ವಿದ್ಯುತ್ ದುಬಾರಿ, ಘೋಷಣೆಯಷ್ಟೇ ವಿಳಂಬ

7

ವಿದ್ಯುತ್ ದುಬಾರಿ, ಘೋಷಣೆಯಷ್ಟೇ ವಿಳಂಬ

Published:
Updated:

ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಕೊರತೆ ನೀಗಿಸಲು ಸರ್ಕಾರ ಖರೀದಿಯ ಮೊರೆ ಹೋಗಿದ್ದು, ಪ್ರತಿನಿತ್ಯ ಖರೀದಿಗೆ ಮಾಡುತ್ತಿರುವ ವೆಚ್ಚ ಬರುವ ತಿಂಗಳಿಂದ ನೇರವಾಗಿ ಗ್ರಾಹಕರ ಮೇಲೆ ಬೀಳುವ ಸಂಭವವಿದೆ.ವಿದ್ಯುತ್ ದರ ಪರಿಷ್ಕರಣೆ ಸಂಬಂಧ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿರುವ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಮುಂದಿನ ವಾರ ದರ ಹೆಚ್ಚಳದ ಆದೇಶ ಹೊರಡಿಸಲು ಸಿದ್ಧತೆ ಮಾಡಿಕೊಂಡಿತ್ತು. ಆದರೆ ಏಕಾಏಕಿ ಶುಕ್ರವಾರ ರಾಜ್ಯದ ಐದೂ ವಿದ್ಯುತ್ ಸರಬರಾಜು ಕಂಪೆನಿಗಳು ದರ ಹೆಚ್ಚಳ ಆದೇಶವನ್ನು ತಕ್ಷಣವೇ ಪ್ರಕಟಿಸಬೇಡಿ, ಕಂಪೆನಿಗಳ ಕಡೆಯಿಂದ ಇನ್ನಷ್ಟು ಮಾಹಿತಿ ನೀಡುವ ಅಗತ್ಯವಿದ್ದು, ನಾಲ್ಕು ವಾರಗಳ ಕಾಲಾವಕಾಶ ನೀಡಿ ಎಂದು ಆಯೋಗಕ್ಕೆ ಪ್ರಸ್ತಾವ ಸಲ್ಲಿಸಿವೆ.ಈ ಬಗ್ಗೆ ಆಯೋಗ ಶುಕ್ರವಾರವೇ ವಿಚಾರಣೆ ನಡೆಸಿದ್ದು, ನಾಲ್ಕು ವಾರಗಳ ಸಮಯ ನೀಡಲು ಆಗುವುದಿಲ್ಲ. ಇದೇ 21ರ ಒಳಗೆ ಮಾಹಿತಿ ನೀಡಿ ಎಂದು ಆಯೋಗದ ಅಧ್ಯಕ್ಷ ಎಂ.ಆರ್.ಶ್ರೀನಿವಾಸಮೂರ್ತಿ ಆದೇಶಿಸಿದರು.

ಇದೇ ಜೂನ್‌ನಲ್ಲಿ ಐದೂ ಕಂಪೆನಿಗಳು ಯೂನಿಟ್‌ಗೆ 88 ಪೈಸೆ ದರ ಹೆಚ್ಚಳ ಮಾಡುವಂತೆ ಪ್ರಸ್ತಾವ ಸಲ್ಲಿಸಿದ್ದವು.

 

ದರ ಹೆಚ್ಚಳ ಸಂಬಂಧ ಆಯೋಗ ಈಗಾಗಲೇ ವಿಚಾರಣೆಯನ್ನು ಪೂರ್ಣಗೊಳಿಸಿದ್ದು, ಸರಾಸರಿ ಯೂನಿಟ್‌ಗೆ 40 ಪೈಸೆ ಜಾಸ್ತಿ ಮಾಡಲು ಸಿದ್ಧತೆ ನಡೆಸಿತ್ತು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇದೇ 17ರ ಒಳಗೆ ಆದೇಶ ಹೊರ ಬೀಳುತ್ತಿತ್ತು. ಆದರೆ ಕಂಪೆನಿಗಳು ಮತ್ತಷ್ಟು ವಿವರ ನೀಡಲು ಕಾಲಾವಕಾಶ ಕೇಳಿರುವುದರಿಂದ ದರ ಹೆಚ್ಚಳ ಆದೇಶ ನವೆಂಬರ್‌ನಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.ವಿದ್ಯುತ್ ಸಮಸ್ಯೆ ಉಲ್ಬಣಿಸಿರುವುದರಿಂದ ಲಭ್ಯತೆ ಆಧಾರದ ಮೇಲೆ 1,300 ಮೆಗಾವಾಟ್‌ವರೆಗೂ ವಿದ್ಯುತ್ ಖರೀದಿಸಲಾಗುತ್ತಿದೆ. ಇದಕ್ಕೆ ದುಬಾರಿ ವೆಚ್ಚ ಮಾಡುತ್ತಿದ್ದು, ಕೆಲ ಕಂಪೆನಿಗಳು ಸಾಲ ಮಾಡಿ ವಿದ್ಯುತ್ ಖರೀದಿಸುತ್ತಿವೆ. ನಷ್ಟ  ಸರಿದೂಗಿಸಲು ಖರೀದಿ ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಲು ಕಂಪೆನಿಗಳು ಮುಂದಾಗಿವೆ.  ಈ ನಿಟ್ಟಿನಲ್ಲಿ ಆದಾಯ- ವೆಚ್ಚದ ಬಗ್ಗೆ ಆಯೋಗಕ್ಕೆ ಪರಿಷ್ಕೃತ ಮಾಹಿತಿ ನೀಡಲು ನಿರ್ಧರಿಸಿವೆ.ಲೋಡ್‌ಶೆಡ್ಡಿಂಗ್: ಪಾಲನೆಯಾಗದ ಆದೇಶ

ಲೋಡ್‌ಶೆಡ್ಡಿಂಗ್ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ವೇಳಾಪಟ್ಟಿಯನ್ನು ಪ್ರಕಟಿಸಿ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಸೆಪ್ಟೆಂಬರ್ 30ರಂದು ಐದೂ ಕಂಪೆನಿಗಳಿಗೆ ಪತ್ರ ಬರೆದಿತ್ತು. ಆದರೆ ಕಂಪೆನಿಗಳು ಇದುವರೆಗೆ ಅಧಿಕೃತವಾಗಿ ವೇಳಾಪಟ್ಟಿ ಪ್ರಕಟಿಸಿಲ್ಲ. ಮನಬಂದಂತೆ ವಿದ್ಯುತ್ ಕಡಿತ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ.ಲೋಡ್‌ಶೆಡ್ಡಿಂಗ್ ಜಾರಿ ಮಾಡಲು ಆಯೋಗದ ಅನುಮತಿ ಪಡೆಯುವ ಅಗತ್ಯವಿಲ್ಲ. ಆದರೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗದೆ ಇದ್ದಾಗ ಆಯೋಗ ಮಧ್ಯಪ್ರವೇಶಿಸಿ ಕಂಪೆನಿಗಳಿಗೆ ನಿರ್ದೇಶನ ನೀಡಬಹುದು ಎಂದು ಆಯೋಗದ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry