ವಿದ್ಯುತ್ ಸ್ಪರ್ಶ: ಮತ್ತೊಂದು ಮರಿಯಾನೆ ಬಲಿ

7

ವಿದ್ಯುತ್ ಸ್ಪರ್ಶ: ಮತ್ತೊಂದು ಮರಿಯಾನೆ ಬಲಿ

Published:
Updated:

ಹಾಸನ: ಜಿಲ್ಲೆಯ ಆಲೂರು ತಾಲ್ಲೂಕಿನಲ್ಲಿ ಶುಕ್ರವಾರ ಸುಮಾರು 6 ರಿಂದ 8 ತಿಂಗಳ ಮತ್ತೊಂದು ಮರಿ ಆನೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದೆ. ನವಿಲಹಳ್ಳಿ ಬಳ್ಳಾರಕೊಪ್ಪಲಿನಲ್ಲಿ ಗುರುವಾರ ಮಧ್ಯರಾತ್ರಿಯ ಬಳಿಕ ಈ  ಘಟನೆ ನಡೆದಿದೆ.ಗುರುವಾರ ಮೃತಪಟ್ಟ ಎರಡು ಮರಿ ಆನೆಗಳ ಶವವನ್ನು ಎತ್ತುವ ಮೊದಲೇ ಮತ್ತೊಂದು ಆನೆ ಮರಿ  ಸಾವನ್ನಪ್ಪಿರುವ ಸುದ್ದಿ ನಾಗರಿಕರಲ್ಲಿ ತೀವ್ರ ನೋವು ಉಂಟುಮಾಡಿದೆ. ಅಲ್ಲದೆ ಆನೆಗಳ ಹಿಂಡೊಂದು ಆಲೂರು ಸುತ್ತಮುತ್ತ ಓಡಾಡುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿರುವುದರಿಂದ ಆಲೂರು- ಮಗ್ಗೆ ರಸ್ತೆಯಲ್ಲಿ ಓಡಾಡಲೂ ಈಗ ಗ್ರಾಮಸ್ಥರು ಹೆದರುತ್ತಿದ್ದಾರೆ.ಶುಕ್ರವಾರ ತಜ್ಞ ವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಆನೆಮರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು, ಎರಡು ದಿನದ ಅಂತರದಲ್ಲಿ ಮಡಿದ ಮೂರು ಆನೆ ಮರಿಗಳು ವಿದ್ಯುತ್ ಸ್ಪರ್ಶದಿಂದ ಸತ್ತಿರುವುದನ್ನು ಖಚಿತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ತಾಯಿ ಆನೆ ಬಳಿಯಲ್ಲಿ ಇಲ್ಲದ ಕಾರಣ ಶುಕ್ರವಾರ ಸತ್ತ ಆನೆ ಮರಿಯನ್ನು ಮೇಲೆತ್ತಲು ಯಾವುದೇ ಸಮಸ್ಯೆ ಆಗಲಿಲ್ಲ. ಆದರೆ ದೊಡ್ಡ ಹಿಂಡು ಸಮೀಪದಲ್ಲೇ ಇರುವುದನ್ನು ಮನಗಂಡ ಅಧಿಕಾರಿಗಳು ಅದು ಯಾವುದೇ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸುವ ಸಾಧ್ಯತೆ ಇದ್ದುದರಿಂದ ಎಚ್ಚರಿಕೆಯಿಂದಲೇ ಕಾರ್ಯ ನಿರ್ವಹಿಸಿದರು.ಕಾಡಿಗೆ ಮರಳಿದ ತಾಯಿ: ಸತ್ತ ಆನೆ ಮರಿಗಳ ಶವವನ್ನು ಮುಟ್ಟಲೂ ಬಿಡದೆ ಗುರುವಾರ ದಿನವಿಡೀ ಹೋರಾಟ ನಡೆಸಿದ್ದ ತಾಯಿ ಆನೆ,  ರಾತ್ರಿ ಮರಿಗಳ ಸಮೀಪದಲ್ಲೇ ಇದ್ದು, ಶುಕ್ರವಾರ ನಸುಕಿನಲ್ಲಿ ಕಾಡಿಗೆ ಮರಳಿತು. ಬೆಳಿಗ್ಗೆ ಸ್ಥಳಕ್ಕೆ ತೆರಳಿದ  ಅಧಿಕಾರಿಗಳು ಹಾಗೂ ತಜ್ಞರು ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಹೊಲದ ಸಮೀಪದಲ್ಲೇ  ಕಟ್ಟಿಗೆಗಳನ್ನು ಸೇರಿಸಿ ಕಳೇಬರವನ್ನು ಸುಟ್ಟು ಹಾಕಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry