ್ಲಾಖಾನ್, ಮನು, ಲತಾ ದೇವರಾಜು, ಲಕ್ಷ್ಮಮ್ಮ, ಕೆಂಪೇಗೌಡ, ಗೌರಮ್ಮ, ಅಖಿಲ್, ಅಭಿಷೇಕ್, ಅಮೃತರಾಜ್, ಪ್ರದೀಪ್ ಇತರರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)