ಸೋಮವಾರ, ಡಿಸೆಂಬರ್ 9, 2019
17 °C

ವಿಧಾನಸಭೆಯೊಳಗೆ ಜಾತಿ ಸ್ಥಿತ್ಯಂತರ

Published:
Updated:

ಬಾರಿಯ ವಿಧಾನಸಭಾ ಚುನಾವಣೆಯ ಬಹುಮುಖ್ಯ ವಿಶೇಷಗಳಲ್ಲೊಂದು ಕಾಂಗ್ರೆಸ್ ಚುನಾವಣಾ ತಂತ್ರವಾಗಿ ಬಳಸಿದ ವಿಶಿಷ್ಟ ಸಾಮಾಜಿಕ ಸಂಯೋಜನೆ. 1978ರ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಲಿಂಗಾಯತ ಮತ್ತು ಒಕ್ಕಲಿಗ ಜಾತಿಗಳಿಗೆ ಸೇರಿದ ಮುಂಚೂಣಿ ನಾಯಕರಿಲ್ಲದೆ ಚುನಾವಣೆಯನ್ನು ಎದುರಿಸಿತು. ಮುಖ್ಯಮಂತ್ರಿ ಅಭ್ಯರ್ಥಿಯೆಂದು ಯಾರನ್ನೂ ಬಿಂಬಿಸದೆಯೇ ಇತರ ಹಿಂದುಳಿದ ಜಾತಿಗಳು ಮತ್ತು ಪರಿಶಿಷ್ಟ ಜಾತಿಗೆ ಸೇರಿದ ನಾಯಕರಿಗೆ ಚುನಾವಣೆಯನ್ನು ಗೆಲ್ಲುವ ಜವಾಬ್ದಾರಿಯನ್ನು ಕಾಂಗ್ರೆಸ್ ನೀಡಿತ್ತು.



ಕರ್ನಾಟಕ ರಾಜಕಾರಣವನ್ನು ಸುದೀರ್ಘ ಕಾಲ ಅಧ್ಯಯನ ಮಾಡಿರುವ ಪ್ರೊ.ಜೇಮ್ಸ ಮೇನರ್ ಅವರ ಅಭಿಪ್ರಾಯದಂತೆ ಇದು ಭಿನ್ನ ಜಾತಿ, ವರ್ಗಗಳಿರುವ ಕಾಮನಬಿಲ್ಲಿನಂಥ ಸಂಯೋಜನೆ. ಇದೊಂದು ರೀತಿಯಲ್ಲಿ ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ತಂತ್ರವನ್ನು ಬದಲಿಸಿಕೊಂಡ ಬಗೆಯೂ ಹೌದು. ಈ ತಂತ್ರ ಯಶಸ್ವಿಯಾದುದರಿಂದ ಅದೀಗ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಿದೆ.

ಹಿಂದುಳಿದ ಜಾತಿಗಳನ್ನು ಪ್ರತಿನಿಧಿಸುವ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾರೆ. ರಾಜಕೀಯ ನಿರೀಕ್ಷಕರು ಕರ್ನಾಟಕದ ರಾಜಕಾರಣದ ಸಾಮಾಜಿಕ ನೆಲೆಗಳು ಬದಲಾಗುತ್ತಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವು ವಾದಗಳಂತೆ ಅಧಿಕಾರ ಬಲಾಢ್ಯ ಜಾತಿಗಳಿಂದ ಬಿಡಿಸಿಕೊಂಡು ಹಿಂದುಳಿದ ಜಾತಿಗಳಿಗೆ ದೊರೆತಿದೆ.



ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಈ ಸ್ಥಿತ್ಯಂತರ 2004ರ ವಿಧಾನಸಭಾ ಚುನಾವಣೆಗಳಲ್ಲೇ ಆರಂಭವಾಗಿತ್ತು. ಅಲ್ಲಿಂದೀಚೆಗೆ ಪ್ರತೀ ಚುನಾವಣೆಯಲ್ಲಿಯೂ ವಿಧಾನ ಸಭೆಯಲ್ಲಿ ಎರಡು ಬಲಾಢ್ಯ ಸಮುದಾಯಗಳಾದ ಲಿಂಗಾಯತರು ಮತ್ತು ಒಕ್ಕಲಿಗರ ಸಂಖ್ಯೆ ಕಡಿಮೆಯಾಗುತ್ತಲೇ ಬಂದಿದೆ.

ಕರ್ನಾಟಕದಲ್ಲಿ ಒಟ್ಟು ಜನಸಂಖ್ಯೆಯ ಶೇಕಡಾ 18ರಿಂದ 20ರಷ್ಟು ಲಿಂಗಾಯತರು ಹಾಗೂ ಶೇಕಡಾ 13ರಿಂದ 15ರಷ್ಟು ಪ್ರಮಾಣದಲ್ಲಿ ಒಕ್ಕಲಿಗರಿದ್ದಾರೆ. ಆದರೆ ವಿಧಾನಸಭೆಯಲ್ಲಿ ಈ ಎರಡೂ ಸಮುದಾಯಗಳಿಗೆ ಸೇರಿದ ಶಾಸಕರ ಸಂಖ್ಯೆ ಶೇಕಡಾ 55ರಿಂದ 60ರಷ್ಟಿರುತ್ತಿತ್ತು. 2004ರಲ್ಲಿ ಚುನಾವಣಾ ಫಲಿತಾಂಶಗಳಲ್ಲಿ ಈ ಸಂಖ್ಯೆಯಲ್ಲಿ ಮೊದಲ ಬಾರಿಗೆ ಕುಸಿತ ಕಂಡು ಬಂತು. ಈ ಎರಡೂ ಸಮುದಾಯಗಳಿಗೆ ಸೇರಿದ ಶಾಸಕರ ಸಂಖ್ಯೆ ಶೇಕಡಾ 50ಕ್ಕೆ (113 ಸ್ಥಾನಗಳು) ಇಳಿಯಿತು.

2008ರ ಹೊತ್ತಿಗೆ ಇದು ಮತ್ತಷ್ಟು ಇಳಿದು ಶೇಕಡಾ 49 (111 ಸ್ಥಾನಗಳು) ಆಯಿತು. 2013ರ ವಿಧಾನಸಭಾ ಚುನಾವಣೆಯಲ್ಲಿ ಈ ಸಂಖ್ಯೆ ಶೇಕಡಾ 46ಕ್ಕೆ ಅಂದರೆ 103 ಸ್ಥಾನಗಳಿಗೆ ಕುಸಿದಿದೆ. ಇದೊಂದು ಗಮನಾರ್ಹ ಬೆಳವಣಿಗೆ ಏಕೆಂದರೆ 1978ರ ನಂತರ ಇದೇ ಮೊದಲ ಬಾರಿಗೆ ಸ್ಪಷ್ಟವಾಗಿ ವಿಧಾನಸಭೆಯಲ್ಲಿ ಈ ಎರಡೂ ಸಮುದಾಯಗಳ ಒಟ್ಟು ಬಲ ಶೇಕಡಾ 50ಕ್ಕಿಂತ ಕಡಿಮೆಯಾಗಿದೆ.



2008ರ ವಿಧಾನಸಭಾ ಚುನಾವವಣೆಯ ಫಲಿತಾಂಶಗಳು ಲಿಂಗಾಯತ ಶಕ್ತಿಯ ದ್ಯೋತಕ ಎಂಬ ನಂಬಿಕೆ ವ್ಯಾಪಕವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದಕ್ಕೆ ಲಿಂಗಾಯತರ ಬೆಂಬಲವೇ ಕಾರಣ ಎನ್ನಲಾಗುತ್ತದೆ. ವಾಸ್ತವದಲ್ಲಿ ಈ ಚುನಾವಣೆಯಲ್ಲಿಯೂ ವಿಧಾನಸಭೆಯೊಳಗಿನ ಲಿಂಗಾಯತರ ಪ್ರಾತಿನಿಧ್ಯದ ಪ್ರಮಾಣ ಕುಸಿದಿತ್ತು. 1952ರಿಂದ 1999ರ ತನಕವೂ ಲಿಂಗಾಯತ ಸಮುದಾಯಕ್ಕೆ ವಿಧಾನಸಭೆಯೊಳಗೆ ಸರಾಸರಿ ಶೇಕಡಾ 32ರಷ್ಟು ಪ್ರಾತಿನಿಧ್ಯವಿದ್ದದ್ದು 2008ರ ಚುನಾವಣೆಯಲ್ಲಿ ಶೇಕಡಾ 26ಕ್ಕೆ ಕುಸಿದಿತ್ತು.



ವಿಧಾನಸಭೆಯಲ್ಲಿ ಇತರ ಹಿಂದುಳಿದ ಜಾತಿಗಳ ಪ್ರಾತಿನಿಧ್ಯ ಹೆಚ್ಚಲು ಆರಂಭವಾದದ್ದು 2004ರಲ್ಲಿ. ಅಲ್ಲಿಯ ತನಕ 1972 ಮತ್ತು 1978ರಲ್ಲಿ ಹೊರತು ಪಡಿಸಿದರೆ ವಿಧಾನಸಭೆಯಲ್ಲಿ ಹಿಂದುಳಿದ ಜಾತಿಗಳಿಗೆ ಇದ್ದ ಪ್ರಾತಿನಿಧ್ಯದ ಪ್ರಮಾಣ ಸರಾಸರಿ ಶೇಕಡಾ 12ರಿಂದ 13. 1972 ಮತ್ತು 1978ರಲ್ಲಿ ಪರಿಸ್ಥಿತಿ ಭಿನ್ನವಾದುದಕ್ಕೆ ಮುಖ್ಯ ಕಾರಣ ದೇವರಾಜ ಅರಸು ಅವರು ಹಿಂದುಳಿದ ಜಾತಿಗಳಿಗೆ ಒತ್ತು ಕೊಡುವ ರಾಜಕೀಯ ತಂತ್ರವನ್ನು ಅನುಸರಿಸಿದ್ದು.

2004ರಲ್ಲಿ ವಿಧಾನಸಭೆಯೊಳಗೆ ಹಿಂದುಳಿದ ಜಾತಿಗಳ ಪ್ರಾತಿನಿಧ್ಯದ ಪ್ರಮಾಣ ಶೇಕಡಾ 20ರಷ್ಟು ಮೇಲಕ್ಕೆ ಏರಿತು. ನಂತರ ಇದು ಸ್ವಲ್ಪ ಮಟ್ಟಿಗೆ ಕಡಿಮೆಯಾದುದನ್ನು ಕಾಣಬಹುದಾದರೂ ಅದು 2004ಕ್ಕಿಂತ ಹಿಂದೆ ಇದ್ದ ಪ್ರಮಾಣಕ್ಕಿಂತಲೂ ಹೆಚ್ಚೇ ಇತ್ತು. 2008ರ ವಿಧಾನಸಭೆಯಲ್ಲಿ ಹಿಂದುಳಿದ ಜಾತಿಗಳ ಪ್ರಾತಿನಿಧ್ಯ ಪ್ರಮಾಣ ಶೇಕಡಾ 15.6. ಈ ಬಾರಿ ಅದು ಶೇಕಡಾ 16.14ಕ್ಕೆ ಏರಿದೆ. ಕರ್ನಾಟಕದ ಒಟ್ಟು ಜನಸಂಖ್ಯೆಯ ಶೇಕಡಾ 33ರಷ್ಟು ಹಿಂದುಳಿದ ಜಾತಿಗಳಿಗೆ ಸೇರಿದವರಿದ್ದಾರೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡರೆ ಈಗ ವಿಧಾನಸಭೆಯಲ್ಲಿ ದೊರೆತಿರುವ ಪ್ರಾತಿನಿಧ್ಯ ಬಹಳ ಕಡಿಮೆಯೇ.



ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಗೆ ವಿಧಾನಸಭೆಯಲ್ಲಿರುವ  ಪ್ರಾತಿನಿಧ್ಯದ ಪ್ರಮಾಣ ಈಗ ಶೇಕಡಾ 46ಕ್ಕೆ ಕುಸಿದಿದೆ ಎಂಬುದೇನೋ ನಿಜವೇ. ಆದರೆ ಒಟ್ಟು ಜನಸಂಖ್ಯೆಯಲ್ಲಿ ಈ ಎರಡೂ ಸಮುದಾಯಗಳ ಪ್ರಮಾಣ ಶೇಕಡಾ 30ರಿಂದ 35. ಅಂದರೆ ಈಗಲೂ ಈ ಎರಡೂ ಸಮುದಾಯಗಳಿಗೇ ಹೆಚ್ಚಿನ ಪ್ರಾತಿನಿಧ್ಯವಿದೆ.

ಒಟ್ಟಿನಲ್ಲಿ ಕಳೆದ ದಶಕದಷ್ಟು ಅಲ್ಲದೇ ಹೋದರೂ ಅಧಿಕಾರದ ಪಡಸಾಲೆಯಲ್ಲಿ ಈ ಎರಡೂ ಸಮುದಾಯಗಳ ಪ್ರಾಬಲ್ಯ ಮುಂದುವರಿದಿದೆ. ಇದೇ ವೇಳೆ ಹಿಂದುಳಿದ ಜಾತಿಗಳ ಜನಸಂಖ್ಯೆಗೆ ಹೋಲಿಸಿದರೆ ಬಹಳ ಕಡಿಮೆ ಪ್ರಮಾಣದ ಪ್ರಾತಿನಿಧ್ಯವಷ್ಟೇ ದೊರೆತಿದ್ದರೂ ಪ್ರಾಬಲ್ಯ ಹಿಂದಿಗಿಂತ ಹೆಚ್ಚಳ ಆಗಿದೆ. ಈ ಬದಲಾವಣೆಯ ಹೊತ್ತಿನಲ್ಲೇ ಕ್ಷೇತ್ರ ಪುನರ್‌ವಿಂಗಡಣೆಯ ಪರಿಣಾಮವಾಗಿ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳಿಗೆ ಮೀಸಲಾಗಿರುವ ಸ್ಥಾನಗಳ ಸಂಖ್ಯೆಯೂ 35ರಿಂದ 51ಕ್ಕೆ ಏರಿದೆ.

(ಲೇಖಕರು ಅಜೀಮ್ ಪ್ರೇಂಜಿ ವಿಶ್ವವಿದ್ಯಾಲಯದ ಕಾನೂನು, ಆಡಳಿತ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಬೋಧಕ-ಸಂಶೋಧಕರು)

ಪ್ರತಿಕ್ರಿಯಿಸಿ (+)