ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ವಾಂಸರು ಗೌಣ; ಸೊರಗಿದ ಜಾನಪದ

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಹಿತಿ ಅರವಿಂದ ಮಾಲಗತ್ತಿ ಪ್ರತಿಪಾದನೆ
Last Updated 28 ಏಪ್ರಿಲ್ 2015, 6:41 IST
ಅಕ್ಷರ ಗಾತ್ರ

ಮೈಸೂರು: ‘ಕೃತಿಗಳು ಕೇವಲ ಜನಮುಖಿಯಾಗಿದ್ದರೆ ಸಾಲದು. ಸಮಾಜಕ್ಕೆ ಏನಾದರೂ ಕೊಡುಗೆ ನೀಡುವಂತಿರಬೇಕು. ಸಮಾಜದ ಬದಲಾವಣೆಗೆ ಮಹತ್ವದ ಸಲಹೆ ಕೊಡುವಂತಿರಬೇಕು. ಅಕಸ್ಮಾತ್‌ ಇದರಲ್ಲಿ ವಿಫಲವಾದರೆ ಆ ಕೃತಿ ವ್ಯರ್ಥ’ ಎಂದು ಸಾಹಿತಿ ಡಾ.ಅರವಿಂದ ಮಾಲಗತ್ತಿ ಪ್ರತಿಪಾದಿಸಿದರು.

ಎಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಡಾ.ವಿಜಯಲಕ್ಷ್ಮಿ ಮನಾಪುರ ಅವರ ‘ಕನ್ನಡ ಜನಪದ ಸಾಹಿತ್ಯ: ಬಂಧ–ಸಂಬಂಧ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

‘ಸಂಶೋಧನೆಯಲ್ಲಿ ಎರಡು ವಿಧಗಳಿವೆ. ಸಂಶೋಧನೆಗಾಗಿ ಸಂಶೋಧನೆ ಹಾಗೂ ಸಮಾಜಕ್ಕಾಗಿ ಸಂಶೋಧನೆ ಎಂದು ವಿಂಗಡಿಸಬಹುದು. ಕೆಲ ಮಹಾಪ್ರಬಂಧಗಳ ಶೀರ್ಷಿಕೆ ಗಂಭೀರವಾಗಿರುತ್ತವೆ. ಆದರೆ, ಒಳಗಡೆ ಪ್ರವೇಶಿಸಿದರೆ ಬರೀ ಗೌಣ. ಮನಸ್ಸನ್ನು ಪಲ್ಲಟಗೊಳಿಸುವ ಗುಣವಿದ್ದರೆ ಮಾತ್ರ ಆ ಕೃತಿ ಮೌಲಿಕವಾಗಿರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಬಂಜೆ ಹಸುವಿದ್ದಂತೆ: ‘ಮನಾಪುರ ಬರೆದಿರುವ ಕೃತಿ ಉತ್ಕೃಷ್ಟ ಮಹಾಪ್ರಬಂಧ. ಇಂಥ ಕೃತಿಗಳು ಗ್ರಂಥಾಲಯದಲ್ಲಿ ಇಲ್ಲವಾದರೆ ಅಂಥ ಗ್ರಂಥಾಲಯ ಬಂಜೆ ಹಸುವಿದ್ದಂತೆ. ಆದಷ್ಟು ಬೇಗ ಒಳ್ಳೆಯ ಪುಸ್ತಕಗಳನ್ನು ಖರೀದಿಸಲು ಸರ್ಕಾರ  ಮುಂದಾಗಬೇಕು. ದುರದೃಷ್ಟವೆಂದರೆ ಪುಸ್ತಕ ಖರೀದಿಯೇ ನಿಂತುಹೋಗಿದೆ. ಗ್ರಂಥಾಲಯ ಹೆಸರಿನಲ್ಲಿ ಹಣ ಸಂಗ್ರಹಿಸಿ ಬೇರೆ ಕೆಲಸಕ್ಕೆ ವಿನಿಯೋಗಿಸಲಾಗುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಜಾನಪದದ ಆರಂಭ ಘಟ್ಟದಲ್ಲಿ ಅದ್ಭುತ ಸಂಗ್ರಹಕಾರರು ಇದ್ದರು. ಆದರೆ, ಈಗ ಕ್ಷೇತ್ರ ತಜ್ಞರು ಹಾಗೂ ಗ್ರಂಥಾಲಯ ವಿದ್ವಾಂಸರು ಗೌಣವಾಗಿದ್ದಾರೆ. ಹಾಗಾಗಿ ಜಾನಪದ ಕ್ಷೇತ್ರ ಸೊರಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಈ ನಿಟ್ಟಿನಲ್ಲಿ ಜನಜೀವನಮುಖಿ ಸಂಘಟನೆಯ ಅಗತ್ಯವಿದೆ. ಅದಕ್ಕೆ ಮನಾಪುರ ಅವರ ಕೃತಿಯೇ ಮಾರ್ಗಸೂಚಿ’ ಎಂದು ಸಲಹೆ ನೀಡಿದರು.
ಆಧುನಿಕತೆಯಿಂದ ಒಡಕು: ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ ಮಾತನಾಡಿ, ಈಗ ಜಾನಪದ ವಿದ್ವಾಂಸರು ತುಂಬಾ ವಿರಳ. ಆದರೆ, ‘ಜಾನಪದ ವಿದ್ವಾಂಸರು’ ಎಂಬ ಹಣೆಪಟ್ಟಿ ಹಾಕಿಕೊಂಡು ತಿರುಗಾಡುವವರ ಸಂಖ್ಯೆ ಹೆಚ್ಚಾಗಿದೆ’ ಎಂದರು.

‘ಆಧುನಿಕತೆಯಿಂದಾಗಿ ಸಮಾಜದಲ್ಲಿ ಒಡಕು ಶುರುವಾಗಿದೆ. ಒಟ್ಟಿಗೆ ಇದ್ದರೂ ಪರಕೀಯವಾಗಿ ಬದುಕಬೇಕಾದ ಪರಿಸ್ಥಿತಿ ನೆಲೆಸಿದೆ. ಸ್ವಾಸ್ಥ್ಯ ಬದುಕಿಗೆ ಮನಾಪುರ ಬರೆದಿರುವ ಕೃತಿಯೇ ಕೈಗನ್ನಡಿ. ಬಾಂಧವ್ಯದ ಹಲವು ಮುಖಗಳನ್ನು ಇದು ಅನಾವರಣಗೊಳಿಸಿದೆ’ ಎಂದು ವಿಶ್ಲೇಷಿಸಿದರು.

ಜಾನಪದ ವಿದ್ವಾಂಸ ಡಾ.ಹಿ.ಶಿ. ರಾಮಚಂದ್ರೇಗೌಡ ಅವರು, ‘ಹೆಣ್ಣು ಕ್ರಿಯಾಶೀಲವಾಗಿದ್ದಷ್ಟು ಸಮಾಜ ಲವಲವಿಕೆಯಿಂದ ಕೂಡಿರುತ್ತದೆ. ಆದರೆ, ಗಂಡು ದಬ್ಬಾಳಿಕೆಯ ಸಂಕೇತ’  ಎಂದು ವ್ಯಾಖ್ಯಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT