ವಿಧಾನಸಭೆ ವಿಸರ್ಜನೆಗೆ ಯಡಿಯೂರಪ್ಪ ಒತ್ತಾಯ

7

ವಿಧಾನಸಭೆ ವಿಸರ್ಜನೆಗೆ ಯಡಿಯೂರಪ್ಪ ಒತ್ತಾಯ

Published:
Updated:

ಹುಬ್ಬಳ್ಳಿ: `ರಾಜ್ಯದಲ್ಲಿ ಬಿಜೆಪಿ- ಕೆಜೆಪಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದೆ' ಎಂದು ಪುನರುಚ್ಚರಿಸಿರುವ ಕೆಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, `ಈ ಸರ್ಕಾರ ಕೋಮಾ ಸ್ಥಿತಿಯಲ್ಲಿದೆ. ನಾನಾಗಿ ಸರ್ಕಾರ ಬೀಳಿಸಲು ಹೋಗಲ್ಲ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಕ್ಷಣ ವಿಧಾನಸಭೆ ವಿಸರ್ಜಿಸಬೇಕು' ಎಂದು ಗುಡುಗಿದರು.ನಗರದಲ್ಲಿ ಭಾನುವಾರ  ಸುದ್ದಿಗಾರರ ಜೊತೆ ಮಾತನಾಡಿದ ಅವರು, `ಮೂರು ತಿಂಗಳ ನಂತರವಂತೂ ಚುನಾವಣೆಗೆ ಹೋಗಲೇಬೇಕು. ಅಲ್ಲಿಯವರೆಗೆ ಈ ಸ್ಥಿತಿಯಲ್ಲಿ ಸರ್ಕಾರ ಮುಂದುವರಿಸಿ ಸಮಯ ವ್ಯರ್ಥ ಮಾಡುವ ಬದಲು, ಜನರ ಬಳಿಗೆ ತೆರಳೋಣ. ಅವರೇ ಹೊಸ ಸರ್ಕಾರ ಆಯ್ಕೆ ಮಾಡಲಿ ಎನ್ನುವುದು ಮುಖ್ಯಮಂತ್ರಿಗೆ ನನ್ನ ಕಿವಿಮಾತು' ಎಂದರು.`ಸಮ್ಮಿಶ್ರ ಸರ್ಕಾರ ಎಂದ ಮೇಲೆ ನೀವಾಗಿ ಬೆಂಬಲ ಹಿಂತೆಗೆದುಕೊಳ್ಳಬಹುದಲ್ಲ' ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, `ಆ ಕೆಲಸ ನಾನು ಮಾಡಲ್ಲ. ಮುಖ್ಯಮಂತ್ರಿ ತಮ್ಮ ಜವಾಬ್ದಾರಿ ನಿಭಾಯಿಸಬೇಕು. ಅದು ಸಾಧ್ಯವಾಗದಿದ್ದರೆ ಆ ಸ್ಥಾನದಲ್ಲಿ ಮುಂದುವರಿಯಬಾರದು' ಎಂದರು.

`ವಿಧಾನಸೌಧದಲ್ಲಿ ಸದ್ಯ ಹೇಳುವವರು, ಕೇಳುವವರೇ ಇಲ್ಲ. ಸಚಿವರುಗಳು ಕಾಣಸಿಗುವುದೇ ಅಪರೂಪವಾಗಿದೆ. ಯಾರೂ ಆಸಕ್ತಿಯಿಂದ ಕೆಲಸ ಮಾಡುತ್ತಿಲ್ಲ. ಸರ್ಕಾರ ಗೊಂದಲದ ಗೂಡಾಗಿದೆ. ಯಾವುದೇ ಪ್ರಮುಖ ವಿಧೇಯಕಗಳ ಬಗ್ಗೆ ಚರ್ಚೆ ನಡೆಯದ ಬೆಳಗಾವಿ ಅಧಿವೇಶನವು ಸರ್ಕಾರ ಬದುಕಿದೆ ಎಂದು ತೋರಿಸಿಕೊಡಲಷ್ಟೇ ನಡೆದಿದೆ' ಎಂದು ಟೀಕಿಸಿದರು.`ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ. ಬೆಳಗಾವಿ ಅಧಿವೇಶನದಿಂದ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಕೊಡುಗೆ ಸಿಗಬಹುದು ಎಂದು ನಿರೀಕ್ಷಿಸಿದ್ದ ಈ ಭಾಗದ ಜನರಿಗೆ ಭಾರಿ  ನಿರಾಶೆಯಾಗಿದೆ' ಎಂದರು.`ನಾಲ್ಕು ತಿಂಗಳಿನಿಂದ ಅಂಗವಿಕಲ ವೇತನ, ವೃದ್ಧಾಪ್ಯ ವೇತನ, ವಿಧವಾ ವೇತನ ವಿತರಣೆ ಸಂಪೂರ್ಣ ಸ್ಥಗಿತಗೊಂಡಿದೆ. 60 ಸಾವಿರ ಹೆಣ್ಣು ಮಕ್ಕಳಿಗೆ ಭಾಗಲಕ್ಷ್ಮೀ ಬಾಂಡ್ ವಿತರಣೆಗೆ ಬಾಕಿ ಇದೆ. ಮೂರು ತಿಂಗಳಿನಿಂದ ಹಾಲು ಉತ್ಪಾದಕರಿಗೆ ಎರಡು ರೂಪಾಯಿ ಪ್ರೋತ್ಸಾಹ ಧನ ವಿತರಣೆ ಆಗಿಲ್ಲ.

ವಾರದೊಳಗೆ ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳದಿದ್ದರೆ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಪಕ್ಷ ಹೋರಾಟ ಹಮ್ಮಿಕೊಳ್ಳಲಿದೆ. ಫಲಾನುಭವಿಗಳೇ ಪ್ರತಿಭಟನೆ ನಡೆಸಲಿದ್ದು, ಕೆಜೆಪಿ ಅದರ ನೇತೃತ್ವ ವಹಿಸಲಿದೆ' ಎಂದು ಎಚ್ಚರಿಕೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry