ಗುರುವಾರ , ಏಪ್ರಿಲ್ 15, 2021
21 °C

ವಿದ್ಯುತ್ ಬಿಕ್ಕಟ್ಟು ಮತ್ತೆ ಉದ್ಭವಿಸದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: `ದೇಶದ ಬಹುತೇಕ ರಾಜ್ಯಗಳನ್ನು ಕಾಡಿದ ವಿದ್ಯುತ್ ಸ್ಥಗಿತ ಮತ್ತೊಮ್ಮೆ ಸಂಭವಿಸುವುದಿಲ್ಲ. ಕೇಂದ್ರ ಸರ್ಕಾರ ಈ ಬಗ್ಗೆ ಜನರಿಗೆ ಖಚಿತ ಭರವಸೆ ನೀಡುತ್ತದೆ~ ಎಂದಿರುವ ಇಂಧನ ಖಾತೆ ಹೆಚ್ಚುವರಿ ಹೊಣೆ ಹೊತ್ತಿರುವ ಕಾರ್ಪೋರೇಟ್ ವ್ಯವಹಾರಗಳ ಸಚಿವ ಎಂ. ವೀರಪ್ಪ ಮೊಯಿಲಿ, ಈ ಸಂಬಂಧ ಆಗಸ್ಟ್ 6ರಂದು ಸರ್ಕಾರವು ವಿದ್ಯುತ್ ಸ್ಥಗಿತಗೊಂಡ ಎಂಟು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಚಂಡೀಗಡದ ಮುಖ್ಯಮಂತ್ರಿಗಳ ಸಭೆ ಕರೆದಿದೆ ಎಂದು ತಿಳಿಸಿದ್ದಾರೆ.ಯುಪಿಎ ಸಚಿವರ ಖಾತೆಗಳಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಿದ ಬಳಿಕ ಇಂಧನ ಇಲಾಖೆ ಸಚಿವರಾಗಿ ಬುಧವಾರ ಅಧಿಕಾರ ವಹಿಸಿಕೊಂಡ ವೀರಪ್ಪ ಮೊಯಿಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 22 ರಾಜ್ಯಗಳ 60 ಕೋಟಿ ಜನರನ್ನು ಕಾಡಿದ ಕಾರ್ಗತ್ತಲು ಪುನರಾವರ್ತನೆ ಆಗುವುದಿಲ್ಲ. ಇಂಥ ಪರಿಸ್ಥಿತಿ ಮರುಕಳಿಸಿದಂತೆ ಸಂಪೂರ್ಣ ಎಚ್ಚರಿಕೆ ವಹಿಸಲಾಗುವುದು ಎಂದರು.ಉತ್ತರ ಪ್ರದೇಶ, ಪಂಜಾಬ್ ಹಾಗೂ ಹರಿಯಾಣ ಒಳಗೊಂಡು ವಿದ್ಯುತ್ ಸ್ಥಗಿತಗೊಂಡ ಎಂಟು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶ ಚಂಡೀಗಡ ಮುಖ್ಯಮಂತ್ರಿಗಳ ಸಭೆಯನ್ನು ಇದೇ 6ರಂದು ಮಧ್ಯಾಹ್ನ ಕರೆಯಲಾಗಿದೆ. ಮುಖ್ಯಮಂತ್ರಿಗಳು ಸಭೆಗೆ ಬರಲು ಆಗದಿದ್ದರೆ ಇಂಧನ ಸಚಿವರನ್ನು ಕಳುಹಿಸಬಹುದು. ಅಂದೇ ಬೆಳಿಗ್ಗೆ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿ ಹಾಗೂ ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಯಲಿದೆ ಎಂದು ವಿವರಿಸಿದರು.ವಿದ್ಯುತ್ ಸ್ಥಗಿತಕ್ಕೆ ಕಾರಣ ಯಾರು ಎಂದು ಬೆರಳು ತೋರಿಸಲು ಹೋಗುವುದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು. ಒಬ್ಬರನ್ನೊಬ್ಬರು ದೂರಿಕೊಂಡು ಕೂರುವುದರಿಂದ ಪ್ರಯೋಜನವಿಲ್ಲ. ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು ಎಂಬುದನ್ನು ರಾಜ್ಯಗಳಿಗೆ ಮನವರಿಕೆ ಮಾಡುವ ಉದ್ದೇಶದಿಂದ ಮುಖ್ಯಮಂತ್ರಿಗಳ ಸಭೆ ಕರೆಯಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.ವಿದ್ಯುತ್ ಸ್ಥಗಿತಕ್ಕೆ ಕಾರಣವಾದ ಅಂಶಗಳ ಪತ್ತೆಗೆ ತಜ್ಞರ ಸಮಿತಿ ರಚಿಸಲಾಗಿದೆ. ಹದಿನೈದು ದಿನದೊಳಗೆ ಸಮಿತಿ ವರದಿ ಸಲ್ಲಿಸಲಿದೆ. ಬುಧವಾರ ತಜ್ಞರು ಸಭೆ ಸೇರಿ ಸಮಾಲೋಚನೆ ನಡೆಸಿದರು ಎಂದು ಮೊಯಿಲಿ ವಿವರಿಸಿದರು.ವಿದ್ಯುತ್ ಸಚಿವಾಲಯದ ಅಧೀನದಲ್ಲಿ ಕೆಲಸ ಮಾಡುವ ಸಾರ್ವಜನಿಕ ಸಂಸ್ಥೆಗಳು ದಕ್ಷತೆಯಿಂದ ಕೆಲಸ ಮಾಡಬೇಕು. ಹೊಣೆಗಾರಿಕೆಯಿಂದ ಕೆಲಸ ಮಾಡದ ಸಂಸ್ಥೆಗಳು ಏಕಿರಬೇಕು ಎಂದು ಕೇಳಿದರು. ಯಾವುದೇ ಸಾರ್ವಜನಿಕ ಸಂಸ್ಥೆ ಅದಕ್ಷತೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.