`ವಿಧಾನಸಭೆ ವಿಸರ್ಜನೆ ಇಲ್ಲ'

7

`ವಿಧಾನಸಭೆ ವಿಸರ್ಜನೆ ಇಲ್ಲ'

Published:
Updated:

ನವದೆಹಲಿ: `ನನ್ನ ಮೇಲೆ ಸಚಿವರು ಮತ್ತು ಶಾಸಕರು ವಿಶ್ವಾಸ ಹೊಂದಿರುವವರೆಗೂ ಅಧಿಕಾರ ಬಿಡುವ ಅಥವಾ ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ್ದಾರೆ.`ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಅಧಿಕಾರ ವಹಿಸಿಕೊಂಡು ಐದು ತಿಂಗಳಾಗಿದೆ. ಈ ಅವಧಿಯಲ್ಲಿ ಯಾವೊಬ್ಬ ಸಚಿವರು ಅಥವಾ ಶಾಸಕರು ನನ್ನ ಮೇಲೆ ವಿಶ್ವಾಸವಿಲ್ಲ ಎಂಬ ಮಾತು ಹೇಳಿಲ್ಲ. ಹೀಗಿರುವಾಗ ನಾನ್ಯಾಕೆ ರಾಜೀನಾಮೆ ನೀಡಿ ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಲಿ' ಎಂದು ಕೇಳಿದರು.ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ಆಗಮಿಸಿದ ಮುಖ್ಯಮಂತ್ರಿ `ಪ್ರಜಾವಾಣಿ' ಜತೆ ಮಾತನಾಡಿದರು. `ಸಚಿವರು ಮತ್ತು ಶಾಸಕರು ನಿಮ್ಮ ಮೇಲೆ ವಿಶ್ವಾಸ ಇಲ್ಲವೆಂದರೆ ಅಧಿಕಾರ ತ್ಯಜಿಸುವಿರಾ?' ಎಂಬ ಪ್ರಶ್ನೆಗೆ, `ಆ ಸಂದರ್ಭ ಬರಲಿ ಆಮೇಲೆ ನೋಡೋಣ' ಎಂದರು.`ಈಚೆಗೆ ಮುಗಿದ ಬೆಳಗಾವಿ ವಿಧಾನಮಂಡಲ ಅಧಿವೇಶನವನ್ನು ಸರ್ಕಾರ ಸಮರ್ಥವಾಗಿ ಎದುರಿಸಿದೆ. ಬಾಕಿ ಉಳಿದಿದ್ದ ಹಲವು ಮಸೂದೆಗಳನ್ನು ಅಂಗೀಕರಿಸಿದೆ. ಮಸೂದೆ ಅಂಗೀಕಾರವು ಸರ್ಕಾರಕ್ಕಿರುವ ಬೆಂಬಲವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ' ಎಂದು ಮುಖ್ಯಮಂತ್ರಿ ಬಲವಾಗಿ ಪ್ರತಿಪಾದಿಸಿದರು.ರಾಜ್ಯ ಸರ್ಕಾರದ ಅಳಿವು- ಉಳಿವು ಕುರಿತು ಜನವರಿ 4ರಂದು ಅಂತಿಮ ತೀರ್ಮಾನ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಮತ್ತು ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ ಹೇಳಿರುವ ಕುರಿತು ಪ್ರತಿಕ್ರಿಯಿಸಲು ಜಗದೀಶ ಶೆಟ್ಟರ್ ನಿರಾಕರಿಸಿದರು.`ಎಲ್ಲದಕ್ಕೂ ಪ್ರತಿಕ್ರಿಯಿಸುತ್ತಾ ಹೋದರೆ ಸರ್ಕಾರ ನಡೆಸುವುದು ಕಷ್ಟ` ಎಂದು ಅವರು ಇದೇ ವೇಳೆ ಅಭಿಪ್ರಾಯಪಟ್ಟರು.`ಶೆಟ್ಟರ್ ಸರ್ಕಾರ ಬೊಂಬೆಯಾಟದ ಸರ್ಕಾರ. ಈ ಸರ್ಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ಮಂಡಿಸಿದರೆ ಜೆಡಿಎಸ್ ಬೆಂಬಲಿಸಲಿದೆ' ಎಂಬ ದೇವೇಗೌಡರ ಹೇಳಿಕೆ ಬಗೆಗೂ ಮುಖ್ಯಮಂತ್ರಿ ಏನೂ ಹೇಳಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry