ಮಂಗಳವಾರ, ನವೆಂಬರ್ 19, 2019
29 °C

ವಿದ್ಯುತ್ ಸಂಗ್ರಹಕ್ಕೆ `ಫ್ಲೈವ್ಹೀಲ್' ತಂತ್ರ

Published:
Updated:
ವಿದ್ಯುತ್ ಸಂಗ್ರಹಕ್ಕೆ `ಫ್ಲೈವ್ಹೀಲ್' ತಂತ್ರ

ಜಲ, ಅಣು, ಕಲ್ಲಿದ್ದಲು, ಪವನ, ಸೌರ, ಸಮುದ್ರದ ಅಲೆಗಳು ಹಾಗೂ ಇನ್ನಿತರೆ ಮೂಲಗಳಿಂದಲೂ ವಿದ್ಯುತ್ ಪಡೆದುಕೊಳ್ಳುತ್ತಿದ್ದೇವೆ. ಇಷ್ಟೆಲ್ಲ ಮೂಲಗಳಿಂದ ವಿದ್ಯುಚ್ಛಕ್ತಿ ದೊರೆತರೂ ಸಾಲದಾಗಿದೆ. ವಿದ್ಯುತ್ ಬಳಕೆ ಪ್ರಮಾಣ ಏರುತ್ತಲೇ ಇರುವುದರಿಂದ ವಿದ್ಯುತ್ ಸರಬರಾಜು ಕಡಿತ ಕ್ರಮ ಮುಂದುವರಿದಿದೆ.

ಸುಲಭ ಮಾರ್ಗದಿಂದ ವಿದ್ಯುತ್ ಪಡೆಯಲು ವಿಭಿನ್ನ ಸಂಶೋಧನೆಗಳು ನಡೆಯುತ್ತಲೇ ಇವೆ. ತುಮಕೂರು ಸಿದ್ದಗಂಗಾ ಎಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳ ತಂಡ ``ಫ್ಲೈವ್ಹೀಲ್‌ಎನರ್ಜಿ ಸ್ಟೋರೇಜ್ ಆ್ಯಂಡ್ ಜನರೇಷನ್ ಸಿಸ್ಟಂ' ಅಭಿವೃದ್ಧಿಪಡಿಸಿದ್ದು, ಇದರಿಂದಲೂ ವಿದ್ಯುತ್ ಪಡೆದುಕೊಳ್ಳಬಹುದು, ಸಂಗ್ರಹಿಸಿಟ್ಟುಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.ಹಿರಿಯ ವಿದ್ಯಾರ್ಥಿಗಳು ಮೊದಲೇ ಇದೇ ಬಗೆಯಲ್ಲಿ `ಫ್ಲೈವ್ಹೀಲ್ ಎನರ್ಜಿ ಸ್ಟೋರೇಜ್  ಅಂಡ್ ರಿಟ್ರಿವಲ್(ಜನರೇಷನ್) ಸಿಸ್ಟಂ' ಮಾದರಿ ರೂಪಿಸಿದ್ದರು. ಅದರ ಮುಂದಿನ ಭಾಗವಾಗಿ 2013ನೇ ಸಾಲಿನ 8ನೇ ಸೆಮಿಸ್ಟರ್‌ನ ನಾಲ್ವರು ವಿದ್ಯಾರ್ಥಿಗಳ  ತಂಡ `ಫ್ಲೈವ್ಹೀಲ್ ಎನರ್ಜಿ ಸ್ಟೋರೇಜ್  ಅಂಡ್ ರಿಟ್ರಿವಲ್(ಜನರೇಷನ್) ಸಿಸ್ಟಂ' ಪ್ರಯೋಗದಲ್ಲಿ ಮತ್ತಷ್ಟು ಸುಧಾರಣೆಗಳನ್ನು ತಂದು ಬಹುತೇಕ ಯಶಸ್ಸು ಕಂಡಿದೆ. ಹಾಗೂ ಪ್ರಾಜೆಕ್ಟ್‌ನಲ್ಲಿ ಇನ್ನಷ್ಟು ಸುಧಾರಣೆ ತರಲು, ಹೆಚ್ಚಿನ ಮಟ್ಟದಲ್ಲಿ ಸಂಶೋಧನೆ ಕೈಗೊಳ್ಳಲೆಂದೇ `ಸೆಂಟ್ರಲ್ ಪವರ್ ರಿಸರ್ಚ್ ಇನ್‌ಸ್ಟಿಟ್ಯೂಟ್' ್ಙ9.50 ಲಕ್ಷ ಅನುದಾನವನ್ನು ಕಂತುಗಳಲ್ಲಿ ನೀಡಲು ಮುಂದಾಗಿದೆ.ವ್ಯಾಸಂಗದ ಕೊನೆಯ ಹಂತದಲ್ಲಿ ತಮ್ಮದೇ ಆದ ಹೊಸ ಬಗೆಯ ತಾಂತ್ರಿಕ ಕೌಶಲವನ್ನು ಮಾದರಿ ಯಂತ್ರೋಪಕರಣ ಸಿದ್ಧಪಡಿಸುವ ಮೂಲಕ ದೃಢೀಕರಿಸಬೇಕಿದ್ದ ನಾಲ್ವರು ಯುವ ತಂತ್ರಜ್ಞರ ತಂಡ, ಪ್ರಾಧ್ಯಾಪಕರು ನೀಡಿದ ವಿಷಯವನ್ನೇ ಆಧರಿಸಿ ಪ್ರಾಯೋಗಿಕ ಯೋಜನೆ ಸಿದ್ಧಪಡಿಸಿದ್ದಾರೆ.ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಅಂತಿಮ  ವರ್ಷದ ಗೋವರ್ಧನ್, ಅರವಿಂದ್ ತಿವಾರಿ, ಗುರುದೀಪ್ ಮತ್ತು ಭಾರ್ಗವ್, ಈಗ `ಫ್ಲೈವ್ಹೀಲ್ ಎನರ್ಜಿ ಸ್ಟೋರೇಜ್ ಆ್ಯಂಡ್ ಜನರೇಷನ್ ಸಿಸ್ಟಂ' ರೂಪಿಸಿದ್ದಾರೆ. ಈ ಯಂತ್ರವನ್ನು `ಮ್ಯಾಗ್ನೆಟಿಕ್ ಲೆವಿಟೇಷನ್' ಆಧಾರದ ಮೇಲೆ ಈ ವಿದ್ಯಾರ್ಥಿ ತಂತಜ್ಞರು ಸಿದ್ಧಪಡಿಸಿದ್ದಾರೆ.ಆಯಸ್ಕಾಂತ ಶಕ್ತಿಯ ಪ್ರಭಾವ ಬಳಸಿಕೊಂಡು ವಸ್ತುವೊಂದು  ಯಾವುದೇ ಆಧಾರವಿಲ್ಲದೆ ಗಾಳಿಯಲ್ಲಿ ತೇಲಾಡುವಂತೆ ಮಾಡುವುದನ್ನೇ `ಮ್ಯಾಗ್ನೆಟಿಕ್ ಲೆವಿಟೇಷನ್' ಎನ್ನಲಾಗುತ್ತದೆ. ವಿದ್ಯಾರ್ಥಿ ತಂತ್ರಜ್ಞರ ತಂಡ ಇದೇ `ಮ್ಯಾಗ್ನೆಟಿಕ್ ಲೆವಿಟೇಷನ್' ಸೂತ್ರವನ್ನು ಅನುಸರಿಸಿ `ಫ್ಲೈವ್ಹೀಲ್ ಎನರ್ಜಿ ಸ್ಟೋರೇಜ್  ಅಂಡ್ ರಿಟ್ರಿವಲ್ (ಜನರೇಷನ್) ಸಿಸ್ಟಂ' ಪ್ರಯೋಗ ನಡೆಸಿ ಒಂದು ಹಂತದವರೆಗೆ ಯಶಸ್ಸನ್ನೂ ಕಂಡಿದ್ದಾರೆ.

ಬಳಸಿದ ಸಾಮಗ್ರಿ

`ಫ್ಲೈವ್ಹೀಲ್ ಎನರ್ಜಿ ಸ್ಟೋರೇಜ್  ಅಂಡ್ ರಿಟ್ರಿವಲ್(ಜನರೇಷನ್) ಸಿಸ್ಟಂ' ಮಾದರಿ ತಯಾರಿಸಲು 8 ಸೆಂ.ಮೀ. ವ್ಯಾಸದ ಎರಡು ವೃತ್ತಾಕಾರದ ಆಯಸ್ಕಾಂತಗಳು(ಫೆರೈಟ್ ಮ್ಯಾಗ್ನೆಟ್)  ಮತ್ತು 2 ಸೆಂ.ಮೀ. ಅಗಲದ ಉಂಗುರಾಕಾರದ ಇನ್ನೆರಡು ಆಯಸ್ಕಾಂತ  ಹಾಗೂ ಒಂದು 40 ಸೆಂ.ಮೀ. ಉದ್ದದ ಅಲ್ಯುಮಿನಿಯಂ ಲೋಹದ ಸರಳು ಬಳಸಿದ್ದಾರೆ. ಜತೆಗೆ ಈ ಪರಿಕರಗಳನ್ನು ಬಿಗಿಯಾಗಿ ಜೋಡಿಸಲು ಪ್ಲೈವುಡ್ ಹಲಗೆ ಮತ್ತು ಒಂದು ಅಡಿ ಉದ್ದ-ಅಗಲದ ಕನ್ನಡಿಯನ್ನೂ ಇದರಲ್ಲಿ ಬಳಸಿಕೊಳ್ಳಲಾಗಿದೆ.

ಆಯಸ್ಕಾಂತ ಅಳವಡಿಕೆ

ಮೊದಲು ಅಲ್ಯುಮಿನಿಯಂ ಸರಳಿನ ಎರಡೂ ತುದಿಗೆ 2 ಸೆಂ.ಮೀ. ಅಗಲದ ಆಯಸ್ಕಾಂತದ ಉಂಗುರಗಳನ್ನು ಪ್ಲಾಸ್ಟರ್ ಅಥವಾ ಫೆವಿಕಾಲ್ ಬಳಸಿ ಅಳವಡಿಸಲಾಗುತ್ತದೆ. ನಂತರ ಪ್ಲೈವುಡ್ ಹಲಗೆಯಲ್ಲಿ ದೊಡ್ಡ ಗಾತ್ರದ ಆಯಸ್ಕಾಂತ ವೃತ್ತಗಳನ್ನು ಜೋಡಿಸಲು ಅಗತ್ಯವಾದ ಸಣ್ಣ ಕುಳಿ ನಿರ್ಮಿಸಲಾಗಿದೆ. ಜತೆಗೆ ಮರದ ಪುಟ್ಟ ಪಟ್ಟಿಗಳನ್ನು ಸ್ಕ್ರೂ ಮಾಡುವ ಮೂಲಕ ಆಯಸ್ಕಾಂತ ವೃತ್ತಗಳು ಅಲುಗಾಡದಂತೆ ಜೋಡಿಸಲಾಗಿದೆ.`ನಂತರ ಅಲ್ಯುಮಿನಿಯಂ ಸರಳಿನ ಒಂದು ತುದಿಯನ್ನು ಚೂಪುಗೊಳಿಸಿಕೊಳ್ಳಬೇಕು. ನಂತರ ಈ ಸರಳನ್ನು ದೊಡ್ಡ ಆಯಸ್ಕಾಂತಗಳ ವೃತ್ತದ ಕೇಂದ್ರ ಭಾಗದಲ್ಲಿ ನೆಲೆಗೊಳ್ಳುವಂತೆ(ಚಿತ್ರದಲ್ಲಿರುವಂತೆ) ಮಾಡಬೇಕು. ಈ ಸರಳಿನ ಚೂಪಾದ ತುದಿಯು ಕನ್ನಡಿಗೆ ತುಸುವೇ ಸೋಕಿದಂತೆ (ಘರ್ಷಣೆಗೆ ಅವಕಾಶವಿಲ್ಲದಂತೆ) ಜೋಡಿಸಬೇಕು. ಅಲ್ಲಿಗೆ ಫ್ಲೈವ್ಹೀಲ್ ಎನರ್ಜಿ ಸ್ಟೋರೇಜ್  ಅಂಡ್ ರಿಟ್ರಿವಲ್(ಜನರೇಷನ್) ಸಿಸ್ಟಂ ಪ್ರಯೋಗದ ಒಂದು ಹಂತ ಮುಗಿದಂತೆ' ಎನ್ನುತ್ತಾರೆ ವಿದ್ಯಾರ್ಥಿ ಗೋವರ್ದನ್(ಮೊ: 95355 56289).

ಮೊದಲ ಚಲನೆಗೆ ಶಕ್ತಿ

ನಂತರ ಆಯಸ್ಕಾಂತ ವೃತ್ತಗಳೆರಡರ ನಡುವೆ ಯಾವುದೇ ಆಧಾರವಿಲ್ಲದೆ ಗಾಳಿಯಲ್ಲಿ ತೇಲುತ್ತಿರುವ ಅಲ್ಯುಮಿನಿಯಂ ಸರಳಿನಲ್ಲಿ ಮೊದಲ ಚಲನೆಗೆ ಹೊರಗಿನಿಂದ ಶಕ್ತಿ ನೀಡಬೇಕಾಗುತ್ತದೆ. ಈ ವಿದ್ಯಾರ್ಥಿಗಳ ಪ್ರಯೋಗದಲ್ಲಿ ಈ ಪುಟ್ಟ ಸರಳನ್ನು ಕೈಯಿಂದಲೇ ಸುತ್ತು ಹಾಕಿ ಚಲಿಸುವಂತೆ ಮಾಡಲಾಗಿದೆ. ದೊಡ್ಡ ಗಾತ್ರದ ವ್ಯವಸ್ಥೆಯಾದರೆ ಸರಳಿನ ಚಾಲನೆಗೆ ಸ್ಟಾರ್ಟರ್ ಅಥವಾ ಮೋಟರ್ ಅಗತ್ಯ ಬೀಳುತ್ತದೆ.ಚಲನೆಯ ಮುಂದುವರಿಕೆ

ಕೈಯಿಂದ ಆರಂಭದ ಚಲನೆಯ ಶಕ್ತಿಯನ್ನು ಪಡೆದುಕೊಂಡು ಸುತ್ತಲು ಆರಂಭಿಸುವ ಅಲ್ಯುಮಿನಿಯಂ ಸರಳು ನಂತರದಲ್ಲಿ ತನ್ನಷ್ಟಕ್ಕೆ ತಾನೇ ವೇಗವಾಗಿ ಸುತ್ತು ಹಾಕಲಾರಂಭಿಸುತ್ತದೆ. ಹಾಗೆ ಸುತ್ತುವ ಮೂಲಕವೇ ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತದೆ, ಜತೆಗೆ ಆ ಶಕ್ತಿಯನ್ನೂ ಸಂಗ್ರಹಿಸಿಟ್ಟುಕೊಳ್ಳುತ್ತದೆ. ನಂತರ ಅಗತ್ಯಬಿದ್ದಾಗ ಬಳಸಿಕೊಳ್ಳಲು ವಿತರಿಸುತ್ತದೆ.ಇಲ್ಲಿ ಹೀಗೆ ಸರಳಿನ ಸ್ವಯಂ ಚಾಲನೆಯು ಎಷ್ಟು ಸಮಯದವರೆಗೂ ಇರುತ್ತದೆ? ಎಂಬ ಪ್ರಶ್ನೆ ಎದುರಾಗಬಹುದು. ನ್ಯೂಟನ್‌ನ ಮೊದಲನೆಯ `ಚಲನೆಯ ನಿಯಮ'ದಂತೆ ಯಾವುದೇ ವಸ್ತು ತನ್ನ ಸ್ಥಿತಿಯಲ್ಲಿ ಚಲನೆಯಲ್ಲಿದ್ದಾಗ ಇನ್ನೊಂದು ವಸ್ತು ಅಥವಾ ಶಕ್ತಿಯಿಂದ ಅಡೆತಡೆ ಅಥವಾ ಅಡ್ಡಿ ಬರುವವರೆಗೂ ಆಗಿನ ಚಲನೆಯ ಸ್ಥಿತಿಯಲ್ಲಿಯೇ ಮುಂದುವರಿಯುತ್ತಾ ಇರುತ್ತದೆ. ಇದೇ ರೀತಿಯಲ್ಲಿ ಈ ವಿದ್ಯಾರ್ಥಿ ತಂತ್ರಜ್ಞರ `ಫ್ಲೈವ್ಹೀಲ್ ಎನರ್ಜಿ ಸ್ಟೋರೇಜ್  ಅಂಡ್ ರಿಟ್ರಿವಲ್ (ಜನರೇಷನ್) ಸಿಸ್ಟಂ' ಬಹಳಷ್ಟು ಸಮಯದವರೆಗೂ ಚಲನೆಯನ್ನು ಮುಂದುವರಿಸುತ್ತಾ ಇರುತ್ತದೆ. ಅಂದರೆ, ಚಲನೆಯಲ್ಲಿರುವ ಈ ವಸ್ತು ಇನ್ನೊಂದು ವಸ್ತು ಅಥವಾ ಶಕ್ತಿ ಜತೆ ಘರ್ಷಣೆಗೆ ಒಳಗಾಗುವವರೆಗೂ ಚಲನೆಯನ್ನು ಮುಂದುವರಿಸುತ್ತದೆ ಎಂದೇ ಅರ್ಥ.

ವಿದ್ಯುತ್ ಅವಕಾಶ

`ಫ್ಲೈವ್ಹೀಲ್ ಎನರ್ಜಿ ಸ್ಟೋರೇಜ್  ಅಂಡ್ ರಿಟ್ರಿವಲ್(ಜನರೇಷನ್) ಸಿಸ್ಟಂ'ನಲ್ಲಿ ವಿದ್ಯುತ್ ಅಥವಾ ಶಕ್ತಿಯ ಉತ್ಪಾದನೆಗೆ ವಿಪುಲ ಅವಕಾಶವಿದೆ. ಅಲ್ಯುಮಿನಿಯಂ ಸರಳಿನ ಮಧ್ಯ ಭಾಗದಲ್ಲಿ ಡೈನಮೊ ಅಥವಾ ಜನರೇಟರ್ ಅಳವಡಿಸಿ ವಿದ್ಯುತ್ ಪಡೆಯಬಹುದು ಎಂಬುದು  ವಿದ್ಯಾರ್ಥಿಗಳು ಈ ಪ್ರಯೋಗದಿಂದ ಕಂಡುಕೊಂಡ ಅಂಶ.ಸದ್ಯ ವಿದ್ಯಾರ್ಥಿ ತಂತ್ರಜ್ಞರು ಸಿದ್ಧಪಡಿಸಿರುವ ಪುಟ್ಟ ಗಾತ್ರದ `ಫ್ಲೈವ್ಹೀಲ್ ಎನರ್ಜಿ ಸ್ಟೋರೇಜ್  ಅಂಡ್ ರಿಟ್ರಿವಲ್(ಜನರೇಷನ್) ಸಿಸ್ಟಂ'ನಿಂದ 12 ವೋಲ್ಟ್ ವಿದ್ಯುತ್ ಪಡೆಯಬಹುದು. 10ರಿಂದ 12 `ಎಲ್‌ಇಡಿ'(ಲೈಟ್ ಎಮಿಟಿಂಗ್ ಡಯೋಡ್)  ದೀಪಗಳನ್ನು ಬೆಳಗಿಸಬಹುದು.ದೊಡ್ಡ ಪ್ರಮಾಣದಲ್ಲಿ...

