ವಿದ್ಯುತ್ ಮಿತವ್ಯಯಕ್ಕೆ ಐಪಿ ಸೆಟ್ ಬದಲು

7

ವಿದ್ಯುತ್ ಮಿತವ್ಯಯಕ್ಕೆ ಐಪಿ ಸೆಟ್ ಬದಲು

Published:
Updated:

ಮಂಗಳೂರು: ನೀರು ಹಾಗೂ ವಿದ್ಯುತ್ ಮಿತವ್ಯಯಕ್ಕೆ ಪ್ರಥಮ ಆದ್ಯತೆ ನೀಡಿರುವ ಈ ಬಾರಿಯ ರಾಜ್ಯ ಬಜೆಟ್ ವಿವಿಧ ವಿದ್ಯುತ್ ಕಂಪೆನಿಗಳ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಾಯೋಗಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದು ‘ಮೆಸ್ಕಾಂ’ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಮಂಗಳೂರು ಹಾಗೂ ಉಡುಪಿ ವಿಭಾಗದಿಂದ ಈ ಪ್ರಕ್ರಿಯೆ ಆರಂಭವಾಗಲಿದೆ.ಅಧಿಕ ವಿದ್ಯುತ್ ಬೇಡುವ ಹಳೆಯ ನೀರಾವರಿ ಪಂಪ್‌ಸೆಟ್‌ಗಳನ್ನು ಬದಲಿಸಿ ಅವುಗಳನ್ನು ಸಕ್ರಮಗೊಳಿಸುವ ದಿಸೆಯಲ್ಲಿ 100 ಕೋಟಿ ರೂಪಾಯಿ ಹಣ ಮೀಸಲಿಡಲಾಗಿದ್ದು, ಈ ಮೂಲಕ ಗರಿಷ್ಠ ವಿದ್ಯುತ್ ಉಳಿತಾಯಕ್ಕೆ ಇಂಧನ ಇಲಾಖೆ ಮುಂದಾಗಿದೆ. ಒಂದು ಅಂದಾಜಿನ ಪ್ರಕಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂತಹ 17 ಲಕ್ಷ ನೀರಾವರಿ ಪಂಪ್‌ಸೆಟ್‌ಗಳಿದ್ದು, ಎಲ್ಲ ಸೆಟ್‌ಗಳಿಗೂ ಹಂತ ಹಂತವಾಗಿ ಮೀಟರ್ ಅಳವಡಿಸುವ ಮೂಲಕ ಅವುಗಳನ್ನು ಸಕ್ರಮಗೊಳಿಸಲಾಗುತ್ತಿದೆ.ರಾಜ್ಯದ ಕೆಲ ಜಿಲ್ಲೆಗಳಿಗೆ ಹೋಲಿಸಿದರೆ ನೀರಾವರಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಕಾರ್ಯ ದಕ್ಷಿಣ ಕನ್ನಡದಲ್ಲಿ ಗರಿಷ್ಠ ಮಟ್ಟದಲ್ಲಿ ಕಾರ್ಯಗತವಾಗಿದ್ದು, ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ(ಮೆಸ್ಕಾಂ) ವ್ಯಾಪ್ತಿಯ ಜಿಲ್ಲೆಗಳಲ್ಲಿ ಮೊದಲ ಸ್ಥಾನದಲ್ಲಿದೆ.ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆ ವ್ಯಾಪ್ತಿ ಹೊಂದಿರುವ ಮೆಸ್ಕಾಂಗೆ ವಿವಿಧ ವರ್ಗದ 17.06 ಲಕ್ಷ ಗ್ರಾಹಕರಿದ್ದಾರೆ. ನೀರಾವರಿ ಪಂಪ್‌ಸೆಟ್ ಬಳಕೆದಾರರ ಸಂಖ್ಯೆಯೇ 2 ಲಕ್ಷಕ್ಕೂ ಅಧಿಕ(ಒಟ್ಟು 2,00,643). ಒಟ್ಟಾರೆ ಗ್ರಾಹಕರಲ್ಲಿ ಶೇ. 11.76 ಗ್ರಾಹಕರಷ್ಟೇ ಈ ಯೋಜನೆಗೆ ಒಳಗೊಳ್ಳುತ್ತಿದ್ದಾರೆ. ಇತ್ತೀಚಿನ ಮಾಹಿತಿಯಂತೆ ಒಟ್ಟಾರೆ ವಿದ್ಯುತ್ ಬೇಡಿಕೆಯಲ್ಲಿ ಈ ವರ್ಗದ ಗ್ರಾಹಕರ ಪಾಲು ಶೇ 25.51ರಷ್ಟು.2011ರ ಜನವರಿ ಅಂತ್ಯದಲ್ಲಿ ಮೆಸ್ಕಾಂ ವ್ಯಾಪ್ತಿಯ 8 ವಿದ್ಯುತ್ ವಿಭಾಗಗಳಲ್ಲಿನ ನೋಂದಾಯಿತ ನೀರಾವರಿ ಪಂಪ್‌ಸೆಟ್ ಬಳಕೆದಾರರ ಸಂಖ್ಯೆ 2,02,876. ಈ ಪೈಕಿ ಇದೀಗ ಗರಿಷ್ಠ ವಿದ್ಯುತ್ ಉಳಿತಾಯ ಸಾಧಿಸಲು ಆಯ್ದುಕೊಂಡ ಮಂಗಳೂರು ವಿಭಾಗದಲ್ಲಿ 16863 ಹಾಗೂ ಉಡುಪಿ ವಿಭಾಗದಲ್ಲಿ 52204 ಬಳಕೆದಾರರಿದ್ದಾರೆ.‘ಗ್ರಾಹಕರು ನೀಡಿದ ಸಹಕಾರದ ಪರಿಣಾಮವಾಗಿ ಮೆಸ್ಕಾಂ ವ್ಯಾಪ್ತಿಯಲ್ಲಿ ನೀರಾವರಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸುವ ಕಾರ್ಯ ಶೇ. 90ರಷ್ಟು ಪೂರ್ಣಗೊಂಡಿದ್ದು, ಉಳಿದ ಭಾಗಗಳಲ್ಲೂ ಈ ಕಾರ್ಯ ಇನ್ನಷ್ಟೇ ನಡೆಯಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು ಹಾಗೂ ಉಡುಪಿ ವಿಭಾಗಗಳಲ್ಲಿ ಈ ಪ್ರಕ್ರಿಯೆ ಶೇ. 100ರಷ್ಟು ಆಗಿದ್ದು ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು ಹಾಗೂ ಕಡೂರು ವಿಭಾಗದಲ್ಲಿ ಮಾತ್ರ ನಮ್ಮ ಕೆಲಸಕ್ಕೆ ಸ್ವಲ್ಪ ಅಡ್ಡಿಯುಂಟಾಗಿದೆ’ ಎಂದು ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ (ತಾಂತ್ರಿಕ) ಉಪೇಂದ್ರ ಕಿಣಿ ‘ಪ್ರಜಾವಾಣಿ’ಗೆ ಶುಕ್ರವಾರ ತಿಳಿಸಿದರು.ಈಗಾಗಲೇ ಮೀಟರ್ ಅಳವಡಿಕೆಯಾಗಿರುವ ನೀರಾವರಿ ಪಂಪ್‌ಸೆಟ್‌ಗಳಲ್ಲಿ ಕೆಲವು ಹಳೆಯದಾಗಿದ್ದು, ಅಧಿಕ ವಿದ್ಯುತ್ ಬೇಕಾಗುತ್ತಿದೆ. ಇನ್ನುಳಿದಂತೆ ಇನ್ನೂ ಶೇ. 10ರಷ್ಟು ಭಾಗದಲ್ಲಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಕೆಯಾಗಿಲ್ಲ. ಇವುಗಳಲ್ಲಿ ಬಹುತೇಕ ಹಳೆಯದಾಗಿದ್ದು ಬದಲಿಸಲು ರೈತರಿಗೆ ಕೇಳಿಕೊಳ್ಳಲಾಗಿದೆ. ಆದರೆ ಇದು ದೀರ್ಘಕಾಲೀನ ಪ್ರಕ್ರಿಯೆಯಾಗಿದ್ದು ಬಳಕೆದಾರರಲ್ಲಿ ಮೊದಲು ಜಾಗೃತಿ ಮೂಡಿಸಬೇಕಾಗಿದೆ ಎಂದು ವಿವರಿಸಿದರು.ನೀರಾವರಿ ಪಂಪ್‌ಸೆಟ್‌ಗಳಿಗೆ ಗರಿಷ್ಠ ವಿದ್ಯುತ್ ಅಗತ್ಯವಿದ್ದರೂ ಸದ್ಯ ಇವುಗಳಿಗೆ ಬರುವ ಬಿಲ್ ಸರ್ಕಾರವೇ ಪಾವತಿಸುತ್ತಿದ್ದು, ಅಷ್ಟು ಮೊತ್ತದ ಸಹಾಯಧನವನ್ನು ವಿವಿಧ ವಿದ್ಯುತ್ ಕಂಪೆನಿಗಳಿಗೆ ನೀಡಲಾಗುತ್ತಿದೆ. 2010-11ರಲ್ಲಿ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಬೇಡಿಕೆ ಪ್ರಮಾಣ ರೂ. 91.35 ಕೋಟಿಯಷ್ಟಾಗಿದ್ದು ಮೆಸ್ಕಾಂಗೆ ಸರ್ಕಾರದಿಂದ ಸಹಾಯಧನ ರೂಪದಲ್ಲಿ ಭರ್ತಿಮಾಡಲಾದ ಮೊತ್ತ ರೂ 77.51 ಕೋಟಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry