ಬುಧವಾರ, ಅಕ್ಟೋಬರ್ 16, 2019
21 °C

ವಿದ್ಯುತ್ ಸ್ಪರ್ಶ: ಕಾಡಾನೆ ಬಲಿ

Published:
Updated:

ಎಚ್.ಡಿ.ಕೋಟೆ: ತಾಲ್ಲೂಕಿನ ಎಲೆಹುಂಡಿ ಗ್ರಾಮದ ಚಿಕ್ಕದೇವಮ್ಮನವರ ಜಮೀನಿನಲ್ಲಿ ವಿದ್ಯುತ್ ಹರಿಯುತ್ತಿದ್ದ ತಂತಿ ಬೇಲಿಗೆ ತಗುಲಿ ಗಂಡು ಕಾಡಾನೆ (30) ಸೋಮವಾರ ಬೆಳಗಿನ ಜಾವ ಮೃತಪಟ್ಟಿದೆ.15 ದಿನಗಳಿಂದ ಆನೆಗಳ ಹಿಂಡು ಅಣ್ಣೂರು, ಭೀಮನಹಳ್ಳಿ, ಕೆ.ಯಡತೊರೆ, ಹೊಸಹಳ್ಳಿ, ನಂಜನಾಯಕನಹಳ್ಳಿ, ರಾಜೇಗೌಡನಹುಂಡಿ ಸೇರಿದಂತೆ ಹಲವು ಗ್ರಾಮಗಳ ಜಮೀನುಗಳಲ್ಲಿ ಪ್ರತಿ ನಿತ್ಯ ಫಸಲು ನಾಶಪಡಿಸುತ್ತಿತ್ತು.ಭಾನುವಾರ ಕಾಡಿನಿಂದ ಆಹಾರ ಅರಸಿಕೊಂಡು ನಾಡಿನತ್ತ ಬಂದ ಎಂಟಕ್ಕೂ ಹೆಚ್ಚು ಕಾಡಾನೆಗಳು ಬೆಳೆಯನ್ನು ತಿಂದು, ತುಳಿದು ನಾಶಪಡಿಸಿವೆ. ಚಿಕ್ಕದೇವಮ್ಮನವರ ಜಮೀನಿನಲ್ಲಿದ್ದ ರಾಗಿ ಫಲಸಲನ್ನು ತಿಂದು ಹೋಗುವ ಸಂದರ್ಭದಲ್ಲಿ ಈ ಕಾಡಾನೆ ವಿದ್ಯುತ್ ಹರಿಯುತ್ತಿದ್ದ ತಂತಿ ಬೇಲಿಗೆ ಸಿಲುಕಿತು. ಉಳಿದ ಆನೆಗಳು ಕಾಡಿನತ್ತ ಓಡಿದವು ಎನ್ನಲಾಗಿದೆ.ಸ್ಥಳಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ್‌ಮಿಶ್ರ ಮತ್ತು ಸಿಬ್ಬಂದಿ ಭೇಟಿ ನೀಡಿದ್ದರು. ನಾಗರಹೊಳೆ ವನ್ಯಜೀವಿ ವಲಯದ ಪಶು ವೈದ್ಯ ಉಮಾಶಂಕರ್ ಮರಣೋತ್ತರ ಪರೀಕ್ಷೆ ನಡೆಸಿದರು. ಚಿಕ್ಕದೇವಮ್ಮನವರ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು ಎನ್ನಲಾಗಿದೆ.

Post Comments (+)