ಬುಧವಾರ, ಮೇ 12, 2021
23 °C

ವಿದ್ಯುತ್ ದರ ಏರಿಕೆ ಪ್ರಸ್ತಾವ ತಿರಸ್ಕರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಪ್ರತಿ ಯೂನಿಟ್‌ಗೆ 88 ಪೈಸೆ ಏರಿಕೆ ಮಾಡುವ ಜೆಸ್ಕಾಂ ಮನವಿಯನ್ನು ತಿರಸ್ಕರಿಸುವಂತೆ ವಿವಿಧ ಸಂಘ-ಸಂಸ್ಥೆಗಳು, ಕೈಗಾರಿಕೆ ಒಕ್ಕೂಟದ ಪ್ರತಿನಿಧಿಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್‌ಸಿ)ವನ್ನು ಒತ್ತಾಯಿಸಿವೆ.ಆಯೋಗವು ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವಿದ್ಯುತ್ ದರ ಪರಿಷ್ಕರಣೆ ಕುರಿತ ಸಾರ್ವಜನಿಕ ಅಹವಾಲು ವಿಚಾರಣೆಯಲ್ಲಿ ಭಾಗವಹಿಸಿದ ಸಂಸ್ಥೆಯ ಪ್ರತಿನಿಧಿಗಳು, ಜೆಸ್ಕಾಂನ ಪ್ರಸ್ತಾವವನ್ನು ವಜಾ ಮಾಡುವಂತೆ ಕೋರಿದರು. “ಸೋರಿಕೆ ತಡೆ, ಶೇ 100 ಮೀಟರ್ ಅಳವಡಿಕೆಯಂಥ ಕ್ರಮಕ್ಕೆ ಪ್ರಯತ್ನಿಸದ ಜೆಸ್ಕಾಂ, ಈಗ ವಿದ್ಯುತ್ ದರ ಏರಿಸಲು ಮನವಿ ಮಾಡಿದೆ. ಯಾವುದೇ ಕಾರಣಕ್ಕೂ ಇದನ್ನು ಪುರಸ್ಕರಿಸಬಾದು” ಎಂದು ಅವರು ಆಗ್ರಹಿಸಿದರು.ಅಧ್ಯಕ್ಷ ಎಂ.ಆರ್.ಶ್ರೀನಿವಾಸ ಮೂರ್ತಿ, ಸದಸ್ಯರಾದ ವಿಶ್ವನಾಥ ಹಿರೇಮಠ ಹಾಗೂ ಶೀನಿವಾಸರಾವ್ ನೇತೃತ್ವದಲ್ಲಿ ನಡೆದ ಸಭೆಯ ಆರಂಭದಲ್ಲಿ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮುನೀಶ್ ಮೌದ್ಗಿಲ್ ನಿಗಮದ ಲೆಕ್ಕಾಚಾರ ಮಂಡಿಸಿದರು. “ಕಳೆದ ವರ್ಷ 300 ಕೋಟಿ ರೂಪಾಯಿ ಇದ್ದ ನಷ್ಟದ ಪ್ರಮಾಣ ಈ ಸಲ 198 ಕೋಟಿ ರೂಪಾಯಿಗೆ ಇಳಿಯಲಿದೆ. ಈ ನಷ್ಟ ಸರಿದೂಗಿಸಲು ಪಂಪ್‌ಸೆಟ್ ಪ್ರವರ್ಗ ಹೊರತುಪಡಿಸಿ ಉಳಿದ ಎಲ್ಲ ವರ್ಗಗಳ ವಿದ್ಯುತ್ ದರವನ್ನು 88 ಪೈಸೆ ಏರಿಸಬೇಕು” ಎಂದು ಮನವಿ ಮಾಡಿದರು.ಎಚ್‌ಕೆಸಿಸಿಐ: ಜೆಸ್ಕಾಂನ ಈ ಕೋರಿಕೆಯನ್ನು ಆಕ್ಷೇಪಿಸಿದ ಎಚ್‌ಕೆಸಿಸಿಐ ಪ್ರತಿನಿಧಿ ಅಜಿತಕುಮಾರ ಸಿಂಧೆ, ವಿತರಣಾ ಸೋರಿಕೆಯನ್ನು ತಡೆಯಲು ನಿಗಮ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಹೇಳಿಲ್ಲ ಎಂದು ತಿಳಿಸಿದರು. “ವಿತರಣಾ ಸೋರಿಕೆಗೆ ಸಿಬ್ಬಂದಿ ಕೊರತೆ ಎಂದು ಜೆಸ್ಕಾಂ ಹೇಳಿದ್ದು, ಅಗತ್ಯ ಸಂಖ್ಯೆಯ ಸಿಬ್ಬಂದಿ ನೇಮಕಕ್ಕೆ ಯಾವ ಕ್ರಿಯಾಯೋಜನೆ ರೂಪಿಸಿದೆ? ಗ್ರಾಹಕರ ಸಮಸ್ಯೆ ಪರಿಹರಿಸಲು ಕಾಲಕಾಲಕ್ಕೆ ಸಭೆ ನಡೆಸುವಂತೆ ಆಯೋಗ ನೀಡಿದ್ದ ನಿರ್ದೇಶನ ಪಾಲಿಸಿಲ್ಲ. ಹೀಗಾದರೆ ಹೇಗೆ?” ಎಂದು ಅವರು ಪ್ರಶ್ನಿಸಿದರು.ರೈಲ್ವೆ ಮನವಿ: ನೈಋತ್ಯ ರೈಲ್ವೆ ಪ್ರತಿನಿಧಿ ತಮ್ಮ ಅಹವಾಲು ಮಂಡಿಸಿ, ಕಳೆದ ಏಳು ವರ್ಷಗಳಿಂದ ರೈಲು ಪ್ರಯಾಣ ದರದಲ್ಲಿ ಏರಿಕೆ ಮಾಡಿಲ್ಲ. ಹೀಗಾಗಿ ವಿದ್ಯುತ್ ದರ ಏರಿಕೆಯಿಂದ ತಮ್ಮ ಇಲಾಖೆಯನ್ನು ಹೊರಗಿಡುವಂತೆ ಮನವಿ ಮಾಡಿದರು.ಯಾದಗಿರಿ ಚೇಂಬರ್ ಆಫ್ ಕಾಮರ್ಸ್‌ನ ಪ್ರತಿನಿಧಿ ಮಾತನಾಡಿ, ಜಿಲ್ಲೆಯಲ್ಲಿ ಗ್ರಾಹಕರ ಕುಂದುಕೊರತೆ ಘಟಕ ಸ್ಥಾಪನೆಯಾಗಿಲ್ಲ. ವಿದ್ಯುತ್ ಪರಿವರ್ತಕ ಬದಲಾವಣೆಗೆ ವಾರಗಟ್ಟಲೇ ಸಮಯ ಹಿಡಿಯುತ್ತಿದ್ದು, ಇದರಿಂದ ಕೈಗಾರಿಕೆಗಳು ತೀವ್ರ ಸಂಕಷ್ಟ ಎದುರಿಸಬೇಕಾಗಿದೆ ಎಂದು ಅಳಲು ತೋಡಿಕೊಂಡರು.ಶೇ 100 ಮೀಟರ್: ಹೈದರಾಬಾದ್ ಕರ್ನಾಟಕ ಪರಿಸರ ಜಾಗೃತಿ ಮತ್ತು ಸಂರಕ್ಷಣಾ ಸಂಸ್ಥೆಯ ಅಧ್ಯಕ್ಷ ದೀಪಕ್ ಗಾಲಾ ಮಾತನಾಡಿ, ಶೇ 100 ಮೀಟರೀಕರಣ ಮಾಡದೇ ಇರುವುದು ಜೆಸ್ಕಾಂನ ತಪ್ಪುಗಳನ್ನು ಮುಚ್ಚಿಕೊಳ್ಳಲು ನೆರವಾಗಿದೆ ಎಂದು ಆರೋಪಿಸಿದರು. ಈವರೆಗೆ ಬಾಕಿಯಿರುವ 1352 ಕೋಟಿ ರೂಪಾಯಿ ವಸೂಲಿಗೆ ಜೆಸ್ಕಾಂ ಕ್ರಮ ಜರುಗಿಸಿಲ್ಲ. ಒಂದು ವೇಳೆ ಇಷ್ಟು ಹಣ ವಸೂಲಾಗಿದ್ದರೆ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಸಬಹುದಾಗಿತ್ತು ಎಂದು ಅವರು ಹೇಳಿದರು.ಶ್ರೀರಾಮುಲು ರೆಡ್ಡಿ, ಬಸವಂತರಾವ ವಳಕೇರಿ, ಕನಿಹಾಳ, ಸೈಯದ್ ರಶೀದ್ ಅಹವಾಲು ಮಂಡಿಸಿದರು. ಜೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.