ಇದೇ ಸೂತ್ರದಂತೆ `ಹೈಟೆಂಪರೇಚರ್ ಸೂಪರ್ ಕಂಡಂಕ್ಟಿಂಗ್ ಮ್ಯಾಗ್ನೆಟಿಕ್ ಬೇರಿಂಗ್' ಮತ್ತು ದೊಡ್ಡ ಕೊಠಡಿ ಗಾತ್ರದ `ವ್ಯಾಕ್ಯೂಮ್ ಚೇಂಬರ್' (ನಿರ್ವಾತ ಪ್ರದೇಶದ ಪೆಟ್ಟಿಗೆ),  ಅಲ್ಯುಮಿನಿಯಂ ಸರಳಿನ ಬದಲು `ಕಾಂಪೊಸಿಟ್ ಮೆಟಿರಿಯಲ್ಸ್' (ಕಾರ್ಬನ್ ಫೈಬರ್ ಸೇರಿದಂತೆ ವಿವಿಧ ಲೋಹಗಳು)  ಸರಳು ಬಳಸಿ ದೊಡ್ಡ ಗಾತ್ರದ `ಫ್ಲೈವ್ಹೀಲ್ ಎನರ್ಜಿ ಸ್ಟೋರೇಜ್  ಅಂಡ್ ರಿಟ್ರಿವಲ್(ಜನರೇಷನ್) ಸಿಸ್ಟಂ' ಸಿದ್ಧಪಡಿಸಿದರೆ 1 ಮೆಗಾವ್ಯಾಟ್‌ವರೆಗೂ ವಿದ್ಯುತ್ ಉತ್ಪಾದಿಸಬಹುದು ಎನ್ನುತ್ತಾರೆ ಗೋವರ್ದನ್.

ಸಿದ್ದಗಂಗಾ ಎಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಯು.ಎಸ್.ಮಲ್ಲಿಕಾರ್ಜುನ ಮತ್ತು ಶ್ರೀನಿವಾಸರಾವ್ ವಿದ್ಯಾರ್ಥಿ ತಂತ್ರಜ್ಞರ ಈ ಪ್ರಾಜೆಕ್ಟ್‌ಗೆ ಮಾರ್ಗದರ್ಶನ ಮಾಡಿದ್ದಾರೆ.`ಯಾವುದೇ ವಸ್ತುವನ್ನು ಶೋಧಿಸು, ಆದರೆ ನಿನ್ನಲ್ಲಿನ ಹೊಸತನದ ಬುದ್ಧಿಶಕ್ತಿಉಪಯೋಗಿಸಿ ತಯಾರಿಸಿದಾಗ ಮಾತ್ರವೇ ಅದಕ್ಕೆ ಮನ್ನಣೆ' ಎಂದು ಹೇಳಿದ್ದ ವಿಜ್ಞಾನ ಶಿಕ್ಷಕರ ಮಾತು ಈ ಪ್ರಾಜೆಕ್ಟ್ ತಯಾರಿಗೆ ಸಹಕಾರಿಯಾಯಿತು ಎಂದು ಹೇಳುತ್ತಲೇ ವಿದ್ಯಾರ್ಥಿ ಗುರುದೀಪ್, ಅರವಿಂದ್ ತಿವಾರಿ ಮತ್ತು  ಭಾರ್ಗವ್ `ಗುರುನಮನ' ಸಲ್ಲಿಸಿದ್ದಾರೆ.

ಪ್ರತಿಕ್ರಿಯಿಸಿ (+)