ವಿದ್ಯುತ್ ದರ ಹೆಚ್ಚಳ ಕೈಬಿಡಲು ಆಗ್ರಹ

7

ವಿದ್ಯುತ್ ದರ ಹೆಚ್ಚಳ ಕೈಬಿಡಲು ಆಗ್ರಹ

Published:
Updated:

ಮೈಸೂರು: `ವಿದ್ಯುತ್ ದರ ಹೆಚ್ಚಿರುವುದನ್ನು ಸರ್ಕಾರ ಕೈ ಬಿಡಬೇಕು. ರಾಜ್ಯದಲ್ಲಿ ಬರಗಾಲ ಎದುರಾಗಿದ್ದು ಇಂತಹ ಸಂದರ್ಭದಲ್ಲಿ ವಿದ್ಯುತ್ ದರ ಹೆಚ್ಚಳ ಮಾಡುವ ಕ್ರಮ ಸರಿಯಲ್ಲ~ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಇಲ್ಲಿ ಕಿಡಿಕಾರಿದರು.`ರಾಜ್ಯದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಸೋರಿಕೆ, ಕಳ್ಳತನ, ಪುನರ್ ವ್ಯವಸ್ಥೆ ಮಾಡುವಲ್ಲಿ ಸರ್ಕಾರ ವಿಫಲಾಗಿದೆ. ಇದೆಲ್ಲವನ್ನು ಸರಿಪಡಿಸಿದ ನಂತರ ವಿದ್ಯುತ್ ದರ ಹೆಚ್ಚಳ ಮಾಡುವ ಬಗ್ಗೆ ಚಿಂತನೆ ಮಾಡಬೇಕು. ಗುಣಮಟ್ಟದ ವಿದ್ಯುತ್ ಪೂರೈಕೆ ಇಲ್ಲ. ಮನಬಂದಂತೆ ಲೋಡ್‌ಶೆಡ್ಡಿಂಗ್ ಮಾಡಲಾಗುತ್ತಿದೆ~ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.`ಗ್ರಾಮೀಣ ಪ್ರದೇಶದಲ್ಲಿ ಎರಡು ತಾಸು ವಿದ್ಯುತ್ ಸಿಕ್ಕರೆ ಹೆಚ್ಚು. ವಿದ್ಯುತ್ ಇಲ್ಲದೆ ಪಂಪ್‌ಸೆಟ್‌ಗಳು ನಿಂತಿವೆ. ರೈತರು ಕಂಗಾಲಾಗಿದ್ದಾರೆ. ಪ್ರತ್ಯೇಕ ಫೀಡರ್‌ಗಳು ಹಳ್ಳಿಗಳಲ್ಲಿ ಇಲ್ಲ. ಕೆಟ್ಟ ಟ್ರಾನ್ಸ್‌ಫಾರ್ಮರ್‌ಗಳನ್ನು ಆರು ತಿಂಗಳಾದರೂ ಬದಲಿಸುವುದಿಲ್ಲ. ಬಿಲ್‌ಗಳನ್ನು ಕಟ್ಟದ  ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಸಂಪರ್ಕವನ್ನು ಕಡಿತ ಮಾಡಲಾಗುತ್ತಿದೆ. ಇದನ್ನು ಕೈ ಬಿಡಬೇಕು. ಸರ್ಕಾರ ವಿದ್ಯುತ್ ಖರೀದಿ ಮಾಡಿ ಸಮಸ್ಯೆ ಪರಿಹರಿಸಬೇಕು~ ಎಂದು ಆಗ್ರಹಿಸಿದರು.`ಸರ್ಕಾರಿ ಶಾಲೆ ಮುಚ್ಚಬೇಡಿ~: `ಸರ್ಕಾರಿ ಶಾಲೆಗಳನ್ನು ಮುಚ್ಚುವ ನಿರ್ಧಾರ ಅವಿವೇಕತನದ್ದು. ಒಂದೆಡೆ ಶಿಕ್ಷಣ ಹಕ್ಕು ಜಾರಿಯಾಗಿದ್ದರೆ ಮತ್ತೊಂದೆಡೆ ಶಾಲೆಗಳನ್ನು ಮುಚ್ಚಲು ತೀರ್ಮಾನಿಸಲಾಗಿದೆ. ಖಾಸಗಿ ಶಾಲೆಗಳ ಲಾಬಿ ಇದರಲ್ಲಿ ಇದೆ. ಶಾಲೆ ಮುಚ್ಚಲು ಸಮಾಜದಲ್ಲಿ ಎಲ್ಲ ವರ್ಗದ ಜನ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟಾದರೂ ಶಾಲೆ ಮುಚ್ಚಲು ಶಿಕ್ಷಣ ಸಚಿವರು ಹೊರಟಿರುವುದು ಸರಿಯಲ್ಲ~ ಎಂದು ಹೇಳಿದರು.`ಉದ್ಧಟತನ ಬೇಡ~: `ಬರ ಪರಿಹಾರ ಕುರಿತು ಮುಖ್ಯಮಂತ್ರಿಗೆ ಪತ್ರ ಬರೆದಿದ್ದೆ. ಸದನ ಕರೆಯಲು ಆಗ್ರಹಿಸಿದ್ದೆ. ಪತ್ರ ಬರೆದ ತಕ್ಷಣ ಸದನ ಕರೆಯಲು ಸಾಧ್ಯವೆ ಎಂದು ಸದಾನಂದಗೌಡರು ಉದ್ಧಟತನದಿಂದ ಮಾತನಾಡಿದ್ದಾರೆ.ಉದ್ಧಟತನ ಮಾಡುವುದು ಅವರಿಗೆ ಶೋಭೆ ತರುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಒಳಿತಲ್ಲ. ಜನವರಿಯಿಂದ ಇಲ್ಲಿವರೆಗೆ 22 ದಿನ ಮಾತ್ರ ಸದನ ನಡೆದಿದೆ. ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕು~ ಎಂದು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry