ವಿದ್ಯುತ್ ಪರಿವೀಕ್ಷಕ ಲೋಕಾಯುಕ್ತ ಬಲೆಗೆ

6

ವಿದ್ಯುತ್ ಪರಿವೀಕ್ಷಕ ಲೋಕಾಯುಕ್ತ ಬಲೆಗೆ

Published:
Updated:

ಬೆಂಗಳೂರು: ಕೈಗಾರಿಕಾ ಉಗ್ರಾಣವೊಂದಕ್ಕೆ ಅಧಿಕ ಸಾಮರ್ಥ್ಯದ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ವರದಿ ಸಲ್ಲಿಸಲು ಗುತ್ತಿಗೆದಾರರೊಬ್ಬರಿಂದ ಹತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವಿದ್ಯುತ್ ಪರಿವೀಕ್ಷಕ ಜಿ.ಗಿರೀಶ್ ಅವರನ್ನು ಸೋಮವಾರ ಬಂಧಿಸಿರುವ ಲೋಕಾಯುಕ್ತ ಪೊಲೀಸರು, ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಆರೋಪಿಯ ಮನೆಯ ಮೇಲೂ ದಾಳಿ ನಡೆಸಿದ್ದಾರೆ.ಶರಣಪ್ಪ ಎಂಬ ವಿದ್ಯುದೀಕರಣ ಕಾಮಗಾರಿ ಗುತ್ತಿಗೆದಾರರು ಕೈಗಾರಿಕಾ ಉಗ್ರಾಣವೊಂದಕ್ಕೆ ಅಧಿಕ ಸಾಮರ್ಥ್ಯದ ವಿದ್ಯುತ್ ಸಂಪರ್ಕ ಕಲ್ಪಿಸುವ ಸಂಬಂಧ ಪರಿಶೀಲನೆ ನಡೆಸಿ ಬೆಸ್ಕಾಂಗೆ ವರದಿ ಸಲ್ಲಿಸುವಂತೆ ನಗರದ ವಿದ್ಯುತ್ ಪರಿವೀಕ್ಷಣಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕ್ರಿಯೆ ಪೂರ್ಣಗೊಳಿಸಲು ರೂ 10,000 ಲಂಚ ನೀಡುವಂತೆ ಆರೋಪಿ ಬೇಡಿಕೆ ಇಟ್ಟಿದ್ದರು.ವಿದ್ಯುತ್ ಪರಿವೀಕ್ಷಕರು ಲಂಚಕ್ಕೆ ಒತ್ತಾಯಿಸುತ್ತಿರುವ ಬಗ್ಗೆ ಗುತ್ತಿಗೆದಾರರು ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಸೋಮವಾರ ಆರೋಪಿ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದರು. ಗಿರೀಶ್ ಬಳಿ 60 ಸಾವಿರ ರೂಪಾಯಿ ಕೂಡ ಈ ಸಂದರ್ಭದಲ್ಲಿ ಪತ್ತೆಯಾಗಿದೆ.ಮನೆ ಮೇಲೆ ದಾಳಿ: ಆರೋಪಿ ಅಧಿಕಾರಿ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿರುವ ಬಗ್ಗೆಯೂ ತನಿಖಾ ತಂಡ ಮಾಹಿತಿ ಸಂಗ್ರಹಿಸಿತ್ತು.ಲಂಚ ಪ್ರಕರಣದಲ್ಲಿ ಬಂಧಿಸಿದ ಬಳಿಕ ಗಿರೀಶ್ ಮನೆಯ ಮೇಲೆ ದಾಳಿ ನಡೆಸಿರುವ ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಸ್ಥಿರಾಸ್ತಿ ಒಡೆತನಕ್ಕೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್ ಖಾತೆಗಳ ವಿವರಗಳು ಮತ್ತು ಲಾಕರ್ ಕೀಲಿಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ.ಈ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜೀವನ್‌ಕುಮಾರ್ ಗಾಂವ್ಕರ್, `ಆರೋಪಿ ಗಿರೀಶ್ ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ನಮ್ಮ ಪೊಲೀಸರು ಮಾಹಿತಿ ಸಂಗ್ರಹಿಸಿದ್ದರು. ಅದರ ಆಧಾರದಲ್ಲೇ ಮನೆ ಮೇಲೆ ದಾಳಿ ನಡೆಸಲಾಗಿದೆ.ಬ್ಯಾಂಕ್ ಲಾಕರ್ ಪರಿಶೀಲನೆ ಬುಧವಾರದ ವೇಳಗೆ ಪೂರ್ಣಗೊಳ್ಳಲಿದೆ~ ಎಂದರು. ಕಂದಾಯ ಅಧಿಕಾರಿ ಬಲೆಗೆ: ನಿವೇಶನದ ಖಾತೆ ನೋಂದಣಿ ಮಾಡಲು ಮೂರು ಸಾವಿರ ರೂಪಾಯಿ ಪಡೆಯುತ್ತಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಬ್ಬನ್‌ಪೇಟೆ ಕಂದಾಯ ಅಧಿಕಾರಿ ಆರ್.ಮಂಜುನಾಥ್ ಅವರನ್ನು ಇದೇ 18ರಂದು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ಕಬ್ಬನ್‌ಪೇಟೆಯಲ್ಲಿ ಸಿ.ವೆಂಕಟೇಶ್ ಮತ್ತು ಅವರ ಪುತ್ರ ಸಿ.ವಿ.ಚಂದನ್‌ಕುಮಾರ್ ಒಂದೇ ಕಡೆ ಅರ್ಧ ನಿವೇಶನಗಳನ್ನು ಖರೀದಿಸಿದ್ದರು. ಎರಡನ್ನೂ ಒಟ್ಟಿಗೆ ಸೇರಿಸಿ ಜಂಟಿ ಖಾತೆ ಮಾಡಲು ರೂ 10,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ, ರೂ 7,000 ಮೊದಲೇ ಪಡೆದಿದ್ದರು. ಬಾಕಿ ರೂ 3,000ಕ್ಕೆ ಒತ್ತಾಯಿಸುತ್ತಿರುವ ಬಗ್ಗೆ ವೆಂಕಟೇಶ್ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry