ವಿದ್ಯುತ್ ಯೋಜನೆಗೆ ಕಲ್ಲಿದ್ದಲು ಲಿಂಕೇಜ್ ಕೇಂದ್ರ ಅಗತ್ಯ

7

ವಿದ್ಯುತ್ ಯೋಜನೆಗೆ ಕಲ್ಲಿದ್ದಲು ಲಿಂಕೇಜ್ ಕೇಂದ್ರ ಅಗತ್ಯ

Published:
Updated:

ರಾಯಚೂರು: ಉತ್ತರ ಭಾರತದ ಗ್ರಿಡ್‌ಗಳನ್ನು ದಕ್ಷಿಣ ಭಾರತದ ಗ್ರಿಡ್‌ಗೆ ಸಂಪರ್ಕ ಕಲ್ಪಿಸುವ ಮೂಲಕ ಕರ್ನಾಟಕ ರಾಜ್ಯ ಸೇರಿದಂತೆ ದಕ್ಷಿಣ ಭಾರತದ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಸಹಕಾರಿ ಆಗಲಿದೆ. ರಾಜ್ಯದ ಶಾಖೋತ್ಪನ್ನ ವಿದ್ಯುತ್ ಯೋಜನೆಗಳಿಗೆ ಕಲ್ಲಿದ್ದಲು ಲಿಂಕೇಜ್ ಕಲ್ಪಿಸಬೇಕು. ಇದರಿಂದ ರಾಜ್ಯ ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗೆ ಹೋಗಲಾಡಿಸಲು ಸಾಧ್ಯವಾಗಲಿದೆ ಎಂದು ರಾಜ್ಯ ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.ಶುಕ್ರವಾರ ಇಲ್ಲಿಗೆ ಸಮೀಪದ ಆಸ್ಕಿಹಾಳ ಹತ್ತಿರ ರಾಯಚೂರು-ಸೊಲ್ಲಾಪುರ 765 ಕೆವಿ ಸಾಮರ್ಥ್ಯದ ವಿದ್ಯುತ್ ಪ್ರಸರಣ ವ್ಯವಸ್ಥೆ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದರು.ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಬೇರೆ ರಾಜ್ಯಗಳಲ್ಲಿ ವಿದ್ಯುತ್ ಸಮಸ್ಯೆ ಇದೆ. ಆಂಧ್ರಪ್ರದೇಶದಲ್ಲಿ ಈಗ ಕೈಗಾರಿಕೆಗಳಿಗೆ ವಾರದಲ್ಲಿ 3 ದಿನ ಮಾತ್ರ ವಿದ್ಯುತ್ ಕೊಡಲಾಗುತ್ತಿದೆ.ರಾಜ್ಯದ ವಿದ್ಯುತ್ ಸಮಸ್ಯೆ ಹೋಗಲಾಡಿಸಲು ಕರ್ನಾಟಕ ವಿದ್ಯುತ್ ಖರೀದಿ ಮಾಡುತ್ತಿದೆ. ಉತ್ತರ ಭಾರತದ ರಾಜ್ಯದಲ್ಲಿ ವಿದ್ಯುತ್ ಖರೀದಿಸಿದರೂ ತರಲು ವ್ಯವಸ್ಥೆ ಇರಲಿಲ್ಲ. ಈ ಸಂಪರ್ಕ ವ್ಯವಸ್ಥೆಯಿಂದ ಸಹಕಾರಿ ಆಗಲಿದೆ ಎಂದರು.ಕೇಂದ್ರ ಸರ್ಕಾರವು ಕಲ್ಲಿದ್ದಲು ಲಿಂಕೇಜ್ ಕೊಡದೇ ಇರುವುದರಿಂದ ಕರ್ನಾಟಕ ಶಾಖೋತ್ಪನ್ನ ವಿದ್ಯುತ್ ಯೋಜನೆಗಳಾದ ಯರಮರಸ್, ಬಳ್ಳಾರಿ, ಛತ್ತೀಸಗಡದ ಶಾಖೋತ್ಪನ್ನ ವಿದ್ಯುತ್ ಯೋಜನೆ ಕಾರ್ಯ ಆರಂಭಿಸಲು ಸಾಧ್ಯವಾಗದಂತಾಗಿದೆ. ಕೂಡಲೇ ಕಲ್ಲಿದ್ದಲು ಲಿಂಕೇಜ್ ಕೊಡಬೇಕು. ಇದೇ 16ರಂದು ಈ ಕುರಿತು ನಡೆಯುವ ಸಭೆಯಲ್ಲಿ ಕೇಂದ್ರ ಇಂಧನ ಸಚಿವರು ಈ ಬಗ್ಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.ಈಗ ಕೇವಲ ಸಂಪರ್ಕ ವ್ಯವಸ್ಥೆ, ಗ್ರಿಡ್ ಆದರೆ ಸಾಲದು. ವಿದ್ಯುತ್ ಸಂಪರ್ಕ ಮಾರ್ಗ ಬೇಗ ರಚನೆಗೊಳ್ಳಬೇಕು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry