ಶನಿವಾರ, ನವೆಂಬರ್ 23, 2019
23 °C

ವಿಧಾನಸಭಾ ಚುನಾವಣೆಗೆ ಸಕಲ ಸಿದ್ಧತೆ

Published:
Updated:

ಚನ್ನಗಿರಿ: ಮೇ 5ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಎಚ್.ಎಂ. ರೇವಣಸಿದ್ದಪ್ಪ ಹೇಳಿದರು.ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಅವರು ಚುನಾವಣೆ ಸಿದ್ಧತೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ನಲ್ಲೂರು ಗ್ರಾಮದಲ್ಲಿ ಒಂದು ಹೆಚ್ಚುವರಿ ಮತಗಟ್ಟೆ ಸೇರಿ 233 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಈ ಕ್ಷೇತ್ರದಲ್ಲಿ 62 ಸೂಕ್ಷ್ಮ ಹಾಗೂ 65 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಇದುವರೆಗೆ  ಹೊಸದಾಗಿ 3,590 ಮತದಾರರು ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ. ಇನ್ನು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಣಿ ಮಾಡಿಸಲು ಎರಡು ದಿನ ಮಾತ್ರ ಉಳಿದಿದೆ.ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈಗಾಗಲೇ ಜಾಗೃತಿ ಆಂದೋಲನಾ ಕಾರ್ಯಕ್ರಮಗಳನ್ನು ಆಯಾ ಇಲಾಖೆಯ ಮುಖ್ಯಸ್ಥರು ಮಾಡಿದ್ದಾರೆ ಎಂದರು.ಈ ಬಾರಿಯ ಚುನಾವಣೆಯಲ್ಲಿ ಶೇ. 100ಕ್ಕೆ 100ರಷ್ಟು ಪಾರದರ್ಶಕವಾಗಿ  ನಡೆಸಲು ಕಟ್ಟುನಿಟ್ಟಿನ ಕ್ರಮ್ನ ಕೈಗೊಳ್ಳಲಾಗುವುದು. ಚುನಾವಣಾ ಅಕ್ರಮ ನಡೆದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.  ಚುನಾವಣಾ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ಕರೆದುಕೊಂಡು ಹೋಗಲು 33 ಕೆಎಸ್‌ಆರ್‌ಟಿಸಿ ಬಸ್ ಹಾಗೂ 21 ಜೀಪ್‌ಗಳನ್ನು ಬಳಸಿಕೊಳ್ಳಲಾಗುತ್ತದೆ.

ಶಾಂತಿ ಕಾಪಾಡಲು 3 ತುಕಡಿ ಅರೆ ಹಾಗೂ ಮಿಲಿಟರಿ ಪಡೆಗಳು ಸೇರಿ 400 ಪೊಲೀಸರು ಕಾರ್ಯ ನಿರ್ವಹಿಸಲಿದ್ದಾರೆ. ಚುನಾವಣಾ ಅಧಿಕಾರಿಯಾಗಿ ಸಹಕಾರ ಸಂಘಗಳ ಉಪ ನಿಬಂಧಕ ಗುರುಸ್ವಾಮಿ ಅವರು ಇನ್ನೆರಡು ದಿನಗಳಲ್ಲಿ ಆಗಮಿಸಲಿದ್ದಾರೆ. ಮಾಹಿತಿಗಾಗಿ ಮೊ: 94488 62824ಗೆ ಕರೆ ಮಾಡಬಹುದು.

ಪ್ರತಿಕ್ರಿಯಿಸಿ (+)