ವಿದ್ಯುತ್ ದರ ಏರಿಕೆಗೆ ಇಂದು ಪ್ರಸ್ತಾವನೆ

7

ವಿದ್ಯುತ್ ದರ ಏರಿಕೆಗೆ ಇಂದು ಪ್ರಸ್ತಾವನೆ

Published:
Updated:

ಬೆಂಗಳೂರು: ವಿದ್ಯುತ್ ದರ ಏರಿಕೆ ಸಂಬಂಧ ರಾಜ್ಯದ ಐದೂ ವಿದ್ಯುತ್ ಸರಬರಾಜು ಕಂಪೆನಿಗಳು (ಎಸ್ಕಾಂ) ಸೋಮವಾರ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರಸ್ತಾವನೆ ಸಲ್ಲಿಸಲಿವೆ.ಪ್ರತಿ ಯೂನಿಟ್‌ಗೆ 60 ರಿಂದ 70 ಪೈಸೆ ಹೆಚ್ಚಳ ಮಾಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಲು ಕಂಪೆನಿಗಳು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.

ಪೂರ್ವ ನಿಗದಿಯಂತೆ ಎಸ್ಕಾಂಗಳು ದರ ಏರಿಕೆ ಪ್ರಸ್ತಾವನೆಯನ್ನು ಕೆಇಆರ್‌ಸಿಗೆ ನವೆಂಬರ್ 30ರೊಳಗೆ ಸಲ್ಲಿಸಬೇಕಿತ್ತು. ಆದರೆ ಪ್ರಸ್ತಾವ ಅಂತಿಮಗೊಳಿಸಲು ಸಾಧ್ಯವಾಗದ ಕಾರಣ, ಹೆಚ್ಚಿನ ಕಾಲಾವಕಾಶ ಕೋರಿ ಕಂಪೆನಿಗಳು ಕೆಇಆರ್‌ಸಿಗೆ ಅರ್ಜಿ ಸಲ್ಲಿಸಿದ್ದವು. ಅರ್ಜಿಯನ್ನು ಮಾನ್ಯ ಮಾಡಿದ ಕೆಇಆರ್‌ಸಿ, ಇದೇ 10ರೊಳಗೆ ಸಲ್ಲಿಸುವಂತೆ ಸೂಚನೆ ನೀಡಿತ್ತು.ದರ ಏರಿಕೆಯ ಪ್ರಸ್ತಾವ ಸಿದ್ಧಪಡಿಸುವ ಸಂಬಂಧ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ಎಸ್ಕಾಂಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಎರಡು ಬಾರಿ ಸಭೆ ನಡೆಸಿದ್ದರು. ಕೆಲ ಕಂಪೆನಿಗಳು ಯೂನಿಟ್‌ಗೆ 85 ಪೈಸೆ ಹೆಚ್ಚಳ ಮಾಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದವು.

ಆದರೆ, ಇದು ತುಂಬಾ ಜಾಸ್ತಿ ಎಂಬ ಕಾರಣಕ್ಕಾಗಿ ಪರಿಷ್ಕೃತ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ. ಇದಕ್ಕೆ ಸಚಿವರೂ ಒಪ್ಪಿಗೆ ನೀಡಿದ್ದಾರೆ ಎಂದು ಗೊತ್ತಾಗಿದೆ. ಪ್ರಸ್ತಾವನೆ ಸಲ್ಲಿಕೆಯಾದ ನಂತರ ಆಯೋಗವು ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ, ವಿಭಾಗ ಮಟ್ಟದಲ್ಲಿ ಅಹವಾಲು ಸಭೆಗಳನ್ನು ನಡೆಸಲಿದೆ.ಈ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಮೂರು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಪರಿಷ್ಕೃತ ದರಗಳು 2013ರ ಏಪ್ರಿಲ್ ಒಂದರಿಂದ ಜಾರಿಗೆ ಬರಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry