ಮಂಗಳವಾರ, ಜನವರಿ 21, 2020
28 °C

ವಿದ್ಯುತ್ ದರ: ಯೂನಿಟ್‌ಗೆ 73 ಪೈಸೆ ಹೆಚ್ಚಳಕ್ಕೆ ಪ್ರಸ್ತಾವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 73 ಪೈಸೆ ಹೆಚ್ಚಳ ಮಾಡುವಂತೆ ಕೋರಿ ಎಸ್ಕಾಂಗಳು ಶುಕ್ರವಾರ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರಸ್ತಾವ ಸಲ್ಲಿಸಿವೆ.ರಾಜ್ಯದ ಐದೂ ಎಸ್ಕಾಂಗಳು ದರ ಹೆಚ್ಚಳ ಸಂಬಂಧ ಪ್ರತ್ಯೇಕವಾಗಿ ಪ್ರಸ್ತಾವ ಸಲ್ಲಿಸಿದ್ದು, ಕಂಪೆನಿಗಳ ಆದಾಯ ಮತ್ತು ವೆಚ್ಚ, ಪ್ರತಿ ತಿಂಗಳು ವಿದ್ಯುತ್ ಖರೀದಿಗೆ ಮಾಡುತ್ತಿರುವ ವೆಚ್ಚ, ಸರ್ಕಾರದಿಂದ ಬರಬೇಕಾಗಿರುವ ಸಬ್ಸಿಡಿಯ ಬಾಕಿ ಮೊತ್ತ ಸೇರಿದಂತೆ ವಿವರವಾದ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸಲಾಗಿದೆ. ಬೆಸ್ಕಾ, ಮೆಸ್ಕಾಂ, ಚೆಸ್ಕಾಂ, ಜೆಸ್ಕಾಂ ಮತ್ತು ಹೆಸ್ಕಾಂ ಮಾತ್ರ ಎಲ್ಲ ವರ್ಗದ ಗ್ರಾಹಕರು ಬಳಸುವ ವಿದ್ಯುತ್ ದರವನ್ನು ಯೂನಿಟ್‌ಗೆ 73 ಪೈಸೆ ಜಾಸ್ತಿ ಮಾಡುವಂತೆ ಕೋರಿವೆ. ಆದರೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಈ ಬಾರಿಯೂ  ಪ್ರಸರಣ ವೆಚ್ಚ ಜಾಸ್ತಿ ಮಾಡುವಂತೆ ಪ್ರಸ್ತಾವ ಸಲ್ಲಿಸಿಲ್ಲ.ಕಳೆದ ಅಕ್ಟೋಬರ್ 28ರಂದು ಯೂನಿಟ್‌ಗೆ 28 ಪೈಸೆ ದರ ಹೆಚ್ಚಳ ಮಾಡಿ ಕೆಇಆರ್‌ಸಿ ಆದೇಶ ಹೊರಡಿಸಿತ್ತು. ಇದಾದ ಕೇವಲ ಮೂರು ತಿಂಗಳಲ್ಲಿ ಮತ್ತೆ ದರ ಹೆಚ್ಚಳ ಮಾಡುವಂತೆ ಎಸ್ಕಾಂಗಳು ಪ್ರಸ್ತಾವ ಸಲ್ಲಿಸಿದ್ದು, ಏಪ್ರಿಲ್ ವೇಳೆಗೆ ದರ ಹೆಚ್ಚಳ ಆದೇಶ ಹೊರ ಬೀಳುವ ಸಾಧ್ಯತೆ ಇದೆ.ಒಂದು ವಾರದಲ್ಲಿ ದರ ಹೆಚ್ಚಳ ಮಾಡಿ ಸಲ್ಲಿಸಿರುವ ಪ್ರಸ್ತಾವದ ಪ್ರಮುಖ ಅಂಶಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಪತ್ರಿಕೆಗಳಲ್ಲಿ ಪ್ರಕಟಿಸಲಾಗುತ್ತದೆ. ಇದಕ್ಕೆ ಸಂಬಂಧಪಟ್ಟಂತೆ ಗ್ರಾಹಕರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಆಯೋಗವು ಐದೂ ಎಸ್ಕಾಂಗಳ ಕೇಂದ್ರ ಕಚೇರಿಗಳಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ನಂತರ ದರ ಹೆಚ್ಚಳ ಸಂಬಂಧ ಆದೇಶ ಹೊರಡಿಸಲಿದೆ.

ಪ್ರತಿಕ್ರಿಯಿಸಿ (+)