ವಿದ್ಯುತ್ ಪೂರೈಕೆಗೆ ಆಗ್ರಹ: ಹೆಸ್ಕಾಂಗೆ ಮುತ್ತಿಗೆ

7

ವಿದ್ಯುತ್ ಪೂರೈಕೆಗೆ ಆಗ್ರಹ: ಹೆಸ್ಕಾಂಗೆ ಮುತ್ತಿಗೆ

Published:
Updated:

ಹುಬ್ಬಳ್ಳಿ: ಕೃಷಿ ಪಂಪ್‌ಸೆಟ್‌ಗಳಿಗೆ ಅನಿಯಮಿತ ವಿದ್ಯುತ್ ಪೂರೈಕೆ ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಕಾರ್ಯಕರ್ತರು ಗುರುವಾರ ಇಲ್ಲಿನ ನವನಗರದ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಧಾರವಾಡ ತಾಲ್ಲೂಕಿನಲ್ಲಿ ವಿದ್ಯುತ್ ಕಂಬ, ತಂತಿ ಹಾಗೂ ಟ್ರಾನ್ಸ್‌ಫಾರ್ಮರ್‌ಗಾಗಿ 334 ರೈತರು ಅರ್ಜಿ ನೀಡಿದ್ದಾರೆ. ಅವರಿಗೆ ಕೂಡಲೇ ಪರಿಕರಗಳನ್ನು ಪೂರೈಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ 78 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅಕ್ರಮ-ಸಕ್ರಮ ಯೋಜನೆ ಅಡಿಯಲ್ಲಿ ಹಣ ತುಂಬಿರುವ ರೈತರಿಗೆ ವಿದ್ಯುತ್ ಪರಿಕರಗಳನ್ನು ನೀಡುವಂತೆ ಒತ್ತಾಯಿಸಿದರು.ರೈತರ ಜಮೀನುಗಳಲ್ಲಿ ಕೊಳವೆಬಾವಿ ಕೊರೆಸಿದ ನಂತರ ಅವರೇ ಖರ್ಚು ಮಾಡಿ ಪರಿಕರಗಳನ್ನು ಹಾಕುವುದನ್ನು ತಪ್ಪಿಸಿ ಉಚಿತವಾಗಿ ವಿದ್ಯುತ್ ಕಂಬ, ತಂತಿ ಹಾಗೂ ಟ್ರಾನ್ಸ್‌ಫಾರ್ಮರ್‌ಗಳನ್ನು ಒದಗಿಸುವಂತೆ. ದಿನಕ್ಕೆ ಆರು ತಾಸು, ಮೂರು ಫೇಸ್‌ನಲ್ಲಿ ವಿದ್ಯುತ್ ನೀಡಬೇಕು. 2003ರಿಂದ ಈಚೆಗೆ ಕೃಷಿ ಪಂಪ್‌ಸೆಟ್‌ಗಳ ಬಿಲ್ ಬಾಕಿ ಹಣವನ್ನು ಮನ್ನಾ ಮಾಡುವಂತೆ ಕೋರಿದರು.ಪ್ರತೀ ದಿನ ರಾತ್ರಿ 11 ಗಂಟೆಯ ಒಳಗಾಗಿ ಒಂದು ತಾಸು ಲೋಡ್ ಶೆಡ್ಡಿಂಗ್ ವ್ಯವಸ್ಥೆಯನ್ನು ರದ್ದು ಮಾಡುವಂತೆ ಆಗ್ರಹಿಸಿ ರೈತರು ಮುತ್ತಿಗೆ ಹಾಕಿದರು.ರೈತರ ಮನವಿಯನ್ನು ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಹೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.ಪ್ರತಿಭಟನೆಯಲ್ಲಿ  ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶಿವನಗೌಡ ನಾಗನಗೌಡ ಪಾಟೀಲ ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry