ಭಾನುವಾರ, ಏಪ್ರಿಲ್ 11, 2021
29 °C

ವಿದ್ಯುತ್ ಸ್ಪರ್ಶದಿಂದ ಅಕ್ಕ, ತಮ್ಮ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ: ವಿದ್ಯುತ್ ಸ್ಪರ್ಶದಿಂದ ಅಕ್ಕ ಮತ್ತು ತಮ್ಮ ಮೃತಪಟ್ಟ ಘಟನೆ ಇಲ್ಲಿನ ಭೀಮನಗರದಲ್ಲಿ ಬುಧವಾರ ನಡೆದಿದೆ. ಮನೆಯಲ್ಲಿನ ವಿದ್ಯುತ್ ತಂತಿಯೊಂದು ಬಟ್ಟೆ ಹಾಕುವ ತಂತಿಗೆ ತಾಗಿಕೊಂಡಿದ್ದರಿಂದ ಅದರಲ್ಲಿ ವಿದ್ಯುತ್ ಹರಿದು ಈ ದುರ್ಘಟನೆ ನಡೆದಿದೆ.ರೋಹಿಣಿ ಗಾಯಕವಾಡ (23) ಮತ್ತು ಹರ್ಷವರ್ಧನ ಗಾಯಕವಾಡ (20) ಎನ್ನುವವರೇ ಮೃತಪಟ್ಟವರು. ರೋಹಿಣಿ ಬಿ.ಇಡಿ ಮಾಡಿದ್ದರೆ ಹರ್ಷವರ್ಧನ ಪದವಿ ತರಗತಿಯಲ್ಲಿ ಓದುತ್ತಿದ್ದ. ಯುವತಿಯು ತಂತಿ ಮೇಲೆ ಒಣಗಲು ಹಾಕಿದ್ದ ಬಟ್ಟೆಗಳನ್ನು ತೆಗೆಯುವಾಗ ಆಕೆಗೆ ವಿದ್ಯುತ್ ಸ್ಪರ್ಶವಾಯಿತು. ಹೀಗಾಗಿ ಆಕೆ ಬಿಡಿಸಿಕೊಳ್ಳಲಾಗದೆ ಒದ್ದಾಡಿದ್ದಾಗಿ ತಿಳಿದುಬಂದಿದೆ.ಅದನ್ನು ನೋಡಿ ಅಲ್ಲೇ ಊಟಕ್ಕೆ ಕುಳಿತಿದ್ದ ಹರ್ಷವರ್ಧನ ತಕ್ಷಣ ಎದ್ದು ಆಕೆಯ ಕೈ ಹಿಡಿದು ಎಳೆದ. ಹೀಗಾಗಿ ಆತನ ಮೈಯಲ್ಲೂ ವಿದ್ಯುತ್ ಪ್ರವಹಿಸಿದೆ. ಇದರಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟರು. ಇವರಿಬ್ಬರ ಹೊರತು ಮನೆಯಲ್ಲಿ ಯಾರೂ ಇರಲಿಲ್ಲ. ತಾಯಿ ಕೆಲ ವರ್ಷಗಳ ಹಿಂದೆ ಮೃತಪಟ್ಟರೆ ತಂದೆ ಅಂಗದರಾವ ಗಾಯಕವಾಡ ಮುಂಬೈನಲ್ಲಿ ಇರುತ್ತಾರೆ ಎನ್ನಲಾಗಿದೆ.ಘಟನೆ ನಡೆದ ತಕ್ಷಣ ಓಣಿಯವರು ಇಬ್ಬರನ್ನೂ ತಕ್ಷಣ ಆಸ್ಪತ್ರೆಗೆ ತೆಗೆದುಕೊಂಡು ಹೋದರು. ಆದರೆ ಏನೂ ಪ್ರಯೋಜನ ಆಗಿಲ್ಲ. ವಿಷಯ ತಿಳಿದು ಸಂಬಂಧಿಕರು ಮತ್ತು ಸ್ಥಳೀಯರು ಆಸ್ಪತ್ರೆಯ ಹತ್ತಿರ ನೆರೆದಿದ್ದರು.

`ಮೊನ್ನೇ ಅಕ್ಕಗ ರಾಕಿ ಕಟ್ಟ್ದ್ದಿದನಲ್ಲೇ ಯವ್ವಾ.ಅದಕ್ಕೇ ಆಕಿಗಿ ಉಳಿಸಲಕ್ಕ ಹೋದನಲ್ಲೇ ನಮ್ಮ ಹರ್ಷ~ `ಅಕ್ಕ, ತಮ್ಮ ಒಮ್ಮೇ ಹೋದರಲ್ಲೇ, ಅವರದ್ದು ಎಂಥ ನಸೀಬೋ ಯಪ್ಪಾ~ ಎಂದು ಮಹಿಳೆಯರು ಆಸ್ಪತ್ರೆ ಎದುರು ರೋದಿಸುತ್ತಿರುವುದು ಕಂಡು ಬಂತು. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.