ಮಂಗಳವಾರ, ಏಪ್ರಿಲ್ 20, 2021
25 °C

ವಿದ್ಯುತ್, ಪಡಿತರ ಚೀಟಿ, ಅರ್ಹಫಲಾನುಭವಿಗಳಿಗೆ ಮಾಸಾಶನ ನೀಡಲು ಆಗ್ರಹ.ಉಡುಪಿ ಬ್ಲಾಕ್ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ನಿರಂತರ ವಿದ್ಯುತ್ ಪೂರೈಕೆ, ಅರ್ಹರಿಗೆ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಸ್ವೀಕಾರ ಹಾಗೂ ಪಡಿತರಚೀಟಿ ನೀಡಿಕೆಯಲ್ಲಿನ ಗೊಂದಲಗಳನ್ನು ಕೂಡಲೇ ಸಮರ್ಥವಾಗಿ ನಿಭಾಯಿಸದೇ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಪ್ರತಿ ವಾರ್ಡ್ ಮಟ್ಟದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮಧ್ವರಾಜ್ ಇಲ್ಲಿ ಎಚ್ಚರಿಕೆ ನೀಡಿದರು.ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹಾಗೂ ಪ್ರಮುಖ ಸಮಸ್ಯೆಗಳತ್ತ ನಿರ್ಲಕ್ಷ್ಯ ಮಾಡುತ್ತಿರುವುದನ್ನು ಖಂಡಿಸಿ ಗುರುವಾರ ಸಂಜೆ ನಗರದ ಕ್ಲಾಕ್ ಟವರ್ ಬಳಿ ಉಡುಪಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.ಬಡ ಜನರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಲು ಹೊರಟ ರಾಜ್ಯ ಬಿಜೆಪಿ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುವ ಬದಲು ಈಗಾಗಲೇ ಇರುವ ಯೋಜನೆಗಳನ್ನು ಕಾರ್ಯಗತಗೊಳಿಸಬೇಕು ಎಂದು ಅವರು ಆಗ್ರಹಿಸಿದರು.ಇಂಧನ ಸಚಿವೆ ಶೋಭಾ ಕರಂದ್ಲಾಜೆ ಕಳೆದ ಮೂರು ತಿಂಗಳ ಹಿಂದೆಯೇ ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ವಿದ್ಯುತ್ ಕಡಿತ ಮಾಡದೇ ದಿನದ 24 ಗಂಟೆಯೂ ವಿದ್ಯುತ್ ನೀಡುವುದಾಗಿ ಘೋಷಿಸಿದ್ದರು. ಆದರೆ ದಿನಕ್ಕೆ 10 ಗಂಟೆ ಕೂಡ ವಿದ್ಯುತ್ ಜನರಿಗೆ ಸಿಗುತ್ತಿಲ್ಲ. ಬಹುತೇಕವಾಗಿ ಮಹಿಳೆಯರು ಸುಳ್ಳು ಹೇಳುವುದಿಲ್ಲ. ಆದರೆ ಮಹಿಳಾಕುಲಕ್ಕೆ ಅವಮಾನ ಎನ್ನುವಂತೆ ಶೋಭಾ ಅವರು ಸುಳ್ಳು ಹೇಳಿ ದಾಖಲೆ ಮಾಡಿದ್ದಾರೆ ಎಂದು ಅವರು ಲೇವಡಿ ಮಾಡಿದರು.ಹಸಿರುಶಾಲು ಹೆಗಲಿಗೆ ಹಾಕಿಕೊಂಡು ರೈತರ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದ ಮುಖ್ಯಮಂತ್ರಿಗಳು ರೈತರಿಗೆ ಮಾಡಿದ್ದಾದರೂ ಏನು? ಎಂದು ಪ್ರಶ್ನಿಸಿದ ಅವರು, ಹಿಂದೂಗಳ ಹೆಸರಿನಲ್ಲಿ ಓಟು ತೆಗೆದುಕೊಳ್ಳುವ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಹಿಂದೂ ದೇವಸ್ಥಾನಗಳನ್ನೇ ಒಡೆದು ಹಾಕಿಸುತ್ತಿದೆ. ಮುಸ್ಲಿಂ ಮಹಿಳೆಯರಿಂದ ರಾಖಿ ಕಟ್ಟಿಸಿಕೊಂಡು ನಂತರ ಮುಸ್ಲಿಂ ಜನಾಂಗವನ್ನೇ ದ್ವೇಷಿಸುವಂತಹ ದ್ವಂದ್ವ ಕೆಲಸಗಳನ್ನು ಬಿಜೆಪಿ ಮಾಡುತ್ತ ಬಂದಿದೆ ಎಂದು ಅವರು ವ್ಯಂಗ್ಯವಾಡಿದರು.ಇತ್ತ ಕೊಡವೂರಿನಲ್ಲಿ ಕಲ್ಮಾಡಿ ಹೊಳೆಗೆ ನಗರಸಭೆ ತ್ಯಾಜ್ಯ ನೀರನ್ನು ಬಿಡುವ ಮೂಲಕ ಆ ಪರಿಸರದ ಜನರು ಆರೋಗ್ಯದಿಂದ ವಾಸ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಂತೂ ಕಾರಿನಲ್ಲಿ ಬರುತ್ತಾರೆ, ಕಾರಿನಲ್ಲಿ ಹೋಗುತ್ತಾರೆ, ಕಾರಿನಿಂದ ಕೆಳಗಿಳಿಯದ ಕಾರಣ ಇಲ್ಲಿನ ಸಮಸ್ಯೆಗಳ ಬಗ್ಗೆ ಕಿಂಚಿತ್ತೂ ಪರಿಜ್ಞಾನ ಅವರಿಗಿಲ್ಲ. ಹೀಗಾಗಿ ಜನರು ಇನ್ನಷ್ಟು ಪ್ರತಿಭಟನೆಗೆ ಇಳಿಯುವ ಮುನ್ನ ಅಲ್ಲಿನ ಸಮಸ್ಯೆಗಳನ್ನು ಪರಿಹಾರ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಕಾಂಗ್ರೆಸ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಪ್ರಪಂಚದಲ್ಲಿ ಏನೇನು ಕೊಡಲಿಕ್ಕೆ ಸಾಧ್ಯವೋ ಅದೆಲ್ಲವನ್ನೂ ಕೊಡುತ್ತೇನೆ ಎಂದು ಜನರಿಗೆ ಸುಳ್ಳು ಹೇಳಿ    ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ  ಗಿಮಿಕ್ ರಾಜಕಾರಣ  ಮಾಡುತ್ತಿದೆ ಎಂದು ಟೀಕಿಸಿದರು. ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿರ್ತಿ ರಾಜೀವ ಶೆಟ್ಟಿ ಮಾತನಾಡಿ, ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ‘ನಾಟಕ’ ಮಾಡಿಕೊಳ್ಳುತ್ತಲೇ ಮುಂದುವರಿಯುತ್ತಿದೆ. ಮಠ ಮಂದಿರಗಳಿಗೆ ಹಣ ನೀಡುವ ಬದಲು ಬ್ರಹ್ಮಾವರದಲ್ಲಿನ ಸಕ್ಕರೆ ಕಾರ್ಖಾನೆಗಾದರೂ ಹಣ ನೀಡಿ ಪುನಶ್ಚೇತನಗೊಳಿಸಿದ್ದಲ್ಲಿ ಸಾವಿರಾರು ಬಡಕುಟುಂಬಗಳು ಉದ್ಧಾರವಾಗುತ್ತಿದ್ದವು. ಆದರೆ ಆ ಕೆಲಸವನ್ನು ಮುಖ್ಯಮಂತ್ರಿಗಳು ಮಾಡುತ್ತಿಲ್ಲ ಎಂದು ವಿಷಾದಿಸಿದರು.ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಮತಾ ಬಾಲಕೃಷ್ಣ ಪೂಜಾರಿ, ಗೋಪಿ ನಾಯ್ಕಿ, ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು, ಕೃಷ್ಣರಾಜ ಸರಳಾಯ, ಕಿಶನ್ ಹೆಗ್ಡೆ, ಜಯಶ್ರೀಕೃಷ್ಣರಾಜ್, ಸರಳಾ ಕಾಂಚನ್, ಯುವ ಕಾಂಗ್ರೆಸ್‌ನ ಅಮೃತ ಶೆಣೈ, ಕೀರ್ತಿ ಶೆಟ್ಟಿ, ನವೀನ್ ಚಂದ್ರ, ಹರೀಶ್ ಕಿಣಿ, ತಾ.ಪಂ. ಸದಸ್ಯೆ ಡಾ.ಸುನಿತಾ ಶೆಟ್ಟಿ, ನಿತ್ಯಾನಂದ ಕೆಮ್ಮಣ್ಣು, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜನಾರ್ದನ ಭಂಡಾರ್ಕರ್, ನರಸಿಂಹ ಮೂರ್ತಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.