ವಿದ್ಯುತ್ ಸಮಸ್ಯೆಗೆ ಕೇಂದ್ರವೇ ಹೊಣೆ

7

ವಿದ್ಯುತ್ ಸಮಸ್ಯೆಗೆ ಕೇಂದ್ರವೇ ಹೊಣೆ

Published:
Updated:

ರಾಮನಗರ: ರಾಜ್ಯದಲ್ಲಿ ಎದುರಾಗಿರುವ ವಿದ್ಯುತ್ ಸಮಸ್ಯೆಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ಪದಾಧಿಕಾರಿಗಳು ಮತ್ತು ಮುಖಂಡರು ಮಂಗಳವಾರ ರಾಮನಗರದ ಮಿನಿವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದರು.

ರಾಜ್ಯದ ವಿದ್ಯುತ್ ಸಮಸ್ಯೆಗೆ ಕೇಂದ್ರ ಸರ್ಕಾರ ಸರಿಯಾಗಿ ಸ್ಪಂದಿಸದ ಕಾರಣ ರಾಜ್ಯದ ಜನತೆ ತೊಂದರೆ ಎದುರಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೇಂದ್ರದ ಯುಪಿಎ ಸರ್ಕಾರದ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಕೂಡಲೇ ರಾಜ್ಯದ ಸಮಸ್ಯೆ ಬಗೆಹರಿಸಲು ಮುಂದಾಗುವಂತೆ ಕೇಂದ್ರವನ್ನು ಒತ್ತಾಯಿಸಿದರು.

ರಾಜ್ಯಕ್ಕೆ ಅಗತ್ಯವಿರುವಷ್ಟು ವಿದ್ಯುತ್ ಅನ್ನು ಕೇಂದ್ರ ತನ್ನ ಗ್ರಿಡ್‌ನಿಂದ ರವಾನಿಸುತ್ತಿಲ್ಲ. ಅಲ್ಲದೆ ಕಲ್ಲಿದ್ದಲು ಪೂರೈಕೆಗೂ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು. ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ವಿದ್ಯುತ್ ಉತ್ಪಾದನಾ ಯೋಜನೆಗಳಿಗೆ ಧೀರ್ಘಕಾಲ ಕಲ್ಲಿದ್ದಲು ಪೂರೈಕೆಗೆ ಕೇಂದ್ರ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ನಿಲ್ಲಲಿ. ರಾಜ್ಯದಲ್ಲಿ ವಿರೋಧ ಪಕ್ಷಗಳ ರಾಜಕಾರಣಕ್ಕೆ ರಾಜ್ಯದ ಹಿತ ಬಲಿಯಾಗದಿರಲಿ ಎಂದು ಘೋಷಣೆಗಳನ್ನು ಅವರು ಕೂಗಿದರು.

ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ನಾಗರಾಜು, ಬಮೂಲ್ ನಿರ್ದೇಶಕ ಪಿ.ನಾಗರಾಜು, ನಗರಸಭೆ ಸದಸ್ಯ ನಾಗೇಶ್, ಮುಖಂಡರಾದ ಗಿರಿಗೌಡ, ರಾಜು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry