ಶುಕ್ರವಾರ, ನವೆಂಬರ್ 22, 2019
20 °C

ವಿದ್ಯುತ್ ಪ್ರವಹಿಸಿ ಮಹಿಳೆ ಸಾವು

Published:
Updated:

ಬೆಂಗಳೂರು: ನೀಲಸಂದ್ರದ ಮನೆಯೊಂದರಲ್ಲಿ ಭಾನುವಾರ ರಾತ್ರಿ ವಿದ್ಯುತ್ ಪ್ರವಹಿಸಿ ನೂರ್ ಆಯಿಷಾ (27) ಎಂಬುವರು ಮೃತಪಟ್ಟಿದ್ದಾರೆ.

ಆಯಿಷಾ, ನೀಲಸಂದ್ರ ಏಳನೇ ಅಡ್ಡರಸ್ತೆ ನಿವಾಸಿ ಮನ್ಸೂರ್ ಎಂಬುವರ ಪತ್ನಿ. ಮನ್ಸೂರ್ ಅವರು ಸೌದಿ ಅರೇಬಿಯಾದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸದಲ್ಲಿದ್ದಾರೆ.ಆಯಿಷಾ ಅವರು ರಾತ್ರಿ 11 ಗಂಟೆ ಸುಮಾರಿಗೆ ಮನೆ ತೊಳೆದು, ಫ್ಯಾನ್‌ನ ಸ್ವಿಚ್ ಹಾಕಿದ್ದಾರೆ. ಆಗ ಒದ್ದೆಯಾಗಿದ್ದ ಅವರ ಕೈಗೆ ವಿದ್ಯುತ್ ಪ್ರವಹಿಸಿದೆ. ಪರಿಣಾಮ ನೆಲದ ಮೇಲೆ ಬಿದ್ದು ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ವೇಳೆ ಅವರ ನಾಲ್ಕು ಮಕ್ಕಳು ಮತ್ತೊಂದು ಕೊಠಡಿಯಲ್ಲಿ ಮಲಗಿದ್ದರು. ಇದರಿಂದಾಗಿ ಅವರಿಗೆ ಯಾವುದೇ ಅಪಾಯವಾಗಿಲ್ಲ. ಬೌರಿಂಗ್ ಆಸ್ಪತ್ರೆಯಲ್ಲಿ ಸೋಮವಾರ ಬೆಳಿಗ್ಗೆ ಆಯಿಷಾ ಅವರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ. ಅಶೋಕನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ದರೋಡೆಗೆ ಹೊಂಚು: ಬಂಧನ: ದರೋಡೆಗೆ ಹೊಂಚು ಹಾಕುತ್ತಿದ್ದ ಕುಖ್ಯಾತ ರೌಡಿ ಸಿರಾಜ್ ಉದ್ದೀನ್ ಅಲಿಯಾಸ್ ಬುಲ್ಡು (26) ಮತ್ತು ಆತನ ಸಹಚರ ಸಾದಿಕ್ ಪಾಷಾ (18) ಎಂಬುವರನ್ನು ಬಂಧಿಸಿರುವ ಮೈಕೊಲೇಔಟ್ ಪೊಲೀಸರು ಪಿಸ್ತೂಲ್ ಹಾಗೂ ಗುಂಡು (ಬುಲೆಟ್) ವಶಪಡಿಸಿಕೊಂಡಿದ್ದಾರೆ.ಆರೋಪಿಗಳು ದೇವರಚಿಕ್ಕನಹಳ್ಳಿಯ ಆರ್‌ಟಿಒ ಕಚೇರಿ ಸಮೀಪ ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಬಂಧಿಸಲಾಯಿತು. ಅವರ ಜತೆಗಿದ್ದ ಇತರೆ ಮೂರು ಮಂದಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಗುರಪ್ಪನಪಾಳ್ಯದ ಸಿರಾಜ್, ನಗರದಲ್ಲಿ 2009ರಲ್ಲಿ ನಡೆದಿದ್ದ ಶೌಕತ್ ಎಂಬುವರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಅಲ್ಲದೇ ಮೈಕೊಲೇಔಟ್ ಠಾಣೆಯ ರೌಡಿಪಟ್ಟಿಯಲ್ಲಿ ಆತನ ಹೆಸರಿತ್ತು.  ನಗರದ ವಿವಿಧ ಠಾಣೆಗಳಲ್ಲಿ ಆತನ ವಿರುದ್ಧ ಹಲವು ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಆತನ ಬಂಧನಕ್ಕೆ ನ್ಯಾಯಾಲಯ ವಾರೆಂಟ್ ಸಹ ಜಾರಿ ಮಾಡಿತ್ತು ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಜಗಳ ಕೊಲೆಯಲ್ಲಿ ಅಂತ್ಯ: ಪಾನಮತ್ತ ವ್ಯಕ್ತಿಗಳಿಬ್ಬರ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಕಬ್ಬನ್‌ಪೇಟೆಯ ಸೊಪ್ಪಿನ ಮಾರುಕಟ್ಟೆ ಬಳಿ ಭಾನುವಾರ ನಡೆದಿದೆ. ಕಬ್ಬನ್‌ಪೇಟೆಯ ಸೊಪ್ಪಿನ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ವೆಂಕಟಸ್ವಾಮಿ (80) ಕೊಲೆಯಾದ ವ್ಯಕ್ತಿ. ಆರೋಪಿ ಲಕ್ಷ್ಮಣ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮಣ್ ಸಹ ಅದೇ ಮಾರುಕಟ್ಟೆಯಲ್ಲಿ ಕೂಲಿ ಕಾರ್ಮಿಕನಾಗಿದ್ದ. ಲಕ್ಷ್ಮಣ್ ಮತ್ತು ವೆಂಕಟಸ್ವಾಮಿ ಸಂಜೆ ಮದ್ಯಪಾನ ಮಾಡಿ ಮಾರುಕಟ್ಟೆಯಲ್ಲಿ ಕುಳಿತಿದ್ದಾಗ ಅವರ ನಡುವೆ ವಾಗ್ವಾದ ನಡೆದು ಜಗಳವಾಗಿದೆ.ಆರೋಪಿಯು ಅವರ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದಿದ್ದಾನೆ. ರಕ್ತಸ್ರಾವವಾಗಿ ಅಸ್ವಸ್ಥಗೊಂಡ ವೆಂಕಟಸ್ವಾಮಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಹಲಸೂರುಗೇಟ್ ಪೊಲೀಸರು ಮಾಹಿತಿ ನೀಡಿದ್ದಾರೆ.  ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)