ಸೋಮವಾರ, ನವೆಂಬರ್ 18, 2019
26 °C

ವಿದ್ಯುತ್ ಸುರಕ್ಷತೆಗೆ `ಅರ್ಥಿಂಗ್'

Published:
Updated:

ಅಂಗಡಿ, ಮನೆ, ಕೈಗಾರಿಕೆ, ವಿವಿಧ ಉದ್ಯಮ ಸಂಸ್ಥೆಗಳಲ್ಲಿ ವಿದ್ಯುತ್ ಷಾರ್ಟ್ ಸರ್ಕಿಟ್‌ನಿಂದಾಗಿ ಬೆಂಕಿ ಅವಘಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ವಿದ್ಯುತ್ ಉಪಕರಣಗಳಲ್ಲಿ ಹಠಾತ್ ವಿದ್ಯುತ್ ಹರಿದು ಮುಟ್ಟಿದವರಿಗೆ ಷಾಕ್ ಹೊಡೆಯುವುದು(ವಿದ್ಯುದಾಘಾತ), ವಿದ್ಯುತ್ ಹರಿವಿನಲ್ಲಿ ದಿಢೀರ್ ವ್ಯತ್ಯಯವಾಗಿದ್ದಕ್ಕೋ, ಕಳಪೆ ಪರಿಕರಗಳನ್ನು ಅಳವಡಿಸಿದ್ದಕ್ಕೋ ಕಿಡಿ ಹೊತ್ತಿಕೊಂಡು ಬೆಂಕಿ ಅವಘಡವಾಗುವ ಪ್ರಸಂಗಗಳನ್ನೂ ಅಲ್ಲಲ್ಲಿ ನೋಡುತ್ತಿರುತ್ತೇವೆ.ಇಂಥ ಅವಘಡಗಳು, ವಿದ್ಯುದಾಘಾತಗಳು ಸಂಭವಿಸದಂತೆ ತಡೆಯಲು ಮೊದಲನೆಯದಾಗಿ ವಿದ್ಯುತ್ ಸರಬರಾಜು ವ್ಯವಸ್ಥೆ ಪಡೆದುಕೊಳ್ಳುವಾಗಲೇ ಸಮರ್ಪಕ ರೀತಿಯಲ್ಲಿ `ಅರ್ಥಿಂಗ್' ವ್ಯವಸ್ಥೆ ಮಾಡಿಸಬೇಕು. ಇದುವೇ ಸುರಕ್ಷಿತ ವಿದ್ಯುತ್ ಬಳಕೆಯ ಮೊದಲ ಹೆಜ್ಜೆಯಾಗಿದೆ.ಏನಿದು ಅರ್ಥಿಂಗ್?

`ಅರ್ಥಿಂಗ್' ಎಂದರೆ ವಿದ್ಯುತ್ ಕಂಬದಿಂದ ಮನೆ, ಅಂಗಡಿ, ಕೈಗಾರಿಕೆ ಮೊದಲಾದವಕ್ಕೆ ವಿದ್ಯುತ್ ತಂತಿ ಎಳೆದು ಸಂರ್ಪಕ ಪಡೆದುಕೊಳ್ಳುವಾಗ ವಿದ್ಯುತ್ ಮೀಟರ್ ಬೋರ್ಡ್ ಬಳಿ ಲೋಹದಿಂದ ಭೂಮಿಗೆ ಸಂಪರ್ಕಿಸುವ ಸುರಕ್ಷತಾ ವ್ಯವಸ್ಥೆಯಾಗಿದೆ. ಇದು ಸಾಮಾನ್ಯ ವಿದ್ಯುಚ್ಛಕ್ತಿಯನ್ನು ಸುರಕ್ಷಾ ವಿದ್ಯುಚ್ಛಕ್ತಿಯಾಗಿ ಪರಿವರ್ತಿಸುವ ಒಂದು ವ್ಯವಸ್ಥೆ.ಆಕಸ್ಮಿಕವಾಗಿ ಮನುಷ್ಯನ ಶರೀರ ವಿದ್ಯುತ್ ಸಂಪರ್ಕಕ್ಕೆ ಒಳಗಾದಾಗ ಅದರಿಂದ ಆಘಾತ (ಶಾಕ್) ಆಗದಂತೆ, ವಿದ್ಯುತ್ ಭೂಮಿಗೆ ಹರಿದುಹೋಗುವಂತೆ ರಕ್ಷಿಸಬಹುದಾದ ವ್ಯವಸ್ಥೆ ಇದಾಗಿದೆ. ಎಲ್ಲ ಲೋಹ, ಯಂತ್ರ, ಸ್ಟಾರ್ಟರ್, ವೈರಿಂಗ್‌ನಲ್ಲಿಯೂ ಸದಾ ವಿದ್ಯುತ್ ಹರಿವು ಇರುವುದಿಲ್ಲ. ಆದರೆ ಲೋಹದ ತಂತಿಯ ಮೇಲಿರುವ ರಕ್ಷಾಕವಚ ಹಾಳಾಗಿದ್ದರೆ ಆ ತಂತಿಯು ಯಂತ್ರದ ಭಾಗಕ್ಕೆ ತಗುಲಿ ಶಾಕ್ ಹೊಡೆಯುತ್ತದೆ. ಇದನ್ನು ತಡೆಗಟ್ಟಲು ಅರ್ಥಿಂಗ್ ವ್ಯವಸ್ಥೆ ಸಹಾಯಕ. ಒಳ್ಳೆಯ ಅರ್ಥಿಂಗ್ ವ್ಯವಸ್ಥೆ ಇದ್ದರೆ ಅತಿ ಕಡಿಮೆ ಪ್ರತಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಇದರಿಂದ ವಿದ್ಯುತ್ ಸರಾಗವಾಗಿ ಹರಿಯಲು ಅನುಕೂಲವಾಗುತ್ತದೆ. ನಾವು ಎಷ್ಟು ಆಳವಾಗಿ ಅರ್ಥಿಂಗ್ ಪೈಪ್/ಪ್ಲೇಟನ್ನು ಇಳಿಸಿದ್ದೇವೆ ಎಂಬುದರ ಮೇಲೆ ಪ್ರತಿರೋಧಕ ವಿದ್ಯುತ್ ಶಕ್ತಿ ಅವಲಂಬಿಸಿರುತ್ತದೆ. ಇದರಲ್ಲಿ ಎರಡು ವಿಧದ ಅರ್ಥಿಂಗ್ ವ್ಯವಸ್ಥೆಗಳಿವೆ.ಪೈಪ್ ಅರ್ಥಿಂಗ್

ಈ ವಿಧಾನದಲ್ಲಿ `1.5' ಅಂಗುಲ ವ್ಯಾಸ ಮತ್ತು `6.5' ಅಡಿ ಉದ್ದದ ಜಿ.ಐ ಕಬ್ಬಿಣದ ಕೊಳವೆಯನ್ನು(ಈ ಕೊಳವೆಯ ಮೇಲಿನ ಭಾಗದಲ್ಲಿ ಅರ್ಧ ಅಂಗುಲ ಅಳತೆಯ ರಂಧ್ರಗಳನ್ನು ಕೊರೆದಿರಬೇಕು) ಲಂಬವಾಗಿ ತೇವಾಂಶ ಪ್ರದೇಶದಲ್ಲಿ ಹುಗಿಯಬೇಕು. ಈ ಕೊಳವೆ ಅಳವಡಿಸಲು ಕನಿಷ್ಠ `6' ಅಡಿಯಷ್ಟಾದರೂ ಆಳವಾದ ತಗ್ಗು ತೆಗೆದಿರಬೇಕು. ಈ ಕೊಳವೆಯ ತಳಭಾಗವನ್ನು ಸ್ವಲ್ಪ ಓರೆಯಾಗಿ ಬಾಗಿಸಿರಬೇಕು. ಇದರಿಂದ ಕೊಳವೆಯು ನೆಲದಲ್ಲಿ ಭದ್ರವಾಗಿ ನೆಲೆಯೂರುತ್ತದೆ.ಈ ಕೊಳವೆಗೆ ಮತ್ತೊಂದು ಮುಕ್ಕಾಲು ಅಂಗುಲ ವ್ಯಾಸದ ಕೊಳವೆಯನ್ನು (ರೆಡ್ಯೂಸರ್ ಕಾಲರ್) ತೂರಿಸಬೇಕು. ನಂತರ ಉದ್ದವಾದ ಜಿ.ಐ ತಂತಿಯನ್ನು (ವಾಹಕ) ನೆಲದಿಂದ ಕೊಳವೆ ಮೂಲಕವೇ ಹಾಯಿಸಿಕೊಂಡು ಮೇಲಕ್ಕೆ ತರಬೇಕು. ಬೇಸಿಗೆಯಲ್ಲಿ ಆ ಕೊಳವೆಗೆ ನೀರು ಹಾಕಿ ತೇವಾಂಶವನ್ನು ಕಾಪಾಡಿಕೊಳ್ಳಬೇಕು.ಅರ್ಥಿಂಗ್‌ನ ಕೊಳವೆ ಅಳವಡಿಸಲು ತೋಡಿದ ತಗ್ಗಿನಲ್ಲಿ ಆ ಕೊಳವೆಯ ಸುತ್ತಲೂ ತಲಾ ಅರ್ಧ ಅಡಿಯಷ್ಟು ಇದ್ದಿಲು ಪುಡಿ, ಉಪ್ಪು, ಉಸುಕು(ಮರಳು) ಹಾಕಬೇಕು. ಹೀಗೆ ಮಾಡುವುದರಿಂದ ಕೊಳವೆ ಪಕ್ಕದಲ್ಲಿರುವ ತೇವಾಂಶವನ್ನು ಹಿಡಿದಿಡಲು ಸಹಾಯಕವಾಗುತ್ತದೆ.ಬೇಸಿಗೆಯಲ್ಲಿ ಆಗಾಗ್ಗೆ ನೀರು ಹಾಕುವ ಅಭ್ಯಾಸವಿರಬೇಕು. ಇದರಿಂದ ವಿದ್ಯುತ್ ಪ್ರತಿರೋಧಕ ಕಡಿಮೆಯಾಗುತ್ತದೆ. ಕೊಳವೆ ಮುಖಾಂತರ ಮೇಲಕ್ಕೆ ತಂದ ಅರ್ಥಿಂಗ್‌ನ ತಂತಿಯನ್ನು ಪ್ರತ್ಯೇಕ ಪ್ರತ್ಯೇಕವಾಗಿ ವಿದ್ಯುತ್ ಉಪಕರಣಗಳ ಸಾಕೆಟ್‌ಗಳಿಗೆ ಸಂಪರ್ಕಿಸುವಂತೆ ತಂತಿಯ ಜಾಲದ ವ್ಯವಸ್ಥೆ ಮಾಡಬೇಕು.ಪ್ಲೇಟ್ ಅರ್ಥಿಂಗ್

ಈ ವ್ಯವಸ್ಥೆಯಲ್ಲಿ ಜಿ.ಐ ಪ್ಲೇಟ್ ಅಥವಾ ತಾಮ್ರದ ತಟ್ಟೆಯನ್ನು ಬಳಸಲಾಗುತ್ತದೆ. ಈ ವಿಧಾನವನ್ನು ಹೆಚ್ಚು ಕೈಗಾರಿಕೋದ್ಯಮದಲ್ಲಿ ಉಪಯೋಗಿಸುತ್ತಾರೆ. ಜಿ.ಐ ಪ್ಲೇಟ್ ಆಗಿದ್ದರೆ ಅದರ ಅಳತೆ 2 ಅಡಿ ಅಗಲ-ಉದ್ದ ಮತ್ತು 4 ಅಂಗುಲ ದಪ್ಪ ಇರಬೇಕು. ತಾಮ್ರದ ಪ್ಲೇಟ್ ಆದರೆ 2 ಅಡಿ ಅಗಲ-ಉದ್ದ ಮತ್ತು 1/8 ಅಂಗುಲ ದಪ್ಪ ಇರಬೇಕು. ಮತ್ತು ಆಯಾ ಪ್ಲೇಟ್‌ಗೆ ಅದೇ ಬಗೆಯ ನಟ್ ಮತ್ತು ಬೋಲ್ಟ್‌ಗಳನ್ನೇ ಬಳಸಬೇಕು.ಈ ಪ್ಲೇಟನ್ನು `6' ಅಡಿ ಆಳದಲ್ಲಿ ಲಂಬವಾಗಿರಿಸಿ ಅದರ ಸುತ್ತಲೂ 6 ಇಂಚು ದಪ್ಪವಾಗಿ ಇದ್ದಿಲು ಪುಡಿ, ಉಪ್ಪು, ಉಸುಕು(ಮರಳು) ಹಾಕಬೇಕು. ಬೋಲ್ಟ್‌ಗೆ 12.7 ಮಿ.ಮೀ. ವ್ಯಾಸದ ಜಿ.ಐ ಅಥವಾ ತಾಮ್ರದ ಕೊಳವೆಯಿಂದ ಅರ್ಥಿಂಗ್ ವೈರ್(ವಾಹಕ) ತರಲು ಮತ್ತೊಂದು ಬೋಲ್ಟ್‌ನಿಂದ 19 ಮಿ.ಮೀ. ವ್ಯಾಸದ ಕೊಳವೆಯನ್ನು ಅಲ್ಲಿ ಹುಗಿಯಲಾಗುತ್ತದೆ. ಇದರಲ್ಲಿ ತೇವಾಂಶದಿಂದಿರಲು ನೀರು ಹಾಕುತ್ತಾರೆ. ಇದರಿಂದ ದೂಳಿನಿಂದಲೂ ರಕ್ಷಿಸಲ್ಪಡುತ್ತದೆ.ದೊಡ್ಡ ಫ್ಯಾಕ್ಟರಿಗಳಲ್ಲಿ ಎರಡು ರೀತಿಯ ಅರ್ಥಿಂಗ್(ಡಬಲ್ ಅರ್ಥಿಂಗ್) ಮಾಡಬಹುದು. ವಿದ್ಯುತ್ ಉಪಕರಣಗಳಿಗೆ(ಲೋಡ್) ಸಾಮಾನ್ಯ ರೀತಿಯ ವಿದ್ಯುತ್‌ಗಳಿಗೆ ವೊಲ್ಟೇಜ್‌ಗಳಿಗೆ ತಕ್ಕಂತೆ ಪ್ರತ್ಯೇಕವಾಗಿ ಕೊಡಬಹುದು. ಇದರಿಂದ ಎಲ್ಲ ಉಪಕರಣಗಳೂ ದೀರ್ಘ ಕಾಲ ಬಾಳಿಕೆ ಬರುತ್ತವೆ ಮತ್ತು ವಿದ್ಯುತ್ ಆಘಾತ ತೀವ್ರತೆ ತಪ್ಪಿಸಿಕೊಳ್ಳಬಹುದು. 

ಪ್ರತಿಕ್ರಿಯಿಸಿ (+)