ಭಾನುವಾರ, ಮೇ 22, 2022
21 °C

ವಿದ್ಯುತ್ ವಾಹಕವಾಗಿ ಪ್ಲಾಸ್ಟಿಕ್: ಸಂಶೋಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಪ್ಲಾಸ್ಟಿಕ್‌ನಲ್ಲಿ ವಿದ್ಯುತ್ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪ್ರವಹಿಸುತ್ತದೆ ಎಂದು ಇದುವರೆಗೆ ನಂಬಲಾಗಿತ್ತು. ಅದಕ್ಕೆಂದೇ ವಿದ್ಯುತ್ ನಿರೋಧಕವಾಗಿ ಪ್ಲಾಸ್ಟಿಕ್‌ಅನ್ನು ಬಳಸಲಾಗುತ್ತಿದೆ. ಆದರೆ ಪ್ಲಾಸ್ಟಿಕ್‌ನಲ್ಲಿ ಲೋಹಗಳಂತೆಯೇ ಅಧಿಕ ಪ್ರಮಾಣದಲ್ಲಿ ವಿದ್ಯುತ್ ಪ್ರವಹಿಸಬಲ್ಲದು ಎಂದು ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.ಪ್ಲಾಸ್ಟಿಕ್ ಹಾಳೆಯ ಮಧ್ಯೆ ತೆಳುವಾದ ಲೋಹದ ಪದರವನ್ನು ಸೇರಿಸಿ ಅದನ್ನು ಅಯಾನ್ ಪರಮಾಣು ಎಲೆಕ್ಟ್ರಾನ್ ಮತ್ತು ಪಾಲಿಮರ್‌ನೊಂದಿಗೆ ಮಿಶ್ರಣ ಮಾಡುವುದರಿಂದ ಅತ್ಯಂತ ಕಡಿಮೆ ವೆಚ್ಚದಲ್ಲಿ, ದೀರ್ಘಕಾಲ ಬಾಳಿಕೆ ಬರುವ ಮತ್ತು ಹೊಂದಿಕೊಳ್ಳುವ ಗುಣವುಳ್ಳ ಪ್ಲಾಸ್ಟಿಕ್ ವಿದ್ಯುತ್ ವಾಹಕಗಳನ್ನು ತಯಾರಿಸಬಹುದು ಎಂದು ಕ್ವೀನ್ಸ್‌ಲೆಂಡ್ ವಿಶ್ವವಿದ್ಯಾನಿಲಯದ ತಂಡದ ಅಧ್ಯಯನವೊಂದು ತಿಳಿಸಿದೆ.‘ಅಯಾನ್ ಎಲೆಕ್ಟ್ರಾನ್ ಬಳಕೆಯಿಂದ ಪ್ಲಾಸ್ಟಿಕ್ ಹಾಳೆಯನ್ನು ವಿದ್ಯುತ್ ತಂತಿಗಳಲ್ಲಿ ಬಳಸುವ ಲೋಹಗಳಂತೆಯೇ ವಿದ್ಯುತ್ ವಾಹಕವಾಗಿ ಪರಿವರ್ತಿಸಲು ಸಾಧ್ಯ. ಅತಿ ಶೀತ ವಾತಾವರಣದಲ್ಲಿಯೂ ಯಾವುದೇ ನಿರೋಧಕಗಳ ಅಗತ್ಯವಿಲ್ಲದೆಯೇ ವಿದ್ಯುತ್ ಪ್ರವಹಿಸುವ ಅಧಿವಾಹಕದಂತೆಯೂ (ಸೂಪರ್‌ಕಂಡಕ್ಟರ್) ಇದು ಕಾರ್ಯನಿರ್ವಹಿಸಬಲ್ಲದು’ ಎಂದು ಸಂಶೋಧನಾ ತಂಡದ ಮುಖ್ಯಸ್ಥ ಪ್ರೊ.ಪಾಲ್ ಮೆರೆಡಿತ್ ತಿಳಿಸಿದ್ದಾರೆ.ಕೈಗಾರಿಕಾ ಗುಣಮಟ್ಟದ ಪ್ಲಾಟಿನಮ್ ನಿರೋಧಕವುಳ್ಳ ಥರ್ಮಾಮೀಟರ್‌ನೊಂದಿಗೆ ಈ ತಂಡ ತಾನು ತಯಾರಿಸಿದ ವಿದ್ಯುತ್‌ಕಾಂತೀಯ ನಿರೋಧಕವುಳ್ಳ ಥರ್ಮಾಮೀಟರನ್ನು ಪ್ರದರ್ಶಿಸಿದ್ದು, ಹೋಲಿಕೆಯಲ್ಲಿ ಅತ್ಯಂತ ನಿಖರತೆ ಕಂಡುಬಂದಿದೆ ಎಂದು ಅದು ಹೇಳಿದೆ.ಈ ಸಂಶೋಧನೆ ಅತ್ಯಂತ ಆಸಕ್ತಿದಾಯಕವಾಗಿದೆ. ಏಕೆಂದರೆ ಪಾಲಿಮರ್ ಹೊಂದಾಣಿಕೆ ಗುಣ, ಕಡಿಮೆ ವೆಚ್ಚ ಮತ್ತು ಗಟ್ಟಿತನಗಳನ್ನು ಹೊಂದಿದೆ. ಅಲ್ಲದೆ ಅತ್ಯುತ್ತಮ ವಿದ್ಯುತ್ ವಾಹಕವೂ ಆಗಿದ್ದು, ಪ್ಲಾಸ್ಟಿಕ್ ಎಲೆಕ್ಟ್ರಾನಿಕ್‌ನಲ್ಲಿ ಹಲವು ಹೊಸ ಸಂಶೋಧನೆಗಳಿಗೆ ದಾರಿ ಮಾಡಿಕೊಟ್ಟಿದೆ ಎಂದು ತಂಡದ ಸದಸ್ಯರಾಗಿರುವ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ ಪ್ರೊ.ಆಡಮ್ ಮಿಕೊಲಿಕ್ ಅವರು  ಹೇಳಿದ್ದಾರೆ.ವಿದ್ಯುನ್ಮಾನ ನಿರೋಧಕವನ್ನು ಲಕ್ಷಾಂತರ ಬಗೆಯಲ್ಲಿ ಮಾರ್ಪಡಿಸಬಹುದು. ಸ್ವಲ್ಪವೂ ವಿದ್ಯುತ್ ಪ್ರವಹಿದಂತಹ ಪ್ಲಾಸ್ಟಿಕ್ ಮತ್ತು ಲೋಹಗಳನ್ನೂ ತಯಾರಿಸಬಹುದು ಎಂದು ವಿಜ್ಞಾನಿ ಆಂಡ್ರ್ಯೂ ಸ್ಟೀಫನ್ಸನ್ ತಿಳಿಸಿದರು.ಸೂಕ್ಷ್ಮ ವಿದ್ಯುನ್ಮಾನ ಕೈಗಾರಿಕೆಗಳಲ್ಲಿ ಇರುವ ಸಾಮಾನ್ಯ ಉಪಕರಣಗಳನ್ನೇ ಬಳಸಿ ಈ ನೂತನ ಉತ್ಪನ್ನವನ್ನು ತಯಾರಿಸಬಹುದು. ಅರೆವಾಹಕ ಪಾಲಿಮರ್‌ಗೆ ಹೋಲಿಸಿದರೆ ಅತಿ ಹೆಚ್ಚು ಸಹಿಷ್ಣುತೆಯ ಗುಣ ಹೊಂದಿದೆ ಎಂದು ವಿಜ್ಞಾನಿಗಳ ತಂಡ ಹೇಳಿಕೊಂಡಿದೆ.


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.