ವಿದ್ಯುತ್ ವ್ಯತ್ಯಯ: ನೀರಿಗಾಗಿ ಹಾಹಾಕಾರ

7

ವಿದ್ಯುತ್ ವ್ಯತ್ಯಯ: ನೀರಿಗಾಗಿ ಹಾಹಾಕಾರ

Published:
Updated:

ಕೆಜಿಎಫ್: ನಗರದಲ್ಲಿ ಕಾಡುತ್ತಿರುವ ವಿದ್ಯುತ್ ಸ್ಥಗಿತ ಈಗ ಕುಡಿಯುವ ನೀರಿಗೂ ತಟ್ಟಿದೆ. ಇದಕ್ಕೆ ನಿದರ್ಶನ ಬೇತಮಂಗಲ ಜಲಾಶಯದಿಂದ ಕೆಜಿಎಫ್ ನಗರಕ್ಕೆ ಕುಡಿಯುವ ನೀರು ಪೂರೈಕೆಯಲ್ಲಿ ಆಗಿರುವ ಅಸಮರ್ಪಕ ವಿತರಣೆ .ವಾಡಿಕೆ ಮಳೆ ಸುರಿಯದ ಪರಿಣಾಮ ಬೇತಮಂಗಲ ಜಲಾಶಯ ಈ ವರ್ಷ ಕೂಡ ತುಂಬಿಲ್ಲ. ನೀರಿನ ಮಟ್ಟ ದಿನೇ ದಿನೇ ಕಡಿಮೆಯಾಗುತ್ತಿದೆ. ಆದರೂ ಸುಮಾರು ಎರಡು ತಿಂಗಳಿಗಾಗುವಷ್ಟು ನೀರಿನ ಸಂಗ್ರಹ ಜಲಾಶಯದಲ್ಲಿದೆ. ಆದರೆ ವಿದ್ಯುತ್ ವ್ಯತ್ಯಯದಿಂದ ನೀರನ್ನು ಪಂಪ್ ಮಾಡಲು ಸಾಧ್ಯವಾಗದ ಪರಿಸ್ಥಿತಿ ಉದ್ಘವಿಸಿದೆ.ಪ್ರತಿನಿತ್ಯ ಸುಮಾರು ಮೂರರಿಂದ ನಾಲ್ಕು ಗಂಟೆ ಕೂಡ ಸಮರ್ಪಕ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಇದರಿಂದ ಯಂತ್ರಗಳೂ ಹಾಳಾಗುತ್ತಿವೆ. ನೀರಿನ ಪಂಪ್ ಕೂಡ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದು ಜಲಮಂಡಳಿ ಅಧಿಕಾರಿಗಳ ಅಳಲು.110 ವರ್ಷದ ಹಿಂದೆ ಬ್ರಿಟಿಷರು ಜಲಾಶಯ ಆಧುನೀಕರಿಸಿ ನೀರು ಸರಬರಾಜು ಕೇಂದ್ರ ಸ್ಥಾಪಿಸಿದ್ದರು. ವಿದ್ಯುತ್ ಕೊರತೆ ಆಗದಂತೆ ನಿರಂತರ ವಿದ್ಯುತ್ ಸಂಪರ್ಕಕ್ಕೆ ಕೂಡ ವ್ಯವಸ್ಥೆ ಮಾಡಿದ್ದರು. ನಂತರ ಅದರ ಉಸ್ತುವಾರಿ ವಹಿಸಿಕೊಂಡ ಕೆಇಬಿ ಕೂಡ ಎಕ್ಸ್‌ಪ್ರೆಸ್ ಫೀಡರ್ ಲೈನ್ ಅಳವಡಿಸಿ ಪೂರೈಕೆ ಕೇಂದ್ರಕ್ಕೆ ವಿದ್ಯುತ್ ವೋಲ್ಟೆಜ್ ವ್ಯತ್ಯಯ ಬರದಂತೆ ಎಚ್ಚರಿಕೆ ವಹಿಸಿಕೊಂಡಿತ್ತು.ಬರುಬರುತ್ತ ಎಕ್ಸ್‌ಪ್ರೆಸ್ ಫೀಡರ್ ಲೈನಿನ ಸುತ್ತಮುತ್ತ ಇರುವ ಗ್ರಾಮಗಳ ಕೆಲವು ಪ್ರಭಾವಿ ಮುಖಂಡರು ಕೆಇಬಿ ಮೇಲೆ ಪ್ರಭಾವ ಬೀರಿ ಸದರಿ ಲೈನಿನಿಂದ ವಿದ್ಯುತ್ ಸಂಪರ್ಕ ಪಡೆದಕೊಳ್ಳಲು ಆರಂಭಿಸಿದರು. ಇದರಿಂದ ಸಮರ್ಪಕ ವಿದ್ಯುತ್ ಪೂರೈಕೆಗೆ ಅಡ್ಡಿಯಾಯಿತು ಎನ್ನುವುದು ಇಲಾಖೆ ಅಧಿಕಾರಿಗಳ ಮಾತು. ನೀರು ಸರಬರಾಜು ಕೇಂದ್ರಕ್ಕೆ ವಿದ್ಯುತ್ ಅಡ್ಡಿಯಾಗದಂತೆ ಹೊಸ ವಿದ್ಯುತ್ ಉಪಕೇಂದ್ರವನ್ನು ಗುಟ್ಟಹಳ್ಳಿಯಲ್ಲಿ ಆರಂಭಿಸಲು ರಾಜ್ಯ ವಿದ್ಯುತ್ ಪ್ರಸರಣ ನಿಗಮ ಭೂ ಸ್ವಾಧೀನ ಮಾಡಿಕೊಂಡಿದ್ದರೂ, ಕಾಮಗಾರಿ ಮಾತ್ರ ಇನ್ನೂ ಶುರುವಾಗಿಲ್ಲ.ಬೇತಮಂಗಲದ ಬೆಸ್ಕಾಂ ಶಾಖೆ ವ್ಯಾಪ್ತಿಯಲ್ಲಿ 40 ಗ್ರಾಮಗಳಿವೆ. ಇವೆಲ್ಲಕ್ಕೂ ಕೆಜಿಎಫ್‌ನ ಆಂಡರಸನ್‌ಪೇಟೆ ಮತ್ತು ಟೋಲ್‌ಗೇಟ್ ಬಳಿಯ ಉಪಕೇಂದ್ರಗಳಿಂದ ವಿದ್ಯುತ್ ಸರಬರಾಜು ಆಗಬೇಕು. ಸುಮಾರು 15 ಕಿ.ಮೀ ದೂರದಿಂದ ವಿದ್ಯುತ್ ಸರಬರಾಜು ಮಾಡುವಲ್ಲಿ ತಾಂತ್ರಿಕ ತೊಂದರೆಗಳೂ ಕಾಣಿಸಿಕೊಂಡಿವೆ. ಈ ದಿಸೆಯಲ್ಲಿ 66/11 ಕೆ.ವಿ. ಉಪಕೇಂದ್ರವನ್ನು ಗುಟ್ಟಹಳ್ಳಿಯಲ್ಲಿ ತುರ್ತಾಗಿ ಸ್ಥಾಪಿಸಿದರೆ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ ಎಂಬುದು ಬೆಸ್ಕಾಂ ಅಧಿಕಾರಿಗಳಿಗೆ ಕೂಡ ತಿಳಿದಿದೆ. ಆದರೆ ಅದನ್ನು ಕಾರ್ಯಗತಗೊಳಿಸಲು ಮಾತ್ರ ಸಾಧ್ಯವಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry