ಗುರುವಾರ , ಮೇ 6, 2021
24 °C

ವಿಧಾನಸಭೆಯಲ್ಲಿ ಕಾವೇರಿ ಗದ್ದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರಾಜ್ಯಪಾಲರ ಭಾಷಣದಲ್ಲಿ ಕಾವೇರಿ ಐತೀರ್ಪು ಒಪ್ಪಿರುವ ಮುನ್ಸೂಚನೆ ನೀಡಿದ್ದು, ಅದನ್ನು ತಕ್ಷಣ ತಿದ್ದುಪಡಿ ಮೂಲಕ ಸರಿಪಡಿಸಬೇಕು' ಎಂದು ಪ್ರತಿಪಕ್ಷಗಳ ಸದಸ್ಯರು ಮಂಗಳವಾರ ಪಟ್ಟುಹಿಡಿದ ಕಾರಣ ವಿಧಾನಸಭೆಯಲ್ಲಿ ಕೆಲಕಾಲ ಕೋಲಾಹಲ, ಗದ್ದಲ ಉಂಟಾಯಿತು.ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮಂಡನೆಗೂ ಮುನ್ನ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ `ಕಾವೇರಿ ವಿಷಯದಲ್ಲಿ ದೊಡ್ಡ ಪ್ರಮಾದ ಆಗಿದ್ದು, ಅದನ್ನು ಸರಿಪಡಿಸಬೇಕು' ಎಂದು ಆಗ್ರಹಿಸಿದರು. ಅಧಿಕೃತ ಕಲಾಪದ ಮೊದಲ ದಿನವೇ ಕುಮಾರಸ್ವಾಮಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದರು.“ರಾಜ್ಯಪಾಲರು ಸೋಮವಾರ ಮಾಡಿದ ಭಾಷಣದಲ್ಲಿ, `ಕಾವೇರಿ ಐತೀರ್ಪಿಗೆ ಅನುಸಾರವಾಗಿ ಕಾವೇರಿ ಜಲಾನಯನ ಪ್ರದೇಶದ ಬಾಕಿ ಇರುವ ವಿಸ್ತರಣಾ, ನವೀಕರಣ ಮತ್ತು ಆಧುನೀಕರಣ ಯೋಜನೆಗಳಿಗೆ ಭಾರತ ಸರ್ಕಾರದ ಅನುಮೋದನೆ ಕೋರಲಾಗುವುದು' ಎಂದು ಹೇಳಿದ್ದಾರೆ. ಈ ವಾಕ್ಯ ಒಂದು ರೀತಿ ಐತೀರ್ಪು ಒಪ್ಪಿರುವ ಸಂದೇಶ ನೀಡುತ್ತದೆ. ತಮಿಳುನಾಡು ಸರ್ಕಾರ ಇದನ್ನು ಅಸ್ತ್ರ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಈ ಕುರಿತು ಹೆಚ್ಚು ಚರ್ಚೆ ಮಾಡದೆ, ನಿಯಮ 21ರ ಪ್ರಕಾರ ತಿದ್ದುಪಡಿ ಮಾಡಬೇಕು'' ಎಂದು ಕುಮಾರಸ್ವಾಮಿ ಆಗ್ರಹಪಡಿಸಿದರು.`ಐತೀರ್ಪಿನ ಅನುಸಾರ...' ಎಂದರೆ ಏನರ್ಥ? ಐತೀರ್ಪು ವಿರೋಧಿಸಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಎರಡು ವಿಶೇಷ ಮೇಲ್ಮನವಿಗಳನ್ನು ಸಲ್ಲಿಸಿದೆ. ಈ ಸಂದರ್ಭದಲ್ಲಿ ಅದನ್ನು ಒಪ್ಪುವಂತಹ ಭಾಷಣ ಮಾಡಿರುವುದು ಸರಿಯೇ? ಇದನ್ನು ಸರ್ಕಾರವೇ ಸಿದ್ಧಪಡಿಸುತ್ತದೆ. ಸಂಪುಟ ಸಭೆಯಲ್ಲೂ ಚರ್ಚೆ ನಡೆದಿರುತ್ತದೆ. ಇಷ್ಟರ ನಡುವೆಯೂ ರಾಜ್ಯಕ್ಕೆ ಮಾರಕ ಆಗುವ ರೀತಿಯಲ್ಲಿ ಭಾಷಣ ಸಿದ್ಧಪಡಿಸಿರುವುದು ಸರಿಯಲ್ಲ' ಎಂದರು.`ಈ ವಿಷಯದಲ್ಲಿ ರಾಜ್ಯ ಸರ್ಕಾರ ಪ್ರತಿಷ್ಠೆ ತೋರಬಾರದು. ಐತೀರ್ಪಿನ ಅನುಸಾರ ಎನ್ನುವ ಪದಗಳನ್ನು ಭಾಷಣದಿಂದ ತೆಗೆಯಬೇಕು. ಈ ವಿಷಯ ಮಾಧ್ಯಮಗಳ ಮೂಲಕ ತಮಿಳುನಾಡಿಗೆ ಗೊತ್ತಾದರೆ ಸುಪ್ರೀಂಕೋರ್ಟ್‌ನಲ್ಲಿರುವ ರಾಜ್ಯದ ಪ್ರಕರಣಗಳ ಗತಿ ಏನಾಗುತ್ತದೆ' ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.