ವಿದ್ಯುತ್ ಸಮಸ್ಯೆ: ಸರ್ಕಾರವೇ ಹೊಣೆ

7

ವಿದ್ಯುತ್ ಸಮಸ್ಯೆ: ಸರ್ಕಾರವೇ ಹೊಣೆ

Published:
Updated:

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗಿರುವುದಕ್ಕೆ ರಾಜ್ಯ ಸರ್ಕಾರವೇ ಹೊಣೆ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದರಲ್ಲಿ ಅರ್ಥವಿಲ್ಲ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದರು.ಪಕ್ಷದ ಕಚೇರಿಯಲ್ಲಿ ಭಾನುವಾರ ನಡೆದ ಮಹಾತ್ಮ ಗಾಂಧಿ ಜಯಂತಿ ಕಾರ್ಯಕ್ರಮದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, `ಇಂಧನ ಇಲಾಖೆ ಮುನ್ನೆಚ್ಚರಿಕೆಯಿಂದ ಕಲ್ಲಿದ್ದಲು ದಾಸ್ತಾನು ಮಾಡದೇ ಇರುವುದೇ ಸಮಸ್ಯೆಗೆ ಕಾರಣ. ಆದರೆ, ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ~ ಎಂದರು.`ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗಿತ್ತು. ಆದರೆ, ನಮ್ಮ ಸರ್ಕಾರ ಮುಂಚಿತವಾಗಿಯೇ ಸಾಕಷ್ಟು ಕಲ್ಲಿದ್ದಲು ದಾಸ್ತಾನು ಮಾಡಿಕೊಂಡಿತ್ತು. ಆದ್ದರಿಂದ ಹೆಚ್ಚಿನ ಲೋಡ್ ಶೆಡ್ಡಿಂಗ್ ಜಾರಿಯಾಗಿರಲಿಲ್ಲ. ಈಗ ಲೋಡ್ ಶೆಡ್ಡಿಂಗ್ ತಡೆಯಲು ಹೊರರಾಜ್ಯಗಳಿಂದ ವಿದ್ಯುತ್ ಖರೀದಿಸಲು ನಿತ್ಯವೂ 12 ಕೋಟಿ ರೂಪಾಯಿ ವೆಚ್ಚ ಮಾಡಲು ಸರ್ಕಾರ ಮುಂದಾಗಿದೆ.

 

ಇದು ರಾಜ್ಯದ ಜನತೆಯ ಪಾಲಿಗೆ ದುಬಾರಿಯಾಗುತ್ತದೆ. ಸಮಸ್ಯೆಯೂ ಬಗೆಹರಿಯುವುದಿಲ್ಲ~ ಎಂದು ಹೇಳಿದರು. ಅದಕ್ಕೂ ಮುನ್ನ ಗಾಂಧೀಜಿ ಭಾವಚಿತ್ರಕ್ಕೆ ಗೌರವ ಸಲ್ಲಿಸಿ ಅವರು ಮಾತನಾಡಿದರು. ಪಕ್ಷದ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಎಂ.ಎಸ್.    ನಾರಾಯಣರಾವ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry