ಸೋಮವಾರ, ಅಕ್ಟೋಬರ್ 14, 2019
22 °C

ವಿಧವೆಯಂತೆ ನಡೆಯಲ್ಲ: ಮುತ್ತೈದೆಯರ ಪ್ರತಿಜ್ಞೆ

Published:
Updated:

ಮಂಗಳೂರು: `ಪತಿ ತೀರಿಹೋದರೆ ತಾಳಿ ತೆಗೆಯುವುದಿಲ್ಲ, ಬಳೆ ಒಡೆಯುವುದಿಲ್ಲ, ಹೂ ಮುಡಿಯದೆ ಇರುವುದಿಲ್ಲ~ ಎಂದು ಎರಡೂವರೆ ಸಾವಿರಕ್ಕೂ ಅಧಿಕ ಮುತ್ತೈದೆಯರು ಗೋಕರ್ಣನಾಥ ದೇವಸ್ಥಾನದಲ್ಲಿ ಭಾನುವಾರ ಪ್ರತಿಜ್ಞೆ ಸ್ವೀಕರಿಸಿದರು. ಸಾಮಾಜಿಕ ಪರಿವರ್ತನಕಾರ ನಾರಾಯಣ ಗುರು ಅವರು ಕುದ್ರೋಳಿ ದೇವಸ್ಥಾನದಲ್ಲಿ ದೇವರ ಮೂರ್ತಿ ಸ್ಥಾಪಿಸಿದ ಶತಮಾನೋತ್ಸವ ಆಚರಣೆ ಪ್ರಯುಕ್ತ ಬೃಹತ್ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ನಡೆಯಿತು.

 ಈ ವರ್ಷದುದ್ದಕ್ಕೂ ಇಂತಹ ಹಲವಾರು ಕಾರ್ಯಕ್ರಮಗಳು ದೇವಸ್ಥಾನದಲ್ಲಿ ನಡೆಯಲಿದೆ.ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ನೇತೃತ್ವದಲ್ಲಿ 2ನೇ ಬಾರಿಗೆ ಇಂತಹ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮ ನಡೆಯಿತು.  ಕಳೆದ ದಸರಾ ಸಂದರ್ಭದಲ್ಲಿ ವಿಧವೆಯರಿಂದಲೇ ಚಂಡಿಕಾಯಾಗ ಮಾಡಿಸಿ, ಪೂಜೆ ನೆರವೇರಿಸಿದ ಅವರು ಬಳಿಕ ಸಾಂಕೇತಿಕರವಾಗಿ ತಮ್ಮ ಪತ್ನಿ ಸಹಿತ ಕೆಲವು ಮುತ್ತೈದೆಯರಿಂದ ಗಂಡ ವಿಧಿವಶವಾದ ಬಳಿಕ ಸುಮಂಗಲಿಗೆ ಇರುವ ಅಲಂಕಾರ ತೆಗೆದುಹಾಕದಿರುವ ಪ್ರತಿಜ್ಞೆ ಮಾಡಿಸಿದ್ದರು.  ಇದೀಗ ಅದೇ ಕಾರ್ಯ್ರಮದ ಬೃಹತ್ ರೂಪದಲ್ಲಿ ಈ ಪ್ರತಿಜ್ಞಾ ಕಾರ್ಯ ನಡೆದಿದ್ದು ಪಾಲ್ಗೊಂಡ ಎಲ್ಲರಿಗೂ ಸೀರೆ, ರವಿಕೆ, ಕುಂಕುಮ, ಹೂ ನೀಡಲಾಯಿತು. ಆರಂಭದಲ್ಲಿ ಮುತ್ತೈದೆಯರು ಚಂಡಿಕಾಯಾಗ ನೆರವೇರಿಸಿದರು. ಅನ್ನಪೂರ್ಣೇಶ್ವರಿ ದೇವಿ ಸನ್ನಿಧಿಯಲ್ಲಿ ಪ್ರತಿಜ್ಞಾ ಕಾರ್ಯ ನಡೆಯಿತು.  ಬಳಿಕ ದೇವಸ್ಥಾನದ ಬೆಳ್ಳಿರಥದಲ್ಲಿ ಅನ್ನಪೂರ್ಣೇಶ್ವರಿಯನ್ನು ಕುಳ್ಳಿರಿಸಿ ದೇವಸ್ಥಾನದ ಸುತ್ತು 3 ಬಾರಿ ರಥವನ್ನು ಎಳೆಯಲಾಯಿತು.

 

Post Comments (+)