ಗುರುವಾರ , ಮೇ 19, 2022
20 °C

ವಿದ್ಯುತ್ ಪೂರೈಕೆ ವೇಳಾಪಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರ ನೀರು ಸರಬರಾಜಿನ ಮೇಲೆ ವಿದ್ಯುತ್ ಕಡಿತ ಪರಿಣಾಮ ಬೀರಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ಜಲಮಂಡಲಿ ಕೆಪಿಟಿಸಿಎಲ್‌ಗೆ ಸರದಿ ಪ್ರಕಾರ ವಿದ್ಯುತ್ ಪೂರೈಕೆಗೆ ವೇಳಾಪಟ್ಟಿಯನ್ನು ಒದಗಿಸಿದೆ.  ವಿದ್ಯುತ್ ಕಡಿತದಿಂದಾಗಿ ಒಂದು ಪಂಪ್‌ಹೌಸ್ ಕಾರ್ಯ ನಿರ್ವಹಿಸದೇ ಹೋದರೂ ಮತ್ತೊಂದು ಪಂಪ್‌ಹೌಸ್‌ಗೆ ವಿದ್ಯುತ್ ಕಲ್ಪಿಸುವಂತೆ ವೇಳಪಟ್ಟಿ ತಯಾರಿಸಲಾಗಿದೆ. ಸ್ವಯಂಚಾಲಿತ ವ್ಯವಸ್ಥೆ ಹೊಂದಿಲ್ಲದೇ ಇರುವುದರಿಂದ ಸಿಬ್ಬಂದಿಯೇ ಸರದಿ ಪ್ರಕಾರ ವಿದ್ಯುತ್ ಪೂರೈಕೆಯ ಮೇಲ್ವಿಚಾರಣೆ ನಡೆಸಲಿದ್ದಾರೆ.`ಕಾವೇರಿ ನಾಲ್ಕು ಹಂತಗಳ ನೀರು ಪೂರೈಕೆಗೆ ತಡೆರಹಿತ ವಿದ್ಯುತ್ ಒದಗಿಸುವುದಾಗಿ ಕೆಪಿಟಿಸಿಎಲ್ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೂ ನಗರದಲ್ಲಿ ಲೋಡ್ ಶೆಡ್ಡಿಂಗ್ ಉಂಟಾದರೆ ಸರದಿ ಪ್ರಕಾರ ವಿದ್ಯುತ್ ಪೂರೈಕೆ ಮುಂದುವರಿಯಲಿದೆ. ಆದರೂ ಮುಂಬರುವ ದಿನಗಳಲ್ಲಿ ನಗರದ ಉತ್ತರ ಹಾಗೂ ಪೂರ್ವ ಭಾಗಗಳಲ್ಲಿ ನೀರು ಪೂರೈಕೆ ವ್ಯತ್ಯಯವಾಗಬಹುದು~ ಎಂದು ಜಲಮಂಡಲಿ ಅಧಿಕಾರಿಗಳು ತಿಳಿಸಿದ್ದಾರೆ.ಒಟ್ಟು 52 ನೀರು ಪಂಪ್ ಕೇಂದ್ರಗಳನ್ನು ಜಲಮಂಡಲಿ ಹೊಂದಿದ್ದು ಇದರಲ್ಲಿ 45 ನಗರ ವ್ಯಾಪ್ತಿಯಲ್ಲಿಯೇ ಇವೆ. ಒಂದು ಕ್ಷಣ ವಿದ್ಯುತ್ ತಡೆ ಉಂಟಾದರೂ ಪಂಪಿಂಗ್ ಕೇಂದ್ರಗಳು ಪುನರಾರಂಭಗೊಳ್ಳಲು ಗಂಟೆಗಟ್ಟಲೆ ಸಮಯ ಹಿಡಿಯುತ್ತದೆ. ಅಲ್ಲದೆ ದುಬಾರಿ ಎಂಬ ಕಾರಣಕ್ಕೆ ಪರ್ಯಾಯವಾದ ನಿರಂತರ ವಿದ್ಯುತ್ ಪೂರೈಕೆಯ ವ್ಯವಸ್ಥೆಯನ್ನು ಮಂಡಲಿ ಹೊಂದಿಲ್ಲ. ಹೈಗ್ರೌಂಡ್ ಜಲ ಸಂಗ್ರಹಾಗಾರ, ನೆಲಮಟ್ಟದ ಜಲಸಂಗ್ರಹಾಗಾರ, ಹೊಸಹಳ್ಳಿ ಹಾಗೂ ಹೆಗ್ಗನಹಳ್ಳಿ ಪಂಪಿಂಗ್ ಸ್ಟೇಷನ್ ಸೇರಿದಂತೆ ನಾಲ್ಕು ಸ್ಥಳಗಳಲ್ಲಿ ಮಾತ್ರ ಜಲಮಂಡಲಿ ಜನರೇಟರ್ ಹೊಂದಿದೆ. ಇವು ಕೂಡ ಸ್ವಯಂಚಾಲಿತ ವ್ಯವಸ್ಥೆ ಹೊಂದಿಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